ಜೆಎಸ್‌ಎಸ್‌ಗೆ ಎಸ್.ಜಿ.ಬಿರಾದಾರ ನೂತನ ಆಡಳಿತಾಧಿಕಾರಿ
ಧಾರವಾಡ: ಮನುಷ್ಯನ ಕರ್ತವ್ಯದ ಜೊತೆಗೆ ಭಾವನಾತ್ಮಕ ಸಂಬಂಧಗಳಿದ್ದರೆ ಹೆಚ್ಚು ಮೌಲ್ಯಯುತವಾಗುತ್ತವೆ ಎಂದು ಸುತ್ತೂರು ಸಂಸ್ಥಾನಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.
ಇಲ್ಲಿನ ಕೆಲಗೇರಿ ಬಳಿಯ ಜೆ.ಎಸ್.ಮಹಾವಿದ್ಯಾಪೀಠದ ಸಭಾಭವನದಲ್ಲಿ ಶುಕ್ರವಾರ ಜರುಗಿದ ಆಡಳಿತಾಧಿಕಾರಿ ಎಂ.ಪಿ.ಬಗಲಿ ಅಭಿನಂದನಾ ಮತ್ತು ನೂತನ ಆಡಳಿತಾಧಿಕಾರಿ ಎಸ್.ಜಿ.ಬಿರಾದಾರ ಅವರ ಸ್ವಾಗತ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರೂ ತಮಗೆ ವಹಿಸಿದ ಹೊಣೆಗಾರಿಕೆಗಳನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವತ್ತ ಗಮನಹರಿಸಬೇಕು. ಆಗ ನಿರೀಕ್ಷಿತ ಉನ್ನತಿ ಸಾಧಿಸಬಹುದು ಎಂದರು.
ಜೆ.ಎಸ್.ಮಹಾವಿದ್ಯಾಪೀಠದ ಧಾರವಾಡ ವಿಭಾಗೀಯ ಕಚೇರಿಯ ಆಡಳಿತಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಎಂ.ಪಿ.ಬಗಲಿ ಅವರು, ಹಲವಾರು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಉತ್ತಮ ಆಡಳಿತದ ಜೊತೆಗೆ ತಮ್ಮ ಅಪಾರ ಅನುಭವದ ಮೂಲಕ ಸಂಸ್ಥೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಮ್ಮ 18ವರ್ಷಗಳ ಸುಧೀರ್ಘ ಸೇವಾ ಅವಧಿಯಲ್ಲಿ ತೋರಿಸಿದ ಕರ್ತವ್ಯಪರತೆ ಮತ್ತು ಸೇವಾ ಮನೋಭಾವ ಸ್ಮರಣೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಎಂಜಿನಿಯರ ಜಿ.ಸಿ.ತಲ್ಲೂರ ಮಾತನಾಡಿ, ಎಂ.ಪಿ.ಬಗಲಿ ಅವರು ಪ್ರಾಧ್ಯಾಪಕ, ಕುಲಸಚಿವ ಇನ್ನಿತರ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಡಿ.ಸಿ.ಪಾವಟೆ, ಪ್ರೊ.ಡಿ.ಎಂ.ನಂಜುಂಡಪ್ಪ, ಡಾ.ಅರ್.ಸಿ.ಹಿರೇಮಠರಂತಹ ಮೇಧಾವಿಗಳ ಸಾಮಿಪ್ಯದಲ್ಲಿ ಕಾರ್ಯನಿರ್ವಹಿಸಿ, ತಮ್ಮ ಎಲ್ಲ ಅನುಭವಗಳನ್ನು ಸಮಾಜಮುಖಿಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಎಂ.ಪಿ.ಬಗಲಿ ಅವರನ್ನು ಸಂಸ್ಥೆಯ ವತಿಯಿಂದ ಶ್ರೀಗಳು ಸತ್ಕರಿಸಿ ಆಶೀರ್ವದಿಸಿದರು.ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಮಹೇಂದ್ರ ಪಟೇಲ, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಎಸ್.ಪಿ.ಮಂಜುನಾಥ, ಡಾ.ಬಿ.ಎಂ.ಪಾಟೀಲ, ಲಿಲಿಯಾನ್ ಅಂಥೋನಿ ಶಾನ್, ಶಬರೀಶ ಇನ್ನಿತರರು ಎಂ.ಪಿ.ಬಗಲಿ ಅವರ ಕಾರ್ಯನಿರ್ವಹಣೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಪಬ್ಲಿಕ್ ಸ್ಕೂಲ್, ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ವಾಕ್ ಮತ್ತು ಶ್ರವಣ ಸಂಸ್ಥೆ, ಹಾಲಭಾವಿ ಸ್ಕೂಲ್ ಆಫ್ ಆರ್ಟ್, ಇನ್ಸಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲ್ಯಾನಿಂಗ್ ವಿಭಾಗಗಳ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ಗಣ್ಯರು ಸಮಾರಂಭದಲ್ಲಿದ್ದರು.
ಕು.ಶ್ರೇಯಾ ಪ್ರಾರ್ಥಿಸಿದರು. ಶ್ವೇತಾ ಪಾಟೀಲ ಸ್ವಾಗತಿಸಿದರು. ಪ್ರಕಾಶ ಅಂಗಡಿ ಅಭಿನಂದನಾ ನುಡಿಗಳನ್ನಾಡಿದರು. ದರ್ಶನ ಡಿ. ನಿರೂಪಿಸಿ, ವಂದಿಸಿದರು.