ಸಿಸಿಟಿವಿಯಲ್ಲಿ ಮುಂದುವರಿದ ಶೋಧ
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ತಾಯಿಯ ಮಡಿಲಿನಿಂದ ಅಪಹರಣವಾಗಿದ್ದ 40 ದಿನದ ಹೆಣ್ಣು ಮಗು ಇಂದು ಆಸ್ಪತ್ರೆಯ ಆವರಣದಲ್ಲೇ ಪತ್ತೆಯಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಕಪ್ಪು ಬಣ್ಣದ ವ್ಯಕ್ತಿ ಮಡಿಲಿನಲ್ಲಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಎಂದು ಮಗುವಿನ ತಾಯಿ ದೂರಿದ್ದಳಲ್ಲದೇ ವಿದ್ಯಾನಗರ ಠಾಣೆಯಲ್ಲೂ ಮಗು ಅಪಹರಣ ಪ್ರಕರಣ ದಾಖಲಾಗಿತ್ತು. ಮಗುವಿನ ನಾಪತ್ತೆ ಪ್ರಕರಣದ ಗಂಭೀರತೆ ಅರಿತ ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ್ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪತ್ತೆಗೆ ಮೂರು ವಿಶೇಷ ತಂಡಗಳನ್ನು ನಿಯೋಜಿಸಿದ್ದರು.
ಇದೆಲ್ಲ ಬೆಳವಣಿಗೆ ಕಂಡು ಅಪಹರಣಕಾರರು ಮಗುವನ್ನು ಮರಳಿ ಆಸ್ಪತ್ರೆ ಆವರಣದಲ್ಲಿ ಪಿಎಂಎಸ್‌ಎಸ್‌ವೈ ಬಿಲ್ಡಿಂಗ್ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ ಮಗವಿನ ಹತ್ತಿರದವರ ಅಥವಾ ಕುಟುಂಬದವರ ಕೈವಾಡವು ಇರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಹೆಣ್ಣು ಮಗು ಪತ್ತೆಯಾಗಿದ್ದು ಶಿಶುವನ್ನು ತಾಯಿಗೊಪ್ಪಿಸಲಾಗಿದೆ. ಮಗು ಆರೋಗ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಿಮ್ಸ್ ಭದ್ರತಾ ಸಿಬ್ಬಂದಿಗಳು ಪಿಎಂಎಸ್‌ಎಸ್‌ವೈ ಬಿಲ್ಡಿಂಗ್ ಬಳಿಯ ಒಳಚರಂಡಿ ಹತ್ತಿರ ಮಗು ಬಿಟ್ಟು ಹೋದವನಿಗಾಗಿ ಸಿಸಿ ಟಿವಿಯಲ್ಲಿ ಶೋಧವನ್ನು ನಡೆಸಿದ್ದಾರೆ.
ನಡೆದಿದ್ದೇನು : ಕುಂದಗೋಳ ಪಟ್ಟಣದ ಮಗುವಿನ ತಾಯಿ ಉಮ್ಮೆ ಝೈನಾಬ್ ಹುಸೇನಸಾಬ್ ಶೇಖ್ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ತನ್ನ ಹೆಣ್ಣು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಕಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಮಧ್ಯಾಹ್ನ ೧ ಗಂಟೆ ಸುಮಾರಿಗೆ, ಅಳುತ್ತಿರುವ ಮಗುವನ್ನು ತಾಯಿ ಸಾಂತ್ವನ ಮಾಡುತ್ತಿದ್ದಾಗ ತಾಯಿ ಬಳಿಗೆ ಬಂದ ವ್ಯಕ್ತಿ ನನ್ನ ಮಗುವನ್ನು ಕಿತ್ತುಕೊಂಡ. ತಾಯಿ ಎದ್ದು ಅವನ ಹಿಂದೆ ಓಡಲು ಪ್ರಯತ್ನಿಸಿದರೂ ಅವನು ವೇಗವಾಗಿ ನಡೆದು ಕಣ್ಮರೆಯಾದನು. ತಾಯಿ ಸಹಾಯಕ್ಕಾಗಿ ಕೂಗಿದರೂ ಯಾರೂ ಇರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಳು.
ಎಲ್ಲ ಕ್ಯಾಮೆರಾ ಜಾಡು ಹಿಡಿದರೂ ಕೂಡ ಅಪಹರಣದ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ. ಮಗು ಪೋಷಕರ ಗೊಂದಲದ ಹೇಳಿಕೆ ಸಹ ಗೊಂದಲದಾಯಕವಾಗಿದ್ದು, ಮಗು ಕೈಯಲ್ಲಿದ್ದಾಗಲೇ ಕಸಿದುಕೊಂಡು ಹೋದರು ಎಂದು ಒಮ್ಮೆ ಹೇಳಿಕೆ. ಬೆಡ್ ಮೇಲೆ ಹಾಕಿದಾಗ ಎತ್ತಿಕೊಂಡು ಹೋದರು ಎಂದು ಮತ್ತೊಮ್ಮೆ ಹೇಳಿದ್ದಾಳೆ.