ಯಾವುದೇ ಸಾಹಿತಿಗಳನ್ನು ಕಡೆಗಣಿಸಿಲ್ಲ
ಧಾರವಾಡ: ಪಠ್ಯಪುಸ್ತಕದ ತಪ್ಪುಗಳನ್ನು ಒಪ್ಪಿಕೊಂಡಿದ್ದು, ಅದರಲ್ಲಿನ ಲೋಪದೋಷ ಶೀಘ್ರದಲ್ಲೇ ಸರಿಪಡಿಸಿ, ಪರಿಷ್ಕೃತ ಪಠ್ಯಪುಸ್ತಕ ಪೂರೈಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.
ಪರಿಷತ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಠ್ಯ, ಪುಸ್ತಕ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕರಾಗಿರಬೇಕು. ಈ ರೀತಿಯ ತಪ್ಪು ಆಗಿರುವುದನ್ನು ಗಮನಿಸಿ ಅದರ ಮರು ಪರಿಷ್ಕರಣೆಗೆ ನಾವು ಮುಂದಾಗಿದ್ದೇವೆ ಎಂದರು.
ಬಸವಣ್ಣನ ಪಠ್ಯದಲ್ಲಿ ಹಲವಾರು ಹೊಸ ವಿಚಾರಗಳನ್ನು ಅಳವಡಿಸಿದೆ. ಈ ರೀತಿಯ ಲೋಪಗಳು ಆದಾಗ ಯಾರೇ ಅದನ್ನು ಕಂಡು ಹಿಡಿದರೆ ಅದನ್ನು ಸರಿಪಡಿಸುತ್ತೇವೆ. ನಾವು ತಪ್ಪನ್ನು ಮುಚ್ಚಿಡುವುದಿಲ್ಲ. ಸದ್ಯ ನಡೆಯುತ್ತಿರುವ ವಾದ, ವಿವಾದಗಳು ಮಕ್ಕಳ ಮೇಲೆ ಪರಿಣಾಮ ಬೀರುವುದು ಬೇಡ. ಹೀಗಾಗಿ ಪಠ್ಯದಲ್ಲಾದ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಪಠ್ಯದಲ್ಲಿ ಯಾವುದೇ ಸಾಹಿತಿಗಳನ್ನು ನಾವು ಕಡೆಗಣಿಸಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮಹಾರಾಜರ ಕಥೆಗಳನ್ನು ತೆಗೆದೆ ಟಿಪ್ಪು ಸುಲ್ತಾನ್ ಕಥೆ ಹಾಕಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತು ಹಾಕಿ ನೆಹರೂ ಪಾಠ ಹಾಕಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪುಸ್ತಕದಲ್ಲಿ ತರಲಾಗಿತ್ತು. ಇಂತಹ ನೂರು ಉದಾಹರಣೆಗಳಿವೆ ಎಂದರು.
ದೇವನೂರು ಮಹಾದೇವನವರು ಪಠ್ಯದಲ್ಲಿ ತಪ್ಪುಗಳಾಗಿದ್ದನ್ನು ನಮಗೆ ಹೇಳಬಹುದಿತ್ತು. ಆದರೆ, ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ. ಬರಗೂರು ರಾಮಚಂದ್ರಪ್ಪನವರ ಕಾಲದಲ್ಲೂ ಪಠ್ಯದಲ್ಲಿ ತಪ್ಪುಗಳಾಗಿದ್ದವು. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡಗೀತೆಗೆ ಅವಮಾನ ಮಾಡಲಾಗಿತ್ತು ಎಂದರು.
ಶಾಸಕ ಅಮೃತ ದೇಸಾಯಿ,ಮೇಯರ ಈರೇಶ ಅಂಚಟಗೇರಿ,
ಮಾಜಿ ಶಾಸಕಿ ಸೀಮಾ ಅಶೋಕ ಮಸೂತಿ, ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ಹಿರಿಯ ಮುಖಂಡ ತವನಪ್ಪ ಅಷ್ಟಗಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಮಂಡಳ ಅಧ್ಯಕ್ಷ ರುದ್ರಪ್ಪ ಅರಿವಾಳ, ಸಂಗನಗೌಡ ರಾಮನಗೌಡ್ರ, ಶಶಿಮೌಳಿ ಕುಲಕರ್ಣಿ, ನಾಗರಾಜ ಗಾಣಿಗೇರ ಇತರರು ಗೋಷ್ಠಿಯಲ್ಲಿದ್ದರು.
ಮತಬ್ಯಾಂಕ ರಾಜಕಾರಣ
ಧಾರವಾಡ: ಸಿದ್ದರಾಮಯ್ಯ ಚಡ್ಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು, ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಅವರು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಾರೆ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸ್ವಾತಂತ್ರ್ಯ ಬಂದಾಗಿನಿಂದ ಅವರು ಹೀಗೆ ಮಾಡುತ್ತಾ ಬಂದಿದ್ದಾರೆ. ಏನು ಸಿಗದೆ ಹೋದಾಗ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ ಎಂದರು.
ಸಿದ್ದರಾಮಯ್ಯ ಮತಬ್ಯಾಂಕ್ ಗೋಸ್ಕರ ಹೀಗೆ ಮಾಡುತ್ತಾರೆ. ಬೇಕಾದಷ್ಟು ವಿಷಯಗಳನ್ನು ಬಿಟ್ಟು ಆರ್‌ಎಸ್‌ಎಸ್ ಬಗ್ಗೆ ಯಾಕೆ ಮಾತನಾಡಬೇಕು. ಎಷ್ಟೊಂದು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಇಂತಹ ಸಮಯ ದಲ್ಲಿ ಸರ್ಕಾರಕ್ಕೆ ಅವರು ಸಲಹೆ ಕೊಡಬೇಕು. ಅದನ್ನು ಬಿಟ್ಟು ಹಿಜಾಬ್, ಮತ್ತು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದನ್ನು ಬಿಡಬೇಕು ಎಂದು ಸಚಿವರು ಹೇಳಿದರು.