ಲೀಗಲ್ ಸೆಲ್ ಬಳಿ ಚರ್ಚಿಸಿ ಮುಂದಿನ ಕ್ರಮ: ಗುಡಸಿ
ಹುಬ್ಬಳ್ಳಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣ ಸಂಬಂಧ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್. ನಾಗರಾಜ್ ಅವರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದು, ಅವರ ಅಮಾನತು ಹಾಗೂ ಶಿಸ್ತಿನ ಕ್ರಮ ಬಹುತೇಕ ಖಚಿತವಾಗಿದೆ.
’ಸಂಜೆ ದರ್ಪಣ’ದೊಂದಿಗೆ ಮಾತನಾಡಿದ ಕುಲಪತಿ ಕೆ.ಬಿ.ಗುಡಸಿಯವರು ಬಂಧನದ ವಿಚಾರ ತಮಗೂ ತಿಳಿದು ಬಂದಿದ್ದು ವಿ.ವಿಯ ಕಾನೂನು ತಂಡದ ಜತೆ ಚರ್ಚಿಸಿ ಮುಂದಿನ ಕ್ರಮದ ಬಗೆಗೆ ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿದ್ದಾರೆ.
ಕೆಲ ತಿಂಗಳ ಹಿಂದಷ್ಟೆ ಶಾಸಕ ಅರವಿಂದ ಬೆಲ್ಲದ ಅವರ ಶಿಫಾರಸು ಪತ್ರದ ಮೂಲಕ ಕುಲಸಚಿವರಾಗಿ ನೇಮಕಗೊಂಡಿದ್ದ ನಾಗರಾಜ ’ಕೆಲಸಕ್ಕೆ ರಜೆ ಹಾಕಿ ಬೆಂಗಳೂರಿಗೆ ಬಂದು ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಿದ್ದರು.
ಅವರ ಧಾರವಾಡ ಹಾಗೂ ಮೈಸೂರಿನ ಮನೆ ಮೇಲೆ ಮಲ್ಲೇಶ್ವರ ಪೊಲೀಸರು ದಾಳಿ ಮಾಡಿದ್ದು, ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆನ್ನಲಾಗಿದೆ.
’ನಾಗರಾಜ್ ಅವರು ಪರೀಕ್ಷೆಗೆಂದು ಸಿದ್ಧಪಡಿಸಿದ್ದ ಪ್ರಶ್ನೆಗಳು ಹಾಗೂ ಕೆಲ ಮಾದರಿ ಪ್ರಶ್ನೆಪತ್ರಿಕೆಗಳು ಸಿಕ್ಕಿವೆ. ಸೌಮ್ಯಾ ಬಳಿ ಸಿಕ್ಕಿರುವ ಪ್ರಶ್ನೆಗಳಿಗೂ ನಾಗರಾಜ್ ಮನೆಯಲ್ಲಿ ಲಭ್ಯವಾದ ಪ್ರಶ್ನೆಗಳಿಗೂ ಹೋಲಿಕೆಯಾಗಿದೆ ಎನ್ನಲಾಗಿದೆ.
ಸದಾ ಒಂದಿಲ್ಲೊಂದು ವಿವಾದದ ಕೇಂದ್ರ ಬಿಂದುವಾಗುತ್ತಲೆ ಇರುವ ವಿಶ್ವವಿದ್ಯಾಲಯಕ್ಕೆ ಕುಲಸಚಿವ ಹುದ್ದೆಗೆ ಶಿಫಾರಸು ಮಾಡುವ ಮೊದಲು ಕನಿಷ್ಟ ಪ್ರಾಮಾಣಿಕರನ್ನಾದರೂ ಗುರುತಿಸಿದಲ್ಲಿ ಹೀಗಾಗುತ್ತಿರಲಿಲ್ಲ.ಇನ್ನಾದರೂ ಆ ದಿಸೆಯಲ್ಲಿ ಚಿಂತನೆ ನಡೆಯಲಿ ಧಾರವಾಡ ವಿ.ವಿ.ಯ ಘನತೆಯನ್ನು ಕಣ್ಣಾರೆ ಕಂಡ ಅನೇಕ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.
ಕೋರ್ಸ ವರ್ಕ ಪರೀಕ್ಷೆಯಿಂದ ದೂರ!
ಮೌಲ್ಯ ಮಾಪನ ಪ್ರಕರಣದಲ್ಲಿ ಕುಲಸಚಿವ ಸಿಕ್ಕಿ ಬಿದ್ದರೆ, ಇನ್ನೋರ್ವ ಕುಲಸಚಿವ ( ಆಡಳಿತ) ಯಶಪಾಲ ಕ್ಷೀರಸಾಗರ ಸಂಶೋಧನಾ ವಿದ್ಯಾರ್ಥಿಯಾಗಿದ್ದರ ಬಗೆಗೆ ’ಹಾಲಿ ಪಿಎಚ್ ಡಿ ವಿದ್ಯಾರ್ಥಿಯೇ ಕವಿವಿ ಕುಲಸಚಿವ’ ಸಂಜೆ ದರ್ಪಣದಲ್ಲಿ ಪ್ರಕಟವಾದ ನಂತರ ಅವರು ಪಿಎಚ್ಡಿ ಕೋರ್ಸ ವರ್ಕ ಪರೀಕ್ಷೆಯಿಂದ ಹೊರಗುಳಿದಿದ್ದಾರೆ.
ಯಶಪಾಲ್ ಹಾಗೂ ಅವರ ಪತ್ನಿ ಧಾರವಾಡ ವಿಭಾಗದ ಡಿಸಿಎಫ್ ಸೋನಲ್ ವೃಶನಿ ಇಬ್ಬರೂ ಬಯೋಟೆಕ್ನಾಲಜಿ ವಿಭಾಗದಲ್ಲಿ ಪ್ರೋ.ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಗೆ ಮುಂದಾಗಿದ್ದರು. ಈಗ ಇಬ್ಬರೂ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ನಂತರ ಪಿಎಚ್ಡಿ ಯಿಂದ ಹಿಂದೆ ಸರಿಯಲು ಸಹ ತೀರ್ಮಾನಿಸಿದ್ದಾರೆನ್ನಲಾಗಿದೆ.