ನೂರಾರು ವ್ಯಾಪಾರಿಗಳಿಗೆ ಪಂಗನಾಮ – ರಾಜಾರೋಷ ವಸೂಲಿ
ಧಾರವಾಡ: ಪೇಡೆನಗರಿಯ ಸಪ್ತಾಪುರ, ಬಾರಾಕೋಟ್ರಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ನೂರಾರು ವ್ಯಾಪಾರಿಗಳಿಗೆ ಫುಡ್ ಲೈಸನ್ಸ್ ನೀಡಿಸುವುದಾಗಿ ಹೇಳಿ ಪುಡ್ ಸೇಪ್ಟಿ ನಕಲಿ ಅಧಿಕಾರಿಯೊಬ್ಬ ತಲಾ ಮೂರುವರೆ ಸಾವಿರ ರೂಗಳನ್ನು ಪಡೆದು ಪಂಗನಾಮ ಹಾಕಿದ್ದಾನೆ.
ಮಂಜುನಾಥ ಚವ್ಹಾಣ ಎಂಬುವವನೇ ನಕಲಿ ಅಧಿಕಾರಿಯಾಗಿದ್ದಾನೆ.ಕಳೆದ ಅನೇಕ ತಿಂಗಳುಗಳಿಂದ ಧಾರವಾಡದ ವಿವಿಧ ಭಾಗಗಲ್ಲಿ ಎಫ್ ಎಸ್ ಎಎ ಐ ಅಧಿಕಾರಿ ಎಂದು ಹೇಳಿಕೊಂಡು ಹಣ ಎತ್ತುವಳಿ ಮಾಡುತ್ತಿರುವ ಭೂಪನಾಗಿದ್ದು,ನಿನ್ನೆ ಸಪ್ತಾಪುರದಲ್ಲಿ ಜಾತ್ರೆ ಮಾಡಿದ್ದಾನೆನ್ನಲಾಗಿದೆ.
ಪ್ರತಿಯೊಂದು ಅಂಗಡಿಗೂ ತೆರಳಿ ನಿಮ್ಮ ಫುಡ್ ಲೈಸೆನ್ಸ್ ಎಲ್ಲಿ ತೋರಿಸಿ ಎಂದು ಅವಾಜ್ ಹಾಕುವ ಈತ ಪಾನಿ ಪುರಿ ಗಾಡಿ, ಎಗ್ ರೈಸ್ ಅಂಗಡಿ, ಹೋಟೆಲ್ ಹಾಗೂ ಕಿರಾಣಿ ಅಂಗಡಿಗಳಿಗೆ ತೆರಳಿ ಬೆದರಿಕೆ ಹಾಕುತ್ತಾನಲ್ಲದೇ ತದನಂತರ ತಾನೇ ಲೈಸೆನ್ಸ್ ಮಾಡಿಕೊಡುವದಾಗಿ ನೂರಕ್ಕೂ ಹೆಚ್ಚು ವ್ಯಾಪಾರಿಗಳ ಬಳಿಯಿಂದ ತಲಾ ಮೂರುವರೆ ಸಾವಿರ ರೂಪಾಯಿ ಪೀಕಿದ್ದಾನೆನ್ನಲಾಗಿದೆ.
ಅಸಲಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಕಚೇರಿಗೂ ಈತನಿಗೂ ಸಂಬಂಧವೇ ಇಲ್ಲ. ಆದರೂ ರಾಜಾರೋಷವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೆಸರು ಹೇಳಿಕೊಂಡು ವಸೂಲಿಗೆ ಇಳಿದಿದ್ದಾನೆ. ವಾಸ್ತವವಾಗಿ ಅಂಗಡಿ ಹಾಕುವ ಮೊದಲು ಮಹಾನಗರದಲ್ಲಿ ಪಾಲಿಕೆ ಲೈಸೆನ್ಸ್ ಪಡೆಯಬೇಕಾಗುತ್ತದೆ.
ಆಹಾರ ಗುಣಮಟ್ಟ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕಾದಲ್ಲಿ ನೂರು ರೂ.ಗಳಿಂದ ಗರಿಷ್ಠ 7500ರೂವರೆಗೆ ಅವರ ವ್ಯಾಪಾರ, ವಹಿವಾಟುಗಳಿಗನುಗುಣವಾಗಿ ತುಂಬಿ ಆನ್ ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು .ಒಂದು ವಾರದಲ್ಲಿ ಪ್ರಮಾಣಪತ್ರ ಬರುತ್ತದೆ ಆಹಾರ ಸುರಕ್ಷತಾ ಇಲಾಖೆ ಅಂಕಿತ ಅಧಿಕಾರಿ ಡಾ. ದೀಪಕಕುಮಾರ ಹೇಳುತ್ತಾರೆ.
ಈಗಾಗಲೇ ಕೆಲ ಅಂಗಡಿಕಾರರು ತಮಗೂ ದೂರವಾಣಿ ಮಾಡಿದ್ದು ತಮ್ಮ ಅಧಿಕಾರಿಗಳೂ ನೇರವಾಗಿ ಲೈಸೆನ್ಸ್ ಹಿನ್ನೆಲೆಯಲ್ಲಿ ಅಂಗಡಿಗೆ ಬರುವುದಿಲ್ಲ. ಹಾಗೇ ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಥಳಿಸಿ ಅಲ್ಲದೇ ನಮ್ಮ ಇಲಾಖೆಯ ಟೋಲ್ ಫ್ರಿ ನಂಬರಿಗೆ ದೂರು ನೀಡಬೇಕೆಂದು ಹೇಳಿದ್ದಾಗಿ ಡಾ. ದೀಪಕಕುಮಾರ ಮನವಿ ಮಾಡಿದರು.
ನಿನ್ನೆ ಧಾರವಾಡದ ಶ್ರೀ ಮೈಲಾರಲಿಂಗೇಶ್ವರ ಟ್ರೇಡರ್ಸ್‌ಗೆ ಮಹಾಶಯ ಚವ್ಹಾಣ ಬಂದು ಮಾಲೀಕ ನಾಗರಾಜ ಕಿರಣಗಿಗೆ ಫುಡ್ ಲೈಸೆನ್ಸ್ ಬಗ್ಗೆ ಕೇಳಿದಾಗ ಅಸಲಿಯತ್ತು ಹೊರಬಂದಿದೆ. ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಸಿದ್ದ ವಸ್ತು ಮಾರಾಟ ಮಾಡುವ ಕಿರಾಣಿ ಅಂಗಡಿಗಳಿಗೆ ಫುಡ್ ಲೈಸನ್ಸ್ ಅಗತ್ಯವಿಲ್ಲದಿದ್ದರೂ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿದ್ದು ನೂರಾರು ಪಂಗನಾಮ ಹಾಕಿದ್ದು ಇದುವರೆಗೂ ಒಂದೇ ಒಂದು ದೂರು ದಾಖಲಾಗಿಲ್ಲವಾಗಿದೆ. ಈಗ ನಕಲಿ ಎಂಬ ಗುಸು ಗುಸು ದಟ್ಟವಾಗಿ ಹಬ್ಬಿದ ನಂತರ ಕೆಲವರು ಉಪನಗರ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆನ್ನಲಾಗಿದೆ.
ಈಗಲಾದರೂ ಎಫ್‌ಎಸ್‌ಎಎಐ(ಫುಡ್ ಸೇಪಟಿ ಹಾಗೂ ಸ್ಟ್ಯಾಂಡರ್ಡ್ ಅಥೋರಿಟಿ ಆಫ್ ಇಂಡಿಯಾ) ಅಧಿಕಾರಿಗಳು ಎಚ್ಚೆತ್ತು ಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಧಾರವಾಡದ ಬಾರಾ ಕೋಟ್ರಿ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿಯ ವತಿಯಿಂದ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನಾಗರಾಜ ಕಿರಣಗಿ ಎಚ್ಚರಿಸಿದರು.