ಸ್ವಂತ ಖರ್ಚಿನಲ್ಲಿ ಸ್ವಚ್ಛತೆ ಕೈಗೊಂಡ ಪಾಲಿಕೆ ಸದಸ್ಯೆ ಕುಟುಂಬ
ಹುಬ್ಬಳ್ಳಿ: ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಪ್ರಾಮಾಣಿಕವಾಗಿ ಅಭಿವೃದ್ಧಿ ಪಡಿಸಬೇಕೆಂಬ ಮನಸ್ಸು, ಚಿಂತನೆಯಿದ್ದರೆ ಮಾಡಬಹುದು ಎಂಬುದನ್ನು ಮಹಾನಗರ ಪಾಲಿಕೆಗೆ ಮೊದಲ ಬಾರಿ ಆಯ್ಕೆಯಾದ ಮಹಿಳಾ ಸದಸ್ಯರೊಬ್ಬರು ಮಾಡಿ ತೋರಿಸಿದ್ದಾರೆ.
ಹೌದು, ಹೀಗೆ ಮಾಡಿದವರು 58ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಶೃತಿ ಸಂತೋಷ ಚಲವಾದಿ. ಹೌದು ಪಾಲಿಕೆಗೆ ಆಯ್ಕೆಯಾಗಿ ಸುಮಾರು9 ತಿಂಗಳಾದರೂ ಇನ್ನೂ ಮಹಾನಗರಪಾಲಿಕೆಗೆ ಅಧಿಕಾರ ಸ್ವೀಕರಿಸಿ ಬಲಗಾಲಿಟ್ಟಿಲ್ಲವಾದರೂ ವಾರ್ಡನ್ನು ಸುಂದರಗೊಳಿಸಬೇಕೆಂಬ ಕಳಕಳಿಯಿಂದ ಮಾಡಿರುವುದು ವಿಶೇಷವಾಗಿದೆ.
ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಕೇಶ್ವಾಪುರ ಪ್ರದೇಶದ ರಾಮನಗರದ ಮುಖ್ಯ ರಸ್ತೆಯಲ್ಲಿನ ಗೋಡೆಗಳು ಕಳೆದ 30-35 ವರ್ಷಗಳಿಂದ ಸುಣ್ಣ ಬಣ್ಣ ಕಂಡಿರಲಿಲ್ಲ. ರಸ್ತೆಯ ಬದಿಯ ಗಿಡ ಗಂಟಿಗಳನ್ನು ತೆಗೆದು ಅದಕ್ಕೆ ಸುಣ್ಣ ಬಣ್ಣ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದ್ದು ಅಕ್ಷರಶಃ ಬೇರೆಯೇ ಪ್ರದೇಶಕ್ಕೆ ಕಾಲಿಟ್ಟಂತೆ ಭಾಸವಾಗುತ್ತಿದೆ.
ಅಲ್ಲದೇ ಇನ್ನೂ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಒಪ್ಪಿಸಿ ಅನುದಾನ ಪಡೆಯುವುದು ಸುಲಭವಲ್ಲ. ಆದರೆ ಶೃತಿ ಚಲವಾದಿ ಹಾಗೂ ಕುಟುಂಬಸ್ಥರು ತಮ್ಮದೇ ಸ್ವಂತ ಖರ್ಚಿನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿರುವುದು ರಾಮನಗರದ ಪ್ರದೇಶದ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ.
ಪಾಲಿಕೆ ಸದಸ್ಯೆ ಶೃತಿ ಪತಿ ಸಂತೋಷ ಚಲವಾದಿಯವರು ವಾರ್ಡಿನ ಎಲ್ಲ ಹಿರಿಯ ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವಚ್ಛತಾ ಕಾರ್ಯವನ್ನು ಮಾದರಿಯಾಗಿ ಮಾಡುತ್ತಿದ್ದು ಪ್ರದೇಶದ ಚಿತ್ರಣವೇ ಬದಲಾಗುವಂತೆ ಆಗಿದೆ. ಅನುದಾನ ಮಂಜೂರಾದರೂ ಕಾಮಗಾರಿಗೆ ಗೋಗರೆಯುವ ಸ್ಥಿತಿ ಅನೇಕ ಕಡೆ ಇದ್ದು ಆದರೆ ೫೮ನೇ ವಾರ್ಡಿನಲ್ಲಿ ಅದಕ್ಕೆ ತದ್ವಿರುದ್ದವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಕಾರ್ಯ ನಡೆಸಿದ್ದು ರಸ್ತೆಯಲ್ಲಿ ಸಂಚರಿಸುವವರಿಗೆ ಹೊಸ ಅನುಭವ ನೀಡಲಿದೆ.
ಇಂತಹ ಸೇವಾ ಮನೋಭಾವನೆಯ ಪಾಲಿಕೆ ಸದಸ್ಯರು ಹೆಚ್ಚಿದಷ್ಟು ವಾರ್ಡಿನ ಅಭಿವೃದ್ಧಿ ವೇಗ ಪಡೆಯುವುದರಲ್ಲಿ ಎರಡು ಮಾತಿಲ್ಲ.ರಾಮನಗರ ಎಂದರೆ ಮೂಗು ಮುರಿಯುವವರಿಗೆ ಕಾರ್ಯದ ಮೂಲಕ ಉತ್ತರ ನೀಡಿದ್ದಾರೆ.
ಅನೇಕ ವರ್ಷಗಳಿಂದ ಸ್ವಚ್ಛತೆ, ಸುಣ್ಣ ಬಣ್ಣವಿಲ್ಲದ ರಸ್ತೆ ಬದಿಯ ಗೋಡೆಗಳಿಗೆ ಬಣ್ಣಗಳನ್ನು ಹಚ್ಚಿ ಪಾಲಿಕೆ ಸದಸ್ಯರು ಹಾಗೂ ಕುಟುಂಬದವರು ನಿಜಕ್ಕೂ ಮಾದರಿಯಾಗುವಂತೆ ಕೆಲಸ ಮಾಡಿದ್ದಾರೆ.
ಚಂದ್ರಕಾಂತ ಯಾದವ
ಸ್ಥಳೀಯ ಹಿರಿಯರು