ಹುಬ್ಬಳ್ಳಿ-ಧಾರವಾಡ ಸುದ್ದಿ
ಲಿಂಪಾಗೆ ಶಾಕ್ ಕೊಟ್ಟ ಕಮಲ ವರಿಷ್ಠರು; ವಿಜಯೇಂದ್ರಗೆ ಟಿಕೆಟ್ ನಿರಾಕರಣೆ

ಲಿಂಪಾಗೆ ಶಾಕ್ ಕೊಟ್ಟ ಕಮಲ ವರಿಷ್ಠರು; ವಿಜಯೇಂದ್ರಗೆ ಟಿಕೆಟ್ ನಿರಾಕರಣೆ

ಹುಬ್ಬಳ್ಳಿ: ಇಲ್ಲಿಯ ಬಿಜೆಪಿ ಮುಖಂಡ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಪರಿಷತ್‌ಗೆ ಸ್ಪರ್ಧಿಸುವ ಅವಕಾಶ ಸಿಗದೆ ನಿರಾಸೆ ಅನುಭವಿಸುವಂತಾಗಿದೆ.
ನಿನ್ನೆ ಮಧ್ಯಾಹ್ನವೇ ವರಿಷ್ಠರು ಹಸಿರು ನಿಶಾನೆ ತೋರಿ ಎಲ್ಲ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬೆಂಗಳೂರಿಗೆ ನಾಮಪತ್ರ ಸಲ್ಲಿಸಲು ಬರುವಂತೆ ಸೂಚಿಸಿದ್ದರೂ ಇಂದು ಅವರು ಹೆಸರು ಅಧಿಕೃತ ಪಟ್ಟಿಯಲ್ಲಿ ಇಲ್ಲದ ಪರಿಣಾಮ ಮತ್ತೊಮ್ಮೆ ಅವರು ಪರಿಷತ್ ಸದಸ್ಯ ಸ್ಥಾನದಿಂದ ವಂಚಿತರಾಗಿದ್ದಾರೆ.

ಹಿಂದೊಮ್ಮೆ ಸಹ ಅವರ ಹೆಸರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅಂತಿಮಗೊಂಡು ಕೊನೆಯ ಕ್ಷಣದಲ್ಲಿ ಕೈ ಬಿಟ್ಟಿದ್ದರು.
ಕಳೆದ ಮೂರು ದಶಕಗಳಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲದೇ ಮಹಾನಗರ, ಜಿಲ್ಲಾ ಎರಡೂ ಅಧ್ಯಕ್ಷರಾಗಿ ಸಮರ್ಥವಾಗಿ ನಿಭಾಯಿಸಿದ್ದರಲ್ಲದೇ ಹುಡಾ ಅಧ್ಯಕ್ಷರಾಗಿ ಸಹ ಮಾದರಿಯೆಂಬಂತೆ ಕಾರ್ಯ ನಿರ್ವಹಿಸಿದ್ದರು.
ನಿನ್ನೆ ಸಂಜೆ ದರ್ಪಣ ಮಾತನಾಡಿಸಿದ ಸಂದರ್ಭದಲ್ಲಿ ಕೊನೆಗೂ ಪಕ್ಷ ನಿಷ್ಟೆಗೆ ಮಣೆ ಹಾಕಿದೆ ಎಂದು ಸಂತಸ ಹಂಚಿಕೊಂಡಿದ್ದರು.ಇಂದು ಪಟ್ಟಿಯಲ್ಲಿ ಲಿಂಗಾಯತ ಕೋಟಾದಡಿ ಮತ್ತೆ ಲಕ್ಷ್ಮಣ ಸವದಿಗೆ ಮಣೆ ಹಾಕಿದೆ. ಹುಬ್ಬಳ್ಳಿ -ಧಾರವಾಡದಲ್ಲಿ ಲಿಂಪಾ ಅವರಿಗೆ ಸಿಕ್ಕಿದೆ ಎಂಬುದನ್ನು ಕೇಳಿ ಪಕ್ಷದ ವಲಯದಲ್ಲಿ ಸಂತಸ ಕಂಡುಬಂದಿತ್ತಲ್ಲದೇ ಅವಳಿನಗರಕ್ಕೆ , ಜಿಲ್ಲೆಗೆ ಮತ್ತೊಂದು ಪ್ರಾತಿನಿಧ್ಯ ದೊರೆತಂತಾಯಿತು ಎಂದು ಖುಷಿ ಪಟ್ಟಿದ್ದರು.

ಸವದಿ, ಹೇಮಲತಾ, ಕೇಶವ, ಛಲವಾದಿಗೆ ಮಣೆ

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಅಧಿಕೃತವಾಗಿ ಹೊರಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸಲಾಗಿದೆ.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಪರಿಷತ್ ಟಿಕೆಟ್ ದೊರೆತಿದ್ದು,
ಹಾಲಿ ಪರಿಷತ್ ಸದಸ್ಯರಾಗಿರುವ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ಹೇಮಲತಾ ನಾಯಕ್, ಕೇಶವ ಪ್ರಸಾದ್ ಮತ್ತು ಚಲವಾದಿ ನಾರಾಯಣ ಸ್ವಾಮಿ ಟಿಕೆಟ್ ಪಡೆದ ಇತರ ಮೂವರಾಗಿದ್ದಾರೆ. ಮಹಿಳಾ ಕೋಟಾದಡಿಯಲ್ಲಿ ಕೊಪ್ಪಳ ಮೂಲದ ಲಂಬಾಣಿ ಸಮುದಾಯದ ಹೇಮಲತಾ ನಾಯಕ್, ಹಿಂದುಳಿದ ವರ್ಗ ಕೋಟದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ, ದಲಿತರ ಕೋಟದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಅಲ್ಲದೇ ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿಗೆ ಟಿಕೆಟ್ ನೀಡಲಾಗಿದೆ. ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಹೊರಟ್ಟಿ ಅವರಿಗೆ ಹೈಕಮಾಂಡ್ ನೀಡಿದ ಭರವಸೆಯಂತೆ ಟಿಕೆಟ್ ದೊರಕಿದೆ.
ಈ ಪಟ್ಟಿಯನ್ನು ರಾಜ್ಯ ಉಸ್ತುವಾರಿ ಅರುಣಸಿಂಗ ಪ್ರಕಟಿಸಿದ್ದಾರೆ.
ವಿಜಯೇಂದ್ರಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಆರೋಪಕ್ಕೆ ತುತ್ತಾಗುವ ಆತಂಕದಿಂದ ಬಿಜೆಪಿ ವರಿಷ್ಠರು ಹಿಂದೇಟು ಹಾಕಿದ್ದಾರೆನ್ನಲಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.
ಈಗಾಗಲೇ ಕಾಂಗ್ರೆಸ್ ಅಬ್ದುಲ್ ಜಬ್ಬಾರ , ನಾಗರಾಜ ಯಾದವಗೆ ಮಣೆ ಹಾಕಿದ್ದು ಜೆಡಿಎಸ್‌ನಿಂದ ಅಂತಿಮವಾಗಿ ಟಿ.ಎ.ಶರವಣ ಮತ್ತೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

administrator

Related Articles

Leave a Reply

Your email address will not be published. Required fields are marked *