ಶಿಕ್ಷಕರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ
ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಸುಧಾರಣೆಗೆ ಕಳೆದ ನಾಲ್ಕು ದಶಕ ಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ರಾಜ್ಯದ ಶಿಕ್ಷಕ ಸಮುದಾಯದ ಏಕೈಕ ಆಶಾಕಿರಣವಾಗಿರುವ ಬಸವರಾಜ ಹೊರಟ್ಟಿಯವರು ಶಿಕ್ಷಣ ಕ್ಷೇತ್ರದ ದಂತ ಕಥೆಯಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ಆದರ್ಶನಗರದ ಡಾ. ಜಿ.ವ್ಹಿ.ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೊರಟ್ಟಿಯವರ ಚುನಾವಣಾ ಪ್ರಚಾರಾರ್ಥ ನಡೆದ ಶಿಕ್ಷಕರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಹೊರಟ್ಟಿಯವರ ಚುನಾವಣೆ ಎಂದರೆ ಶಿಕ್ಷಕ ಸಮೂಹದಲ್ಲೆಡೆ ಸಂಭ್ರಮ ಮನೆಮಾಡಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಕಳೆದ 42 ವರ್ಷ ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೊರಟ್ಟಿಯವರು ಅಮೂಲ್ಯ ಕೊಡುಗೆ ನೀಡಿದ್ದು ಶಿಕ್ಷಣ ಕ್ಷೇತ್ರದಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸಿ ಕಾನೂನು ತೊಡಕನ್ನು ಸರಳಗೊಳಿಸಿ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಶಿಕ್ಷಕರಿಗೆ ನ್ಯಾಯ ಒದಗಿಸುವ ಮೂಲಕ ರಾಜ್ಯದ ಶಿಕ್ಷಕ ಸ್ನೇಹಿ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
1983 ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ಜಾರಿಗೆ ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಬಂದಿದ್ದು ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಬದಲಾವಣೆಗೆ ತಕ್ಕಂತೆ ಶಿಕ್ಷಣ ಕ್ಷೇತ್ರಕ್ಕೆ ಸದಾಕಾಲ ಬೆಂಬಲ ನೀಡುತ್ತ ಹೊರಟ್ಟಿಯವರು ಪ್ರತಿಯೊಂದು ಸಮಸ್ಯೆ ಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ರಾಜ್ಯದಲ್ಲಿ ಶಿಕ್ಷಕರಿಗೆ ಎಲ್ಲ ರೀತಿಯ ನ್ಯಾಯ ಒದಗಿಸಿ ರುವ ಏಕೈಕ ನಾಯಕ ಎಂದರೆ ಅದು ಬಸವರಾಜ ಹೊರಟ್ಟಿಯವರು. ಶಿಕ್ಷಕರ ಬಗ್ಗೆ ಅಪಾರವಾದ ಶೃದ್ಧೆ, ಕಾಳಜಿ ಇರುವ ಏಕೈಕ ನಾಯಕ ರಾಗಿರುವ ಹೊರಟ್ಟಿಯವರು ಶಿಕ್ಷಣ ಕ್ಷೇತ್ರದ ಸುಧಾರಣೆ ಮತ್ತು ಶಿಕ್ಷಕರ ಸಮಸ್ಯೆಗಳ ಈಡೇರಿಕೆ ಕುರಿತು ನಡೆಸಿದ ಹೋರಾಟ ಹಾಗೂ ಅವರ ಕೊಡುಗೆ ಕುರಿತು ಸಂಶೋಧನೆ ನಡೆಸಬೇಕೆನ್ನುವದು ನನ್ನ ಆಕಾಂಕ್ಷೆಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಇಂದು ಮೋದಿ ನೇತೃತ್ವದ ಸರಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗುತ್ತಿದೆ. ಈ ಸಂದರ್ಭದಲ್ಲಿ ಹೊರಟ್ಟಿಯವರು ರಾಜ್ಯದ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಚಿಂತನೆಯಿಂದ ಬಿ.ಜೆ.ಪಿ. ಸೇರಿದ್ದಾರೆ. ಬಿ.ಜೆ.ಪಿ. ಮತ್ತು ಹೊರಟ್ಟಿ ಎರಡೂ ಶಕ್ತಿಗಳು ಇಂದು ಸಮ್ಮಿಳಿತಗೊಂಡಿದ್ದು ಇದರಿಂದ ಈ ಬಾರಿ ಚುನಾವಣೆಯಲ್ಲಿ ಬಿ.ಜೆ.ಪಿ. ಅರ್ಭರ್ಥಿ ದಾಖಲೆ ಪ್ರಮಾಣದಲ್ಲಿ ಜಯಶಾಲಿಯಾಗಲಿದ್ದು ಹೊರಟ್ಟಿಯವರ ಗೆಲುವು ನಾಡಿನ ಶಿಕ್ಷಕರೆಲ್ಲರ ಗೆಲುವು ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ ಶಿಕ್ಷಕರು ಹಾಗೂ ತಮ್ಮ ನಡುವೆ ಕುಟುಂಬ ರೀತಿಯ ಬಾಂಧವ್ಯವಿದ್ದು ಪರಸ್ಪರ ಪ್ರೀತಿ ವಿಶ್ವಾಸವಿದೆ ಕಳೆದ ಏಳು ಚುನಾವಣೆಯಲ್ಲಿಯೂ ಸಹ ಎಲ್ಲಾ ಶಿಕ್ಷಕರು ಪಕ್ಷಾತೀತವಾಗಿ ತಮ್ಮನ್ನು ಬೆಂಬಲಿಸಿದ್ದು ಈ ಬಾರಿಯೂ ಸಹ ಎಲ್ಲಾ ಶಿಕ್ಷಕರು ನನ್ನನ್ನು ಬೆಂಬಲಿಸುವ ಅದಮ್ಯ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಮಹೇಶ ಟೆಂಗಿನಕಾಯಿ, ರಾಜಣ್ಣ ಕೊರವಿ, ವಸಂತ ಹೊರಟ್ಟಿ, ಡಾ. ಪಿ.ವಿ. ಜತ್ತಿ, ಡಾ. ಬಿ.ಆರ್. ಪಾಟೀಲ, ಶಿವಾನಂದ ಹಂಡೆ, ಸುಭಾಷ ಜವಳಿ, ಎಮ್.ಕೆ. ಪಾಟೀಲ, ಸದಾನಂದ ಕಾಮತ, ಇನ್ನಿತರರಿದ್ದರು.
ಆರ್‌ಎಸ್‌ಎಸ್ ಟೀಕಿಸಿಯೇ ಕಾಂಗ್ರೆಸ್ ಜನರಿಂದ ದೂರ
ಹುಬ್ಬಳ್ಳಿ: ಆರ್‌ಎಸ್‌ಎಸ್ ವಿರುದ್ಧ ಮಾತನಾಡುವುದೇ ಕಾಂಗ್ರೆಸ್ ಕೆಲಸ ವಾಗಿದೆ. ಹೀಗೆ ಟೀಕೆ ಮಾಡಿಯೇ ದೇಶದಲ್ಲಿ ಕಾಂಗ್ರೆಸ್ ಜನರಿಂದ ದೂರ ವಾಗಿದೆ. ಇದೀಗ ರಾಜ್ಯದಲ್ಲಿ ಸಿದ್ದರಾಮಯ್ಯ ಅದನ್ನೇ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೭೫ ವರ್ಷದಿಂದ ಆರ್‌ಎಸ್‌ಎಸ್ ಸಂಘಟನೆ ದೇಶಭಕ್ತಿ ಹಾಗೂ ಜನರ ಸೇವೆಯಲ್ಲಿ ತೊಡಗಿದೆ. ಹಲವಾರು ಸಂದರ್ಭಗಳಲ್ಲಿ ಅನಾಹುತಗಳಾದಾಗ ಜನರ ಸಂಕಷ್ಟಕ್ಕೆ ಸ್ಪಂದಿಸಲು ಅವರ ಪರವಾಗಿ ನಿಂತಿದೆಕಾಂಗ್ರೆಸ್‌ನವರು ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಸಂಘವನ್ನು ಟೀಕಿಸುತ್ತಿದ್ದಾರೆ ಎಂದರು.
ಹೀಗೆ ವಿನಾಕಾರಣ ಟೀಕೆ ಮಾಡಿ ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಇಲ್ಲಂದತಾಗಿದೆ. ರಾಜಕೀಯ ಟೀಕೆಗಳಿಗಾಗಿ ದೇಶಭಕ್ತಿ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಲ್ಲಿಯೂ ಕೂಡ ಕಾಂಗ್ರೆಸ್ ಹೆಸರು ಹೇಳದಂತಹ ಮಟ್ಟಕ್ಕೆ ಹೋಗಲಿದೆ ಎಂದು ಹೇಳಿದರು.
ಪಠ್ಯ ಪುಸಕ್ತದ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರು ಈಗಾಗಲೇ ಆ ಕುರಿತು ಉತ್ತರ ಕೊಟ್ಟಿದ್ದಾರೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ವಿಚಾರದ ಕುರಿತು ಗೊತ್ತಾಗಬೇಕಾದರೆ ಜೂನ್ ೧೦ರವರೆಗೆ ಕಾಯಿರಿ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಹೇಳಿದರು.