ಹುಬ್ಬಳ್ಳಿ-ಧಾರವಾಡ ಸುದ್ದಿ
ಶೇ.40ರಷ್ಟು ಹೆಚ್ಚು ಮತದಿಂದ ಗೆಲುವು: ಹೊರಟ್ಟಿ ವಿಶ್ವಾಸ

ಶೇ.40ರಷ್ಟು ಹೆಚ್ಚು ಮತದಿಂದ ಗೆಲುವು: ಹೊರಟ್ಟಿ ವಿಶ್ವಾಸ

ತಂಡ ಗೆದ್ದಾಗ ಕ್ರೆಡಿಟ್ ನಾಯಕನಿಗೆ – ಎಚ್‌ಡಿಕೆಗೆ ತಿರುಗೇಟು

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಪ್ರಸಕ್ತ ಬಾರಿ ಶೇ. 40 ರಷ್ಟು ಹೆಚ್ಚು ಮತ ಪಡೆದು ಗೆಲುವು ಸಾಧಿಸುವ ವಿಶ್ವಾಸವನ್ನು ಭಾರತೀಯ ಜನತಾ ಪಕ್ಷದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.


ನಗರದ ಮಂತ್ರಾ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮೇಲೆ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿದ್ದು ಸತತ ಏಳು ಗೆಲುವುಗಳನ್ನು ಕಂಡಿದ್ದು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದೇನೆ ಎಂದರು. ಪ್ರತಿ ಸಲ ನನಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯೇ ಎದುರಾಳಿಯಾಗುತ್ತಿದ್ದರು. ಈ ಸಲ ನಾನೇ ಆ ಪಕ್ಷದ ಅಭ್ಯರ್ಥಿಯಾಗಿದ್ದು ಗೆಲುವು ಸುಲಭವಾಗಲಿದೆ.ಅಲ್ಲದೇ ಅತೀ ಹೆಚ್ಚು ಮತಗಳ ಅಂತರದಿಂದ ಜಯ ದಕ್ಕಲಿದೆ ಎಂದರು.


ಹೊರಟ್ಟಿ ಅವರು 7 ಸಲ ಪ್ರತಿನಿಧಿಸಿದರೂ ಕೂಡ ಯಾವುದೇ ಹೇಳಿಕೊಳ್ಳುವ ಕೆಲಸ ಮಾಡಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೌದು, ಕುಮಾರಸ್ವಾಮಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಏಕೆಂದರೆ ಅವರು ಮುಖ್ಯ ಮಂತ್ರಿಯಾಗಿದ್ದರು. ಒಂದು ಕ್ರಿಕೆಟ್ ಟೀಂನಲ್ಲಿ ಯಾರು ’ನಾಯಕರು ಇರುತ್ತಾರೋ ಅವರಿಗೆ ಹೆಚ್ಚಿನ ಶ್ರೇಯಸ್ಸು ಧಕ್ಕುತ್ತದೆ. ತಂಡ ವಿಜಯಶಾಲಿಯಾದಾಗ ತಂಡದ ನಾಯಕನೇ ಪ್ರಶಸ್ತಿ ಪಡೆಯುತ್ತಾನೆ ಎಂದು ಸೌಮ್ಯವಾಗಿಯೇ ತಿರುಗೇಟು ನೀಡಿದರು.
ನಾನು ಕೆಲಸ ಮಾಡಿಲ್ಲ ಎಂದಾದರೆ, ಶಿಕ್ಷಕರು ನನ್ನ ಏಳು ಸಲ ಆಯ್ಕೆ ಮಾಡುತಿದ್ದರಾ ಎಂದು ಪ್ರಶ್ನಿಸಿದರಲ್ಲದೇ ನಾನು ಏನು ಮಾಡಿದ್ದೇನೆ ಎನ್ನುವುದರ ಬಗ್ಗೆ ಸಾಧನೆ ಪುಸ್ತಕ ಹೊರತಂದಿದ್ದೇನೆ. ಶಿಕ್ಷಕರ ನೇಮಕಾತಿ, ಶಿಕ್ಷಕರ ವರ್ಗವಣೆ ಶಿಕ್ಷಕರಿಗೆ ಅನೇಕ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, ನಾನು ಮಾಡಿದ ಸಾಧನೆಯಲ್ಲಿ ಸುಳ್ಳು, ಇದ್ದರೆ ನನ್ನ ಮೇಲೆ ಕೇಸ್ ಹಾಕಲಿ ಎಂದು ಸವಾಲು ಹಾಕಿದರು.

17,244 ಮತದಾರರಲ್ಲಿ 10,601 ಶಿಕ್ಷಕರು, 6643 ಶಿಕ್ಷಕಿಯರು ಇದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಧಾರವಾಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ 5,889 ಮತದಾರರಿದರ, ಎರಡನೇ ಸ್ಥಾನದಲ್ಲಿ ಹಾವೇರಿ ಜಿಲ್ಲೆಯಲ್ಲಿ 4630 ಉತ್ತರ ಕನ್ನಡ ಜಿಲ್ಲೆಯಲ್ಲಿ 3499 ಹಾಗೂ ಗದಗ ಜಿಲ್ಲೆಯಲ್ಲಿ 3226 ಮತದಾರರು ಇದ್ದಾರೆ ಎಂದು ವಿವರ ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮುಖಂಡರಾದ ಲಿಂಗರಾಜ ಪಾಟೀಲ್, ರಾಜಣ್ಣ ಕೊರವಿ, ವಕ್ತಾರ ರವಿ ನಾಯಕ, ವಸಂತ ಹೊರಟ್ಟಿ, ಶಿಕ್ಷಕ ಮುಖಂಡರಾದ ಜಿ.ಆರ್.ಭಟ್ಟ, ಶ್ಯಾಮ ಮಲ್ಲನಗೌಡರ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *