ಪ್ರೇಮ ವಿವಾಹ, ರಾಜಕೀಯ ದ್ವೇಷದಿಂದ ಹತ್ಯೆ ಶಂಕೆ – ಹಲವರು ವಶಕ್ಕೆ
ಹುಬ್ಬಳ್ಳಿ: ರಾಯನಾಳ ಗ್ರಾಮ ಪಂಚಾಯತ್ ಸದಸ್ಯನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ರಾತ್ರಿ ರಾಯನಾಳ ಬಳಿ ನಡೆದಿದೆ.
ಹುಬ್ಬಳ್ಳಿ ಬ್ಯಾಂಕರ್ಸ್ ಕಾಲೋನಿ ನಿವಾಸಿ ಗಂಗಿವಾಳ ಗ್ರಾಮದ ದೀಪಕ ಪಠದಾರಿ ಎಂಬ ಗ್ರಾ.ಪಂ.ಸದಸ್ಯನ ಹತ್ಯೆಯಾಗಿದ್ದು, ಕೌಟುಂಬಿಕ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮೇಟಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದ್ದರೂ ಇತ್ತೀಚೆಗೆ ನಡೆದ ಗ್ರಾ.ಪಂ ಅಧ್ಯಕ್ಷರ ಅವಿಶ್ವಾಸ ಹಿನ್ನೆಲೆಯೂ ತಳುಕು ಹಾಕಿಕೊಂಡಿದೆ ಎಂಬ ಮಾತು ಕೇಳಿ ಬರುತ್ತಿವೆ.
ದೀಪಕನು ರಾಯನಾಳ ಗ್ರಾಮದ ಮೇಟಿ ಕುಟುಂಬದ ಮಹಿಳೆಯನ್ನು ಐದು ವರ್ಷದ ಹಿಂದೆ ಕುಟುಂಬದವರ ಕಟು ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ. ಇದೇ ದ್ವೇಷದಿಂದ ಈ ಕುಟುಂಬದವರು ಸೋಮವಾರ ರಾತ್ರಿ 10.30ರ ಸುಮಾರಿಗೆ ಬೈಕ್‌ನಲ್ಲಿ ಗೆಳಯ ಬಸವರಾಜ ಮಾರಡಗಿಯನ್ನು ಬಿಡಲು ದೀಪಕ್ ಹೊರಟ ವೇಳೆ ರಾಯನಾಳ ಕುಂಬಾರ ಓಣಿ ಬಳಿ 8.10 ಜನರ ಗುಂಪು ಹೊಂಚು ಹಾಕಿ ಮಾರಕಾಸ್ತ್ರಗಳಿಂದ ಮನ ಬಂದಂತೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಡಿಸಿಪಿ ಸಾಹಿಲ ಬಾಗ್ಲಾ, ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಅಶೋಕ ಚವ್ಹಾಣ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆನ್ನಲಾಗಿದೆ.
ಪ್ರೇಮ ವಿವಾಹ ಹಾಗೂ ರಾಜಕೀಯ ದ್ವೇಷದಿಂದ ಕೊಲೆ ನಡೆದಿರಬಹುದು ಎನ್ನಲಾಗುತ್ತಿದ್ದು, ದೀಪಕ ಪಠದಾರಿ ಹೆಸರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ರೌಡಿ ಶೀಟರ್‌ಗಳ ಪಟ್ಟಿಯಲ್ಲೂ ಇದೆ.