ಧಾರವಾಡಕ್ಕೊ, ಹುಬ್ಬಳ್ಳಿಗೊ : ತೀವ್ರ ಕುತೂಹಲ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ತಿಂಗಳಾಂತ್ಯಕ್ಕೆ ದಿ.28ರಂದು ಮಹೂರ್ತ ನಿಗದಿಯಾಗಿದ್ದು ಸುಮಾರು ಮೂರು ವರ್ಷಗಳ ನಂತರ ಮತ್ತೆ ಪಾಲಿಕೆ ಜೀವಕಳೆ ಬರುವದಕ್ಕೆ ದಿನಗಣನೆ ಆರಂಭವಾಗಿದೆ.
ಕಳೆದ ಸೆಪ್ಟಂಬರ್ 6ರಂದು ಪಾಲಿಕೆ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದರೂ ಆಯ್ಕೆಯಾಗಿ ಸುಮಾರು 8 ತಿಂಗಳು ಕಳೆದರೂ ಅಧಿಕಾರವಿಲ್ಲದೇ ಅತಂತ್ರರಾಗಿದ್ದ ಸದಸ್ಯರ ಪಾಲಿಗೆ ಕೊನೆಗೂ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಶುಭ ಸುದ್ದಿ ನೀಡಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಇಷ್ಟರಲ್ಲೇ ಚುನಾವಣೆ ಘೋಷಣೆಯಾಗಲಿದ್ದು, ಒಂದು ವೇಳೆ ಘೋಷಣೆಯಾದರೆ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ ಮೇಯರ್, ಉಪಮೇಯರ್ ಚುನಾವಣೆಗೆ ಆಸ್ಪದವಿಲ್ಲದಂತಾಗುತ್ತದೆ ಎಂಬ ಆತಂಕಕ್ಕೆ ತೆರೆ ಬಿದ್ದಿದ್ದು ಸಂಖ್ಯಾಬಲದಲ್ಲಿ ಕಾಂಗ್ರೆಸ್‌ಗಿಂತ ಸ್ವಲ್ಪ ಮುಂದಿರುವ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೇರುವುದು ನಿಶ್ಚಿತವಾಗಿದ್ದು ಚಟುವಟಿಕೆಗಳು ಗರಿಗೆದರಿವೆ.
ಈ ಹಿಂದಿನ ಮೀಸಲಾತಿ ಅಧಿಸೂಚನೆಯನ್ವಯ ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು ಗೌನ್ ಧರಿಸಲು ಇನ್ನಿಲ್ಲದ ಪೈಪೋಟಿ ನಿಶ್ಚಿತವಾಗಿದೆ.
82ಸದಸ್ಯ ಬಲದ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು 42 ಸದಸ್ಯರ ಅವಶ್ಯಕತೆ ಇದೆ. ಬಿಜೆಪಿ 39 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮೂವರು ಶಾಸಕರು, ಓರ್ವ ಸಂಸದರು ಹಾಗೂ ಇಬ್ಬರು ಪರಿಷತ್ ಸದಸ್ಯರ ಬಲವನ್ನು ಬಿಜೆಪಿ ಹೊಂದಿದೆಯಲ್ಲದೇ ಓರ್ವ ಪಕ್ಷೇತರ ಸದಸ್ಯೆ ಈಗಾಗಲೇ ಕಮಲ ಹಿಡಿದಿದ್ದು 46ರ ಗಡಿಯಂಚಿಗೆ ತಲುಪಿದೆ.ಇನ್ನಿಬ್ಬರು ಪಕ್ಷೇತರರು ಬೆಂಬಲಿಸುವರೆಂಬ ವಿಶ್ವಾಸ ಕೇಸರಿ ಪಡೆಯದ್ದಾಗಿದೆ.
ಕಾಂಗ್ರೆಸ್ 33 ಸದಸ್ಯ ಬಲ ಹೊಂದಿದ್ದು ಜೆಡಿಎಸ್ 1, ಎಂಐಎ0 3 ಅಲ್ಲದೇ 6 ಜನ ಪಕ್ಷೇತರರು ಇದ್ದರೂ ಕೈ ಪಾಳೆಯಕ್ಕೆ ಗೆಲುವಿನ ದಾರಿ ಸುಲಭವಲ್ಲ. ಓರ್ವ ಶಾಸಕ ಪ್ರಸಾದ ಅಬ್ಬಯ್ಯ ಮಾತ್ರ ಮತದಾನದ ಹಕ್ಕು ಹೊಂದಿದ್ದು ಪಕ್ಷೇತರರಲ್ಲೂ ಅರ್ಧಕ್ಕರ್ಧ ಬಿಜೆಪಿಯ ಪರ ಇದ್ದಾರಲ್ಲದೇ ಸಭಾಪತಿ ಬಸವರಾಜ ಹೊರಟ್ಟಿ ಸಂಗಡ ಓರ್ವ ಜೆಡಿಎಸ್ ಸದಸ್ಯರು ಕಮಲ ಬಾಗಿಲು ತಟ್ಟುವರೆನ್ನಲಾಗಿದೆ. ಅಲ್ಲದೇ ಓರ್ವ ಎಂಐಎಂ ಸದಸ್ಯ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಕಾರಾಗೃಹದಲ್ಲಿದ್ದಾರೆ.
ಸಾಮಾನ್ಯರಿಗೆ ಮೇಯರ್ ಮೀಸಲಾತಿ ಇರುವ ಹಿನ್ನೆಲೆಯಲ್ಲಿ ಹಿರಿತನ, ಜಾತಿ ಲೆಕ್ಕಾಚಾರದಲ್ಲಿ ಡಜನ್‌ಗೂ ಆಕಾಂಕ್ಷಿಗಳಿದ್ದು ಆದರೆ ಹುಬ್ಬಳ್ಳಿಗೊ ಧಾರವಾಡಕ್ಕೊ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಬಿಜೆಪಿ ಕಳೆದ ಎರಡು ಅವಧಿ ಪಾಲಿಕೆ ಅಧಿಕಾರ ನಡೆಸಿದ್ದು 10 ವರ್ಷಗಳಲ್ಲಿ ಕೇವಲ 2 ಬಾರಿ( ಪೂರ್ಣಾ ಪಾಟೀಲ, ಶಿವು ಹಿರೇಮಠ) ಮಾತ್ರ ಪೇಡೆನಗರಿ ಪಾಲಿಗೆ ಮಹಾಪೌರ ಸ್ಥಾನ ದಕ್ಕಿದೆ.ಅಲ್ಲದೇ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟವೂ ನಡೆದಿರುವುದರಿಂದ ಕಮಲ ವರಿಷ್ಠರು ಯಾವ ನಿರ್ಧಾರಕ್ಕೆ ಬರುವರೆಂಬುದು ಕುತೂಹಲ ಕೆರಳಿಸಿದೆ.
ಧಾರವಾಡ ವಿಚಾರಕ್ಕೆ ಬಂದಲ್ಲಿ ಮೇಯರ್ ರೇಸ್‌ನಲ್ಲಿ ಪ್ರಮುಖವಾಗಿ ಹಿರಿಯ ಸದಸ್ಯರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪರಮಾಪ್ತರಲ್ಲಿ ಒಬ್ಬರಾದ ಈರೇಶ ಅಂಚಟಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಶೆಟ್ಟಿ, ಮಾಜಿ ಮೇಯರ್ ಶಿವು ಹಿರೇಮಠ ಇವರುಗಳ ಹೆಸರು ಕೇಳಿ ಬರಲಿವೆ.
ಹುಬ್ಬಳ್ಳಿಗೆ ನೀಡುವುದಾದಲ್ಲಿ ಮಾಜಿ ಮಹಾಪೌರರಾಗಿ ಸಮರ್ಥವಾಗಿ ನಿಭಾಯಿಸಿರುವ ವೀರಣ್ಣ ಸವಡಿ, (ನಾಲ್ಕನೇ ಬಾರಿಗೆ ಆಯ್ಕೆ) ಜೆಡಿಎಸ್‌ನಲ್ಲಿದ್ದು ವಿಪಕ್ಷ ನಾಯಕನ ಸ್ಥಾನ ನಿರ್ವಹಿಸಿರುವ ರಾಜಣ್ಣ ಕೊರವಿ,ನಾಲ್ಕನೆ ಬಾರಿ ಗೆಲುವು ಸಾಧಿಸಿರುವ ರಾಮಣ್ಣ ಬಡಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಮಲ್ಲಿಕಾರ್ಜುನ ಗುಂಡೂರ, ಉಮೇಶ ಕೌಜಗೇರಿ,ಶಿವು ಮೆಣಸಿನಕಾಯಿ ಇವರ ಹೆಸರುಗಳು ಹಿರಿತನದ ಆಧಾರದ ಮೇಲೆ ಪರಿಗಣನೆಗೆ ಬರಲಿವೆ.
ಸಾಮಾನ್ಯ ಮೀಸಲಾತಿಯಲ್ಲಿ ಉಳಿದವರಿಗೂ ಮುಕ್ತ ಅವಕಾಶವಿದ್ದು ಸುಪ್ರೀಂ ನಿರ್ದೇಶನದನ್ವಯ ಇನ್ಮುಂದೆ ಮೀಸಲು ನಿರ್ಧಾರದಲ್ಲಿ ಸಾಮಾನ್ಯ, ಎಸ್‌ಸಿ, ಎಸ್ ಟಿ ಮಾತ್ರ ಪರಿಗಣಿಸಬಹುದಾಗಿದೆ.
ಈಗಾಗಲೇ ಬಿಜೆಪಿಯಲ್ಲಿ ಲೆಕ್ಕಾಚಾರ ಲಾಬಿ ಯತ್ನಗಳು ಆರಂಭವಾಗಿದ್ದು ಅಂತಿಮವಾಗಿ ಅಂತಿಮವಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಕ್ಷ್ಮಣರೇಖೆಯೇ ಅಂತಿಮವಾಗಲಿದೆ.
ಒಂದು ವೇಳೆ ಧಾರವಾಡಕ್ಕೆ ಮೇಯರ್ ಪಟ್ಟ ಹೋದಲ್ಲಿ ಹುಬ್ಬಳ್ಳಿಗೆ ಉಪ ಮೇಯರ್ ಸ್ಥಾನ ದಕ್ಕಲಿದೆ.ಒಂದು ವೇಳೆ ಹುಬ್ಬಳ್ಳಿಯವರೇ ಪ್ರಥಮ ಪ್ರಜೆಯಾದಲ್ಲಿ ಧಾರವಾಡದವರಿಗೆ ಉಪ ಮೇಯರ್ ಗ್ಯಾರಂಟಿಯಾಗಿದೆ. ಸಾಮಾನ್ಯ ಮಹಿಳಾ ಕೋಟಾದಲ್ಲಿ ಗೆದ್ದ ಬಹುತೇಕ ಮಹಿಳೆಯರು ಮೊದಲ ಬಾರಿ ಆಯ್ಕೆಯಾದವರಾಗಿದ್ದು ವರಿಷ್ಠರ ಹಾಗೂ ಗಾಡ್‌ಫಾದರ್‌ಗಳ ಆಶೀರ್ವಾದ ಯಾರಿಗೆ ಲಭಿಸುತ್ತದೆ ಕಾದು ನೋಡಬೇಕಾಗಿದೆ.
ಪಾಲಿಕೆಯ ಸಭಾಂಗಣದಲ್ಲಿ 28 ರಂದು ಚುನಾವಣೆ ನಡೆಯಲಿದ್ದು,ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಸಭೆ ಪ್ರಾರಂಭವಾಗುವುದು. ನಾಮಪತ್ರಗಳ ಪರಿಶೀಲನೆ ನಂತರ ಉಮೇದುವಾರರ ಘೋಷಣೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗುವುದು. ಅಗತ್ಯವಿದ್ದರೆ ಕೈ ಎತ್ತುವ ಮೂಲಕ ಮತದಾನ ನಡೆಸಿ ಮಹಾಪೌರ ಹಾಗೂ ಉಪಮಹಾಪೌರರನ್ನು ಚುನಾಯಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮೇಯರ್‌ಗೆ ವಾಹನವಿಲ್ಲ
ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೇ ಬಣಗುಡುತ್ತಿದ್ದ ಪಾಲಿಕೆ ಮೇಯರ್ ಆಯ್ಕೆಗೆ ದಿನ ನಿಗದಿಯಾಗಿದ್ದು ಅವರಿಗೆ ವಾಹನವೇ ಇಲ್ಲದಂತಾಗಿದೆ ಎನ್ನಲಾಗಿದೆ. ಈ ಹಿಂದಿನ ಮೇಯರ್ ವಾಹನವನ್ನು ಅಧಿಕಾರಿಗಳು ಬಳಸಿದ್ದು ಯಾವ ವಾಹನ ನೀಡುವರೆಂಬುದನ್ನು ನೋಡಬೇಕಾಗಿದೆ.