ಹುಬ್ಬಳ್ಳಿ-ಧಾರವಾಡ ಸುದ್ದಿ
ಆರು ತಿಂಗಳಲ್ಲಿ ಇತಿಹಾಸದ ಪುಟಕ್ಕೆ ಡಿಸಿಸಿ ಬ್ಯಾಂಕ್!

ಆರು ತಿಂಗಳಲ್ಲಿ ಇತಿಹಾಸದ ಪುಟಕ್ಕೆ ಡಿಸಿಸಿ ಬ್ಯಾಂಕ್!

ಅಪೆಕ್ಸ್‌ನಲ್ಲಿ ವಿಲೀನ ಪ್ರಕ್ರಿಯೆಗೆ ಸಹಕಾರ ವಲಯದಲ್ಲಿ ಪರ-ವಿರೋಧ

ಧಾರವಾಡ: ಸದ್ಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯವರ್ತಿ ಬ್ಯಾಂಕುಗಳನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲು ಸರಕಾರ ಮುಂದಾಗಿದ್ದು, ಈ ಮೂಲಕ ಎರಡು ಹಂತದಲ್ಲಿ ಮಾತ್ರ ಸಹಕಾರ ವ್ಯವಸ್ಥೆ ಮುಂದುವರೆಸಲು ತೀರ್ಮಾನಿಸಿದಂತಾಗಿದೆ.
ಗ್ರಾಮಗಳ ಮಟ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸದ್ಯ ಜಿಲ್ಲಾ ಮಟ್ಟದಲ್ಲಿರುವ ಮಧ್ಯವರ್ತಿ ಬ್ಯಾಂಕುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳು ಮತ್ತು ಅಪೆಕ್ಸ್ ಬ್ಯಾಂಕು ಇದ್ದು, ಇಲ್ಲಿ ಡಿಸಿಸಿ ಬ್ಯಾಂಕಿನ ನಿರ್ವಹಣೆಗಾಗಿ ಸೊಸೈಟಿಗಳಿಂದ ಹೆಚ್ಚುವರಿಯಾಗಿ ಶೇ.೧ ರಷ್ಟು ನಿರ್ವಹಣಾ ವೆಚ್ಚವನ್ನು ಪಡೆಯಲಾಗುತ್ತಿದೆ.
ಇದನ್ನು ತಪ್ಪಿಸಲು ಮತ್ತು ಮಧ್ಯವರ್ತಿ ಕೆಲಸ ಮಾಡುವ ಡಿಸಿಸಿ ಬ್ಯಾಂಕ್ ಸಮಾಪ್ತಿಗೊಳಿಸಲು ವಿಲೀನ ಪ್ರಕ್ರಿಯೆಗೆ ಸರಕಾರ ಮುಂದಾಗಿದೆ. ಇದರ ಪ್ರಕಾರ, ಮುಂದೆ ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಸೊಸೈಟಿಗಳು ಮತ್ತು ಅಪೆಕ್ಸ್ ಬ್ಯಾಂಕುಗಳು ಮಾತ್ರ ಇರಲಿವೆ. ಡಿಸಿಸಿ ಬ್ಯಾಂಕಿನ ಶಾಖೆಗಳು ನೇರವಾಗಿ ಅಪೆಕ್ಸ್ ಬ್ಯಾಂಕ್ ವ್ಯಾಪ್ತಿಗೊಳಪಡಲಿವೆ. ಇದರಿಂದಾಗಿ ಗ್ರಾಮ ಮಟ್ಟದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ರಾಜ್ಯಮಟ್ಟದಲ್ಲಿ ಅಪೆಕ್ಸ್ ಬ್ಯಾಂಕ್ ಮಾತ್ರ ಉಳಿಯಲಿವೆ.
ಈ ಮೂಲಕ ರಾಜ್ಯ ಸರಕಾರದಿಂದ ಸಾಲಮನ್ನಾ ಸೇರಿದಂತೆ ಹಲವಾರು ಯೋಜನೆಗಳಡಿ ಸೊಸೈಟಿಗಳಿಗೆ ಜಾರಿಯಾಗುವ ಅನುದಾನದ ಹಣವನ್ನು ಡಿಸಿಸಿ ಬ್ಯಾಂಕುಗಳು ಮಧ್ಯದಲ್ಲಿ ಹಿಡಿದಿಡುವುದು ತಪ್ಪಲಿದೆ. ಡಿಸಿಸಿ ಬ್ಯಾಂಕನ್ನು ಅಪೆಕ್ಸ್ ಬ್ಯಾಂಕ್ ಜೊತೆಗೆ ವಿಲೀನ ಮಾಡುವುದು ಜಿಲ್ಲಾ ಮಟ್ಟದಲ್ಲಿ ಡಿಸಿಸಿ ಬ್ಯಾಂಕ್ ಹೆಸರಲ್ಲಿ ಮೆರೆದಾಡುವ ರಾಜಕಾರಣಿಗಳ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಭಾರೀ ಅವ್ಯವಹಾರದ ಆರೋಪ ಹೊತ್ತಿರುವ ಮಂಗಳೂರು, ಶಿವಮೊಗ್ಗ, ಬೆಳಗಾವಿ ಇನ್ನಿತರ ಡಿಸಿಸಿ ಬ್ಯಾಂಕುಗಳ ವಿರುದ್ಧ ಈಗಾಗಲೇ ಹಲವು ಹಂತಗಳಲ್ಲಿ ತನಿಖೆ ನಡೆಯುತ್ತಿದೆ.
ಬಹುಸಂಖ್ಯಾತ ಜನರ ಪಾಲಿಗೆ ಆಶಾಕಿರಣವಾಗಿದ್ದ ಸಹಕಾರ ವಲಯ ಇತ್ತೀಚಿನ ವರ್ಷಗಳಲ್ಲಿ ಲಾಭದಾಯಕ ವಲಯವಾಗಿ ಪರಿಣಮಿಸಿದೆ.ಅಲ್ಲದೇ, ಸ್ಥಳೀಯ ಮಟ್ಟದಲ್ಲಿ ರಾಜಕಾರಣ ಮಾಡುತ್ತ ಉನ್ನತ ಸ್ಥಾನಕ್ಕೇರಿದ ನಿರ್ದರ್ಶನಗಳು ಇವೆ. ಇನ್ನೊಂದೆಡೆ ಕೇಂದ್ರ ಸರಕಾರ ಸಹಕಾರ ಇಲಾಖೆಯನ್ನು ಸೃಜಿಸಿ ಇಡೀ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿರುವುದು ಈ ಬೆಳವಣಿಗೆಗೆ ಕಾರಣ.
ಒಟ್ಟಾರೆ ವಿಲೀನದಿಂದ ಸಹಕಾರ ಕ್ಷೇತ್ರದ ಅಧಿಕಾರಕ್ಕೆ ಕಡಿವಾಣ ಬೀಳುವ ಜೊತೆಗೆ ಅವ್ಯವಹಾರ ನಡೆಸುವುದನ್ನು ಸ್ಥಗಿತಗೊಳಿಸಲಿದೆ ಎನ್ನುತ್ತಾರೆ ಹಿರಿಯ ಸಹಕಾರಿಗಳು.
ಮುಂಬರುವ ದಿನಗಳಲ್ಲಿ ಅಪೆಕ್ಸ್ ಬ್ಯಾಂಕ್‌ಗೆ ಜಿಲ್ಲಾಮಟ್ಟದಿಂದ ಓರ್ವ ಸಹಕಾರಿಯನ್ನು ಆಯ್ಕೆ ಮಾಡುವ ಮೂಲಕ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಇನ್ನು ಆರು ತಿಂಗಳಲ್ಲಿ ಈ ವಿಲೀನ ಪ್ರಕ್ರಿಯೆ ಮುಗಿಯಲಿದೆ ಎನ್ನುವ ಮಾಹಿತಿಯಿದ್ದ, ಅಲ್ಲಿಗೆ ಡಿಸಿಸಿ ಬ್ಯಾಂಕ್ ಇತಿಹಾಸ ಸೇರಲಿವೆ. ಈ ಮೂಲಕ ಡಿಸಿಸಿ ಬ್ಯಾಂಕ್ ಹೆಸರಲ್ಲಿ ಕೆಲವರು ಮಾಡುತ್ತಿರುವ ಮೆರೆದಾಟ ಅಂತ್ಯವಾಗಲಿದೆ.

ಅಪೆಕ್ಸ್‌ನಲ್ಲಿ ಡಿಸಿಸಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಕೇರಳದಲ್ಲಿ ಯಾವ ರೀತಿ ಮಾಡಲಾಗಿದೆ ಎಂದು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಇನ್ನು 15 ದಿನಗಳೊಳಗೆ ಅದಿಕಾರಿಗಳು ವರದಿ ಸಲ್ಲಿಸಲಿದ್ದು, ವರದಿ ಪರಿಶೀಲಿಸಿ ಮುಂದಿನ ಪ್ರಕ್ರಿಯೆ ಜರುಗಿಸಲಾಗುವುದು.

ಎಸ್.ಟಿ.ಸೋಮಶೇಖರ
ಸಹಕಾರ ಸಚಿವರು.

ವಿಕೇಂದ್ರಿಕರಣ ಅಗತ್ಯ

ಆಡಳಿತಾತ್ಮಕ ದೃಷ್ಠಿಯಿಂದ ಎಲ್ಲ ವಲಯಗಳಲ್ಲಿ ವಿಕೇಂದ್ರಿಕರಣ ಅಗತ್ಯ. ವಿಕೇಂದ್ರಿಕರಣದಿಂದ ಸ್ಥಳೀಯ ಮಟ್ಟದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ಮತ್ತು ಸಕಾಲಕ್ಕೆ ಸೂಕ್ತ ಪರಿಹಾರ ಕೂಡ ಸಿಗಲಿದೆ. ಆದ್ದರಿಂದ ಅಪೆಕ್ಸ್‌ನಲ್ಲಿ ಡಿಸಿಸಿ ಬ್ಯಾಂಕುಗಳ ವಿಲೀನ ಸರಿಯಲ್ಲ.

ಜಿ.ಸಿ.ಸಾತಣ್ಣವರ
ನಿರ್ದೇಶಕರು, ಕೆಸಿಸಿ ಬ್ಯಾಂಕ್.

 

ವ್ಯವಸ್ಥೆ ಹಾಳು

ಸಹಕಾರಿ ಸಂಸ್ಥೆಗಳು ನೂರಾರು ವರ್ಷಗಳಿಂದ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತ ಬಂದಿವೆ. ಇದೀಗ ಜಿಲ್ಲಾ ಮಟ್ಟದಲ್ಲಿನ ಡಿಸಿಸಿ ಬ್ಯಾಂಕುಗಳನ್ನು ಅಪೆಕ್ಸ್‌ನಲ್ಲಿ ವಿಲೀನ ಮಾಡುವುದರಿಂದ ಇಡೀ ಸಹಕಾರ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳಲಿದೆ. ಸಹಕಾರ ಸಂಸ್ಥೆಗಳ ಜಾಗೆಯನ್ನು ಖಾಸಗಿ ಸಂಸ್ಥೆಗಳು ಆಕ್ರಮಿಸಲಿವೆ. ಆಗ ಆ ಸಂಸ್ಥೆಗಳ ಸವಾಲು ಎದುರಿಸದೇ ಸಹಕಾರ ಸಂಸ್ಥೆಗಳು ಬಾಗಿಲು ಮುಚ್ಚಲಿವೆ. ಈ ತೀರ್ಮಾನದ ಹಿಂದೆ ಕೇಂದ್ರದಲ್ಲಿನ ಬಿಜೆಪಿ ಸರಕಾರದ ಖಾಸಗೀಕರಣದ ಹುನ್ನಾರ ಅಡಗಿದೆ.

ಪಿ.ಎಚ್.ನೀರಲಕೇರಿ
ಕೆಪಿಸಿಸಿ ಮಾಧ್ಯಮ ವಿಶ್ಲೇಷಕರು.

 

administrator

Related Articles

Leave a Reply

Your email address will not be published. Required fields are marked *