ಹುಬ್ಬಳ್ಳಿ-ಧಾರವಾಡ ಸುದ್ದಿ
ಸರಳವಾಸ್ತು ಗುರೂಜಿ ಭೀಕರ ಕೊಲೆ

ಸರಳವಾಸ್ತು ಗುರೂಜಿ ಭೀಕರ ಕೊಲೆ

ಪ್ರೆಸಿಡೆಂಟ್ ಹೊಟೆಲ್ ಲಾಬಿಯಲ್ಲೇ ಇರಿತ: ಬೆಚ್ಚಿಬಿದ್ದ ಜನತೆ

ಹುಬ್ಬಳ್ಳಿ: ನಗರದ ಉಣಕಲ್ ಕೆರೆಯ ಎದುರಿನ ಪ್ರೆಸಿಡೆಂಟ್ ಹೋಟೆಲ್‌ನ ರಿಸೆಪ್ಷನ್ ಕೌಂಟರ್ ಎದುರಿಗಿರುವ ಲಾಬಿಯಲ್ಲೇ ಸರಳ ವಾಸ್ತು ಸಂಸ್ಥಾಪಕ ಡಾ.ಚಂದ್ರಶೇಖರ ಗುರೂಜಿ ಅವರನ್ನು ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.


ಶ್ರೀನಗರ ಕ್ರಾಸ್ ಬಳಿಯ ಪ್ರೆಸಿಡೆಂಟ್ ಹೊಟೆಲ್‌ನಲ್ಲಿ ಕಳೆದ ದಿ. 2ರಂದೇ ಬಂದು ತಂಗಿದ್ದು ನಾಳೆ ರೂಮನ್ನು ಬಿಡುವವರಿದ್ದು ಇಂದು ಬೆಳಿಗ್ಗೆ ದುಷ್ಕರ್ಮಿಗಳು ಚಾಕುವಿನಿಂದ ಎಲ್ಲೆಂದರಲ್ಲಿ ಚುಚ್ಚಿ ಕೊಂದಿದ್ದಾರೆ.

ಹತ್ಯೆ ಮಾಡಿದ ಇಬ್ಬರನ್ನೂ ಸ್ವತಃ ಚಂದ್ರಶೇಖರ ಅಂಗಡಿ ಗುರೂಜಿಯವರೇ ಕರೆಸಿದ್ದು ಅವರು ಲಾಬಿಯಲ್ಲಿನ ಸೋಪಾದಲ್ಲಿ ಕಾಯುತ್ತ ಕುಳಿತಿದ್ದರು. ಆಗ ಮೇಲಿನಿಂದ ಇಳಿದು ಬಂದ ಗುರೂಜಿ ಅವರ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಮಾತನಾಡುತ್ತ ನಮಸ್ಕಾರ ಮಾಡುವಂತೆ ನಟಿಸಿ ಚಾಕುವಿನಿಂದ ಇರಿದಿದ್ದು, ಪ್ರೆಸಿಡೆಂಟ ಸಿಬ್ಬಂದಿ ತಪ್ಪಿಸಲು ಬಂದಾಗ ಅವರಿಗೂ ಚಾಕು ತೋರಿಸಿ ಬೆದರಿಸಿ ಪರಾರಿಯಾಗಿದ್ದಾರೆ.


ಜ್ಯೋತಿಷ್ಯದಿಂದ ನೊಂದವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಭಕ್ತರ ಸೋಗಿನಲ್ಲಿ ಬಂದ ಕಿಡಿಗೇಡಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆನ್ನಲಾಗಿದೆ. ಚಾಕು ಹಿಡಿದು ಹೋಟೆಲ್‌ನಿಂದ ಹೊರಗೆ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಆಯುಕ್ತ ಲಾಭೂರಾಮ, ಡಿಸಿಪಿ ಸಾಹಿಲ್ ಬಾಗ್ಲಾ ಪರಿಶೀಲನೆ ನಡೆಸಿದ್ದಾರೆ.


ಅಂಗಡಿಯವರ ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ತರಲಾಗಿದೆ. ಸರಳ ವಾಸ್ತುವಿನ ಸಂಶೋಧಕರಾಗಿದ್ದ ಡಾ.ಚಂದ್ರಶೇಖರ ಅಂಗಡಿ (ಸಿವಿಲ್ ಇಂಜಿನಿಯರ್ ಪದವಿ ಪಡೆದ ಬಳಿಕ ಮುಂಬೈನಲ್ಲಿ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಆರಂಭಿಸಿದ್ದರು. 1995 ರಲ್ಲಿ ’ಶರಣ ಸಂಕುಲ ಟ್ರಸ್ಟ್’ ಆರಂಭಿಸಿ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿದ್ದರು.


1998ರಲ್ಲಿ ಅವರಿಗೆ ಕನಸಿನಲ್ಲಿ ತಮ್ಮ ಮನೆಯ ಆಕಾರ ಕಾಣಿಸತೊಡಗಿತು ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳುವ ಮಾರ್ಗದ ಬಗ್ಗೆ ಆಲೋಚಿಸ ತೊಡಗಿದರು. ಪೂರ್ವಜರು ತಿಳಿವಳಿಕೆ ಹಾಗೂ ಸಂಪನ್ಮೂಲ ಕ್ರೂಡೀಕರಿಸಿ ಸುಂದರ ಕಲಾಕೃತಿಗಳನ್ನು, ಶಾಸ್ತ್ರಗಳನ್ನು ಹೇಗೆ ರೂಪಿಸಿದ್ದರು ಮತ್ತು ಇದು ದೈನಂದಿನ ಬದುಕಿನಲ್ಲಿ ಏಕೆ ಅಗತ್ಯ ಎಂಬುದರ ಬಗ್ಗೆ ತಿಳಿಯುತ್ತಾ ಹೋದರು. ನಂತರ ’ಸರಳವಾಸ್ತು’ ಬಗ್ಗೆ ಸಂಶೋಧನೆ ಮಾಡುತ್ತಾ ಹೋದರು. ಜನರಿಗೆ ಸರಳ ವಾಸ್ತುವಿನ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ಚಂದ್ರಶೇಖರ ಗುರೂಜಿ ನಿರತವಾಗಿದ್ದರು. ಪ್ರತ್ಯೇಕ ವಾಹಿನಿ ತೆರೆದು ವಾಸ್ತು ಬಗ್ಗೆ ಮಾಹಿತಿ ನೀಡುತ್ತಿದ್ದರು. ಕೊಲೆಯ ಸುದ್ದಿ ಹುಬ್ಬಳ್ಳಿಗರನ್ನು ಬೆಚ್ಚಿ ಬೀಳಿಸಿದೆ.

 

 

administrator

Related Articles

Leave a Reply

Your email address will not be published. Required fields are marked *