ಉಪಮೇಯರ್ ಗೌನ ಭಾಗ್ಯ ಉಮಾ ಮುಕುಂದ್ಗೆ
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸತತ ಮೂರನೇ ಬಾರಿ ಕಮಲ ಬಾವುಟ ಹಾರಿದ್ದು ಇಪ್ಪತ್ತೊಂದನೆ ಮೇಯರ್ ಆಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪರಮಾಪ್ತ ಎಂದೇ ಗುರುತಿಸಲ್ಪಡುವ ಪೇಡೆನಗರಿಯ ಮೂರನೇ ವಾರ್ಡಿನಿಂದ ಆಯ್ಕೆಯಾದ ಈರೇಶ ಅಂಚಟಗೇರಿ ಹಾಗೂ ಉಪಮೇಯರ್ ಆಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸವಿರುವ 44ನೇ ವಾರ್ಡಿನ ಶ್ರೀಮತಿ ಉಮಾ ಮುಕುಂದ ಆಯ್ಕೆಯಾದರು.
ಇಂದು ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ನಡೆದ ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಕಮಲ ಪಾಳೆಯದ ಮೇಯರ್ ಅಭ್ಯರ್ಥಿ ಅಂಚಟಗೇರಿ 50 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮಯೂರ್ ಮೋರೆ 35 ಮತಗಳನ್ನು ಪಡೆದರು. 15 ಮತಗಳ ಅಂತರದಿಂದ ಪ್ರಸಕ್ತ ಅವಧಿಯ ಗೌನ್ ಧರಿಸಿದರು.ಎಂಐಎಂನ ನಜೀರ ಹೊನ್ಯಾಳ ಮೂರರಲ್ಲೇ ಉಳಿದರು.
ಉಪಮೇಯರ್ ಸ್ಥಾನದ ಉಮಾ ಮುಕುಂದ 51 ಮತ ಪಡೆದರೆ, ಕೈ ಪಾಳೆಯದ ದೀಪಾ ನೀರಲಕಟ್ಟಿ 35 ಮತ ಪಡೆದು ಸೋಲುಂಡರು. ವಹೀದಾ ಖಾನ್ ಕೇವಲ ಮೂರು ಮತ ಪಡೆದರು.
ಮೇಯರ್ ಚುನಾವಣೆಯಲ್ಲಿ ನಾಲ್ವರು ತಟಸ್ಥ ಉಳಿದರೆ, ಉಪಮೇಯರ್ ಚುನಾವಣೆಯಲ್ಲಿ ಮೂವರು ತಟಸ್ಥ ಉಳಿದರು.
ಸುಮಾರು 38 ತಿಂಗಳ ಅಧಿಕಾರಿಗಳ ದರ್ಬಾರಿನ ನಂತರ ಇಂದು ತನ್ನ ತೆಕ್ಕೆಗೆ ಪಾಲಿಕೆ ಪಡೆದ ಕೇಸರಿ ಪಡೆ ಮೂರನೇ ಅವಧಿಗೆ ಆಡಳಿತ ಹಿಡಿಯಿತಲ್ಲದೇ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕೆಂಬ ಕೂಗನ್ನು ಲಕ್ಷ್ಯದಲ್ಲಿಟ್ಟುಕೊಂಡು ವಿದ್ಯಾಕಾಶಿಗೆ ಅದರಲ್ಲೂ ಗ್ರಾಮೀಣ ಕ್ಷೇತ್ರ ವ್ಯಾಪ್ತಿಗೆ ಮಣೆ ಹಾಕಿತು.
ಇಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ 82 ಸದಸ್ಯರು ಹಾಜರಿದ್ದರಲಲ್ಲದೇ ಜನಪ್ರತಿನಿಧಿಗಳಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ,ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಎಸ್ .ವಿ.ಸಂಕನೂರ ಹಾಗೂ ಪ್ರದೀಪ ಶೆಟ್ಟರ್ ಪಾಲ್ಗೊಂಡರು.
ನಿನ್ನೆ ಎರಡು ಪಕ್ಷೇತರರನ್ನು ತೆಕ್ಕೆಗೆ ಹಾಕಿಕೊಂಡ ಬಿಜೆಪಿ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರ ಹಿಡಿಯುವುದು ಖಚಿತವಾಗಿತ್ತಾದರೂ ಆಕಾಂಕ್ಷಿಗಳ ಪೈಪೋಟಿಯ ಮಧ್ಯೆ ಇಂದು ಬೆಳಿಗ್ಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಈರೇಶ ಹಾಗೂ ಉಮಾ ಅವರ ಹೆಸರು ಅಖೈರುಗೊಳಿಸ ಲಾಯಿತು. ಅಂತಿಮ ಕ್ಷಣದವರೆಗೂ ರೇಸ್ನಲ್ಲಿದ್ದ ಮೂರು ಬಾರಿ ಆಯ್ಕೆಯಾಗಿದ್ದ ವಿಜಯಾನಂದ ಶೆಟ್ಟಿಯವರಿಗೆ ಹಿರಿತನವಿದ್ದರೂ ಜಾತಿ ಲೆಕ್ಕಾಚಾರದಲ್ಲಿ ಹಿನ್ನಡೆಯಾಯಿತು.
ನಿನ್ನೆ ತಡರಾತ್ರಿಯವರೆಗೆ ಬಿಜೆಪಿ ಪ್ರಮುಖರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸಹಿತ ಪ್ರಮುಖರು ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ನಂತರ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದರೂ ಅಂತಿಮಗೊಳ್ಳದೇ ಇಂದು ಬೆಳಿಗ್ಗೆ ಘೋಷಿಸಲಾಯಿತು.
ಮೇಯರ್ ಸ್ಥಾನಕ್ಕೆ ಐವರ ಪಟ್ಟಿಯಿಂದ ರಾಜಣ್ಣ ಕೊರವಿ ಹೊರ ಬಿದ್ದ ನಂತರ ಧಾರವಾಡದ ಅಂಚಟಗೇರಿ, ವಿಜಯಾನಂದ ಶೆಟ್ಟಿ , ಹುಬ್ಬಳ್ಳಿಯ ವೀರಣ್ಣ ಸವಡಿ, ಶಿವು ಮೆಣಸಿನಕಾಯಿ ನಡುವೆ ಪೈಪೋಟಿಯಿತ್ತು. ನಾಲ್ಕು ಕ್ಷೇತ್ರಗಳಿಂದ ತಲಾ ಒಬ್ಬೊಬ್ಬರು ಇದ್ದರಾದರೂ ಅಂತಿಮವಾಗಿ ಪ್ರಹ್ಲಾದ ಜೋಶಿ ಮೇಲಾಗುವುದರೊಂದಿಗೆ ಈರೇಶಗೆ ಪಟ್ಟ ಒಲಿಯಿತು. ಸಾಮಾನ್ಯ ಮೇಯರ್ ಪಟ್ಟ ಆ ಮೀಸಲಾತಿಯಲ್ಲಿ ಗೆದ್ದವರಿಗೆ ನೀಡಬೇಕೆಂಬ ವಾದ ಮೂಲೆಗುಂಪಾಯಿತು.
ಧಾರವಾಡಕ್ಕೆ ಮೇಯರ್ ಸ್ಥಾನ ಹೋದ ನಂತರ ಹುಬ್ಬಳ್ಳಿಗೆ ಉಪ ಮೇಯರ್ ಖಚಿತವಾಯಿತಾದರೂ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಆಪ್ತ ವಲಯದ ರೂಪಾ ಶೆಟ್ಟಿ ಹಾಗೂ ಅದೇ ವಾರ್ಡಿನ ಉಮಾ ಮುಕುಂದ ಮಧ್ಯೆ ಪೈಪೋಟಿ ನಡೆದು ಅಂತಿಮವಾಗಿ ಮೊದಲ ಬಾರಿಗೆ ಬಲಗಾಲಿಟ್ಟ ಬ್ರಾಹ್ಮಣ ಸಮುದಾಯದ ಉಮಾ ಪಾಲಾಯಿತು.
ಪಕ್ಷದ ವತಿಯಿಂದ ಅಂತಿಮಗೊಂಡ ನಂತರ ಈರೇಶ ಹಾಗೂ ಉಮಾ ಮುಕುಂದ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ನಿಂದ ಮೇಯರ್ ಸ್ಥಾನಕ್ಕೆ ಮಯೂರ ಮೋರೆ, ಡೆ.ಮೇಯರ್ಗಾಗಿ ದೀಪಾ ನೀರಲಕಟ್ಟಿ, ಅಲ್ಲದೇ ಎಂಐಎಂನಿಂದ ನಜೀರ ಹೊನ್ಯಾಳ, ವಹೀದಾಖಾನ ಕಿತ್ತೂರ ನಾಮಪತ್ರ ಸಲ್ಲಿಸಿದರು.ಎಂಐಎಂ ಅಸ್ಥಿತ್ವ ತೋರಿಸಲು ಸ್ಪರ್ಧಿಸಿದೆ. ಸಲ್ಲಿಸಿದ ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿದ್ದವು.
ಎಂಐಎಂ ಮೇಯರ್ ಅಭ್ಯರ್ಥಿ ಪರ 3 ವಿರುದ್ಧ 83 ಹಾಗೂ ತಟಸ್ಥ 3 ಮತಗಳು ಬಂದವು.
ಚುನಾವಣಾ ಅಧಿಕಾರಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಸೇರಿದಂತೆ ಅನೇಕರಿದ್ದರು.
ಮತದಾನಕ್ಕೆ ಮೊದಲು ಪಾಲಿಕೆಗೆ ಆಯ್ಕೆಯಾದ ಎಲ್ಲ ಎಲ್ಲ 82 ಸದಸ್ಯರು ಲಿಖಿತ ಪ್ರಮಾಣ ವಚನ ಸ್ವೀಕರಿಸಿದರಲ್ಲದೇ ತದನಂತರ ಚುನಾವಣಾ ಪ್ರಕ್ರಿಯೆಲ್ಲಿ ಪಾಲ್ಗೊಂಡರು.
ರಾಜಣ್ಣನ ಕನಸು ಭಗ್ನ
ಜಾತ್ಯತೀತ ದಳದಿಂದ ವಲಸೆ ಬಂದು ಪಾಲಿಕೆ ಚುನಾವಣೆಯಲ್ಲಿ 36ನೇ ವಾರ್ಡಿನಿಂದ ದೊಡ್ಡ ಅಂತರದ ಗೆಲುವು ಸಾಧಿಸಿದ್ದ ರಾಜಣ್ಣ ಕೊರವಿಯವರ ಮೇಯರ್ ಪಟ್ಟ ಏರುವ ಕನಸು ಭಗ್ನವಾಯಿತು.
ನಿನ್ನೆ ರಾತ್ರಿಯವರೆಗೆ ಮೇಯರ್ ಪೈಪೋಟಿಯ ಐವರ ಶಾರ್ಟ ಲೀಸ್ಟನಲ್ಲಿದ್ದ ರಾಜಣ್ಣ ಹೆಸರು ತಡರಾತ್ರಿ ವೇಳೆಗೆ ಮಾಯವಾಗುವ ಮೂಲಕ ಉಣಕಲ್ ಪ್ರದೇಶಕ್ಕೆ ಮೇಯರ್ ಸ್ಥಾನ ದೊರೆಯಬಹುದೆಂಬ ನಿರೀಕ್ಷೆ ಹುಸಿಯಾಯಿತು.ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನ ಈ ಅವಧಿಯಲ್ಲಿ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಕಡಿಮೆಯಿರುವುದರಿಂದ ಅವರ ಪ್ರಥಮ ಪ್ರಜೆ ಕನಸು ಭಗ್ನವಾದಂತಾಗಿದೆ.
ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ವಿರುದ್ದ ಸೆಡ್ಡು ಹೊಡೆದಿದ್ದ ಶಂಕ್ರಣ್ಣ ಮುನವಳ್ಳಿ, ಡಾ.ಮಹೇಶ ನಾಲವಾಡ ಅವರು ಕಮಲ ಪಾಳೆಯ ಸೇರಿ ಯಾವುದೇ ಹುದ್ದೆ ಪಡೆಯುವಲ್ಲಿ ವಿಫಲರಾಗಿದ್ದು ಕಣ್ಮುಂದೆಯೇ ಇದ್ದು ರಾಜಣ್ಣ ಕೊರವಿ ಸಹ ಮೇಯರ್ ಪಟ್ಟದ ಕನಸಿನೊಂದಿಗೆ ಹೆಜ್ಜೆ ಹಾಕಿದ್ದರೂ ಅದು ಸಹ ಈಗ ಗಗನಕುಸುಮವಾದಂತಾಗಿದೆ.
ಕಿಶನ್, ಚಂದ್ರಿಕಾ ಮೇಸ್ತ್ರಿ ಬಿಜೆಪಿ ತೆಕ್ಕೆಗೆ
ಫಲಿತಾಂಶ ಬೆನ್ನಲ್ಲೇ ಕೇಸರಿ ಪಡೆಗೆ 69 ನೇ ವಾರ್ಡಿನಿಂದ ಆಯ್ಕೆಯಾಗಿದ್ದ ಪಕ್ಷೇತರ ಅಭ್ಯರ್ಥಿ ದುರ್ಗಮ್ಮ ಬಿಜವಾಡರಿಗೆ ಉಪಮೇಯರ್ ಪಟ್ಟದ ಆಸೆ ತೋರಿಸಿ ಸೇರಿಸಿಕೊಂಡಿತ್ತು. ನಿನ್ನೆ 48ನೇ ವಾರ್ಡಿನ ಕಿಶನ್ ಬೆಳಗಾವಿ ಮತ್ತು 56 ನೇ ವಾರ್ಡಿನಿಂದ ಆಯ್ಕೆಯಾದ ಚಂದ್ರಿಕಾ ಮೇಸ್ತ್ರಿ ಇಬ್ಬರನ್ನು ಸೇರಿಸಿಕೊಳ್ಳುವ ಮೂಲಕ ಬಿಜೆಪಿ ಪಾಲಿಕೆಯಲ್ಲಿನ ಸಂಖ್ಯಾ ಬಲವನ್ನು 39ರಿಂದ 42ಕ್ಕೆ ಏರಿಸಿಕೊಂಡಿದೆ.ಅಲ್ಲದೇ ಜನಪ್ರತಿನಿಧಿಗಳಾದ ಜೋಶಿ, ಶೆಟ್ಟರ್, ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್, ಸಂಕನೂರ ಸೇರಿ 6 ಮತ ಸೇರಿ ಬಲ 48ಕ್ಕೇರಿದೆ. ಕಾಂಗ್ರೆಸ್ ಬಲ 33 , ಪಕ್ಷೇತರೆ ಅಕ್ಷತಾ ಮೋಹನ ಅಸುಂಡಿ , ಶಾಸಕ ಅಬ್ಬಯ್ಯ ಸೇರಿ 35 ಆಗಲಿದೆ. ಒಟ್ಟು 6 ಪಕ್ಷೇತರರಲ್ಲಿ ಮೂವರು ಬಿಜೆಪಿ ಪಾಲಾದರೆ ಉಳಿದ ಮೂವರು, ಎಂಐಎಂನ ಮೂವರು, ಹಾಗೂ ಜೆಡಿಎಸ್ ಒಂದು ಸದಸ್ಯ ಬಲ ಹೊಂದಿದ್ದಾರೆ.
ಪೂರ್ವ ಅನಾಥ
ಮುಂದಿನ ವರ್ಷ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವ ಕ್ಷೇತ್ರಕ್ಕೆ ಯಾವುದಾದರೂ ಸ್ಥಾನ ದಕ್ಕಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು ಮತ್ತೆ ಅನಾಥವಾಗಿದೆ. ಶಿವು ಮೆಣಸಿನಕಾಯಿ ಮೇಯರ್ ರೇಸ್ನಲ್ಲಿ ಇದ್ದರಾದರೂ ಅಂತಿಮವಾಗಿ ಲೆಕ್ಕಕ್ಕಿಲ್ಲವಾಯಿತು. ಉಪಮೇಯರ್ ಸ್ಥಾನವಾದರೂ ದೊರೆಯಬಹುದೆಂಬ ಲೆಕ್ಕಾಚಾರವೂ ತಲೆಕೆಳಗಾಯಿತು.
ಈಡೇರದ ಬೆಲ್ಲದ ಬೇಡಿಕೆ
ಪಶ್ಚಿಮ ಕ್ಷೇತ್ರ ವ್ಯಾಪ್ತಿಗೆ ಮೇಯರ್ ಪಟ್ಟ ದೊರೆಯಲೇ ಬೇಕೆಂದು ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರ ಬ್ಯಾಟಿಂಗ್ ಆರ್ ಸಿಬಿಯ ಬ್ಯಾಟಿಂಗ್ನಂತೆಯೇ ವೈಫಲ್ಯ ಅನುಭವಿಸಿತು. ವಿಜಯಾನಂದ ಶೆಟ್ಟಿಯವರ ಹೆಸರನ್ನು ಇವರೇ ಮುಂದಕ್ಕೆ ಬಿಟ್ಟಿದ್ದರೂ ಮಧ್ಯ ರಾತ್ರಿಯವರೆಗೂ ಮುಂಚೂಣಿಯಲ್ಲಿತ್ತು.ಆದರೆ ಅಂತಿಮವಾಗಿ ಮೂರು ಬಾರಿ ಆಯ್ಕೆಯಾದ ಶೆಟ್ಟಿಯವರ ಬದಲು ಅಂಚಟಗೇರಿ ಅಂತಿಮಗೊಳಿಸಲು ತೀರ್ಮಾನಿಸಲಾಯಿತು. ಆದರೂ ಧಾರವಾಡಕ್ಕೆ ಸಿಕ್ಕಿತೆಂಬ ಸಮಾಧಾನ ಮಾತ್ರ ಅವರದ್ದಾಯಿತು.
ಸಂಘಟನಾ ಚತುರನಿಗೆ ಮಹಾನಗರ ಚುಕ್ಕಾಣಿ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾಗಿ ಆಯ್ಕೆಯಾದ ಧಾರವಾಡದ ಈರೇಶ ಅಂಚಟಗೇರಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಬಲಗೈ ಬಂಟ ಎಂದೇ ಗುರುತಿಸಿಕೊಂಡವರು.
ವಿವಿಧ ಸಂಸ್ಥೆಗಳ ಮೂಲಕ ಶಿಕ್ಷಣ, ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತಮ್ಮು ತೊಡಿಸಿಕೊಂಡಿದ್ದು, ೨೦೨೧ರ ಅಗಸ್ಟನಲ್ಲಿ ನಡೆದ ಚುನಾವಣೆಯಲ್ಲಿ ಧಾರವಾಡದ ಮೂರನೇ ವಾರ್ಡ್ನಿಂದ ಎರಡನೇ ಅವಧಿಗೆ ಚುನಾಯಿತರಾಗಿದ್ದಾರೆ. ಬೆಳಗಾವಿ ಲಿಂಗಾಯತ ನೇಕಾರ ಸಮಾಜದ ಮನೆತನದಲ್ಲಿ 1971, ಜನವರಿ 9ರಂದು ಜನಿಸಿರುವ ಈರೇಶ ಅವರು, ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದು ಪ್ರಸ್ತುತ ಸ್ನಾತಕೋತ್ತರ ಪದವಿ ಮುಂದುವರಿಸಿದ್ದಾರೆ. ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಕರ್ನಾಟಕ ಪ್ರಾಂತದ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಣ್ಣ ಕೈಗಾರಿಕೋದ್ಯಮಿಯಾಗಿ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಎಲ್ಲ ವರ್ಗಗಳ ಜನರ ವಿಶ್ವಾಸ ಪಡೆದಿರುವ ಅವರು, ಸದಾ ಜನರ ಅವಶ್ಯಕತೆಗಳನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ಸಹಾಯ ಹಸ್ತ ನೀಡುತ್ತ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿ ಪಕ್ಷದ ನೀತಿ ಸಿದ್ದಾಂತದ ಅನುಷ್ಠಾನದಲ್ಲಿ ಮತ್ತು ಸಮಾಜ ಸೇವೆ ಭಾಗಿಯಾಗಿದ್ದಾರೆ. 1994-96 ರ ಅವಧಿಯಲ್ಲಿ ಬಿಜೆಪಿ ಧಾರವಾಡ ನಗರ ಯುವ ಘಟಕದ ಕಾರ್ಯದರ್ಶಿಯಾಗಿ, 1996-1999 ರ ವರೆಗೆ ಧಾರವಾಡ ಘಟಕದ ಕಾರ್ಯದರ್ಶಿಗಳಾಗಿ, 1999 ರಿಂದ 2002 ರ ವರೆಗೆ ಧಾರವಾಡ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, 2006 ರಿಂದ 2009 ರ ಅವಧಿಯಲ್ಲಿ ಧಾರವಾಡ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 2001 ರಲ್ಲಿ ನಾಲ್ಕನೇ ವಾರ್ಡಿನಿಂದ ಒಂದು ಅವಧಿ ಆಯ್ಕೆಯಾಗಿದ್ದ ಇವರು ತದನಂತರ ಮಹಿಳಾ ಮೀಸಲಾದ ಕಾರಣ ಸ್ಪರ್ಧೆಗಿಳಿಯದೇ ಒಮ್ಮೆ ತಾಯಿಯನ್ನು ಗೆಲ್ಲಿಸಿದ್ದರು.
ಇದರ ಮೂಲಕ ಪಕ್ಷದ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸೇವೆ ಗುರುತಿಸಿ ಪಕ್ಷ ಅವರಿಗೆ ಹೆಚ್ಚಿನ ಅವಕಾಶ ಮತ್ತು ಜವಾಬ್ದಾರಿ ನೀಡಿದೆ. ಅಲ್ಲದೇ ಈಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಹುದ್ದೆ ಅವರಿಗೆ ಅರಸಿ ಬಂದಿದೆ.ಮೇಯರ್ ಮೀಸಲಾತಿ ಪ್ರಕಟವಾದಾಗಲೇ ಈರೇಶ ಅಂಚಟಗೇರಿ ಹೆಸರು ಮೊದಲು ಪ್ರಸ್ತಾಪವಾಗಿ ಅವರೆ ನಿಕ್ಕಿ ಎಂಬ ಗುಸು ಗುಸು ದಟ್ಟವಾಗಿತ್ತು.
೨೦೦೪ರಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರದಿಂದ ಜಿಲ್ಲಾ ಯುವ ಪ್ರಶಸ್ತಿ ಲಭಿಸಿದೆ. ಈರೇಶ ಅಂಚಟಗೇರಿ ತಮ್ಮ ಅಪಾರ ಅನುಭವದಿಂದ ಭಿನ್ನ ವರ್ಗದಲ್ಲಿ ಸಮಾಜಿಕ ಚಿಂತನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಭಾಗಿತ್ವ ಹೊಂದಲು ಪ್ರೇರಣೆಯಾಗಿದ್ದಾರೆ. ತಮ್ಮ ನಾಯಕತ್ವದ ಗುಣಗಳಿಂದ ಮತ್ತು ವಿಷಯಗಳ ಸಮಗ್ರ ಮಾಹಿತಿಯಿಂದ ನಾಗರಿಕ ಸಮಾಜದ ಜವಾಬ್ದಾರಿ ಗ್ರಹಿಸಲು ಮತ್ತು ಸಮಸ್ಯೆಗಳಿಗೆ ಸಮಾಧಾನ ಕಂಡುಹಿಡಿಯುವ ಸಾಮರ್ಥ್ಯ ಹೊಂದಿದ್ದಾರೆ.
ಮೊದಲ ಪ್ರವೇಶದಲ್ಲೇ ಬಂಪರ್
ಕಳೆದ ಅನೇಕ ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿರುವ ಅಲ್ಲದೇ ಸೆಂಟ್ರಲ್ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ 44 ನೇ ವಾರ್ಡಿನಿಂದ 2583 ಮತ ಪಡೆದು ವಿಜಯ ಪತಾಕೆ ಹಾರಿಸಿದ್ದ ಉಮಾ ಮುಕುಂದ ಉಪ ಮೇಯರ್ ಹುದ್ದೆಗೆ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಜೋಶಿ ಮತ್ತು ಶೆಟ್ಟರ್ ಕಟ್ಟಾ ಅನುಯಾಯಿಯಾಗಿರುವ ಇವರು ಪಾಲಿಕೆಗೆ ಬಲಗಾಲಿಟ್ಟ ಮೊದಲ ಅವಧಿಯಲ್ಲೇ ದೊಡ್ಡ ಹುದ್ದೆ ಒಲಿದು ಬಂದಿದೆ.