ಧಾರವಾಡ: ಫ್ರಾನ್ಸ್ನಲ್ಲಿ ಆಯೋಜನೆಗೊಂಡಿರುವ 19ನೇ ವಿಶ್ವ ಶಾಲಾ ಜಿಮ್ನಾಸೈಡ್ ಕ್ರೀಡಾಕೂಟದ ಟೇಕ್ವಾಂಡೊ ಸ್ಪರ್ಧೆಗೆ ಅಳ್ನಾವರ ಸಮೀಪದ ಹೊನ್ನಾಪೂರ ಗ್ರಾಮದ ಅದಿತಿ ಪರಪ್ಪ ಕ್ಷಾತ್ರತೇಜ ಆಯ್ಕೆಯಾಗಿದ್ದು, ಅವರು ಗುರುವಾರ ಫ್ರಾನ್ಸ್ಗೆ ಪ್ರಯಾಣ ಬೆಳೆಸಿದ್ದಾರೆ.
ಅದಿತಿ 55ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಇವರು ಅಂಜಲಿ ಹಾಗೂ ಪರಪ್ಪ ಅವರ ಪುತ್ರಿಯಾಗಿದ್ದಾಳೆ. ಅದಿತಿ ಸಹೋದರ ಸಾಯಿಪ್ರಸಾದ ರಾಷ್ಟ್ರೀಯ ಮಟ್ಟದ ಟೇಕ್ವಾಂಡೊ ಆಟಗಾರನಾಗಿದ್ದು, ತಾಯಿ ಅಂಜಲಿ ಟೇಕ್ವಾಂಡೊ ಕೋಚ್ ಹಾಗೂ ತಂದೆ ಪರಪ್ಪ ಧಾರವಾಡ ಜಿಲ್ಲಾ ಕ್ರೀಡಾ ಭಾರತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಅದಿತಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕ್ರೀಡಾ ಭಾರತಿ, ವಿಜಯಲಕ್ಷ್ಮೀ ಕೋ ಆಪ್ ಸೊಸೈಟಿ, ಅರ್ಬನ್ ಕೋ ಆಪ್ ಸೊಸೈಟಿ, ಶಿವು ಹಿರೇಮಠ, ಶಾಸಕ ಅಮೃತ ದೇಸಾಯಿ, ಪಿ.ಎಚ್.ನೀರಲಕೇರಿ ಹಾಗೂ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಬರುವ ಹಿರಿಯರ ತಂಡದ ಸದಸ್ಯರು ಆರ್ಥಿಕ ನೆರವು ನೀಡಿದ್ದು, ಅವರೆಲ್ಲರಿಗೂ ಋಣಿ ಎಂದು ಪರಪ್ಪ ತಿಳಿಸಿದ್ದಾರೆ.
ಅಲ್ಲದೇ ಇನ್ನೋರ್ವ ಕ್ರೀಡಾಪಟು ಪ್ರಿಯಾಂಕಾ ಓಲೇಕಾರ 800 ಮೀಟರ್ ಓಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಜಿಲ್ಲಾ ಓಲಂಪಿಕ್ ಅಸೋಶಿಯೇಶನ್ ಅಧ್ಯಕ್ಷ ಶಿವು ಹಿರೇಮಠ, ಉದ್ಯಮಿ ಮಹೇಶ ಶೆಟ್ಟಿ, ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಈರೇಶ ಅಂಚಟಗೇರಿ, ಕೆ.ಎಸ್.ಭೀಮಣ್ಣವರ, ಬಸವರಾಜ ತಾಳಿಕೋಟಿ ಹಾಗೂ ಇತರ ಒಲಿಂಪಿಕ್ಸ್ ಸಂಸ್ಥೆಯ ಸದಸ್ಯರು ಅದಿತಿ ಹಾಗೂ ಪ್ರಿಯಾಂಕಾ ಅವರ ಪ್ರಯಾಣಕ್ಕೆ ಶುಭ ಕೋರಿದ್ದಾರೆ.