ಬೇನಾಮಿ ಆಸ್ತಿಯೇ ಮುಳುವಾಯಿತ್ತು ವಾಸ್ತು ಗುರುವಿಗೆ
ಹುಬ್ಬಳ್ಳಿ: ನಗರದ ಶ್ರೀನಗರ ಕ್ರಾಸ್ ಬಳಿಯ ಪ್ರತಿಷ್ಠಿತ ಪ್ರೆಸಿಡೆಂಟ್ ಹೊಟೆಲ್ ರಿಸೆಷ್ಷನ್ ಕೌಂಟರ್ ಎದುರು ನಿನ್ನೆ ಬರ್ಬರವಾಗಿ ಹತ್ಯೆಯಾದ ಸರಳ ವಾಸ್ತು ಗುರೂಜಿ ಎಂದೇ ಖ್ಯಾತರಾದ ಡಾ.ಚಂದ್ರಶೇಖರ ಗುರೂಜಿಯವರ ಆಸ್ತಿಯೊಂದನ್ನು ಐದು ಕೋಟಿಗೆ ಮಾರಾಟ ಮಾರಿದ ವಿಚಾರದಲ್ಲೇ ಕೊಲೆ ನಡೆದಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.
ತಮ್ಮ ಬೇನಾಮಿ ಆಸ್ತಿಯೊಂದನ್ನು ಮಾರಾಟ ಮಾಡಿ ಪಡೆದ ಐದು ಕೋಟಿ ಕೊಡುವಂತೆ ಗುರೂಜಿ ಪದೇ ಪದೇ ಒತ್ತಡ ಹಾಕಿದ್ದರಿಂದಲೇ ಕೆಲ ವರ್ಷಗಳ ಹಿಂದೆ ಅತ್ಯಾಪ್ತನಾಗಿದ್ದ ಮಹಾಂತೇಶ ಶಿರೂರ ಕೊಲೆಗೆ ಸ್ಕೆಚ್ ರೂಪಿಸಿದ್ದ ಎನ್ನಲಾಗುತ್ತಿದೆ.
ಹಲವು ವರ್ಷಗಳ ಕಾಲ ಮುಂಬೈನಲ್ಲಿ ಸರಳವಾಸ್ತು ಮುಖ್ಯಸ್ಥನಾಗಿ ಕೆಲಸ ಮಾಡುತ್ತಾ ನಂಬಿಕೆ ಗಳಿಸಿದ್ದ ಮಹಾಂತೇಶನ ಹೆಸರಿನಲ್ಲಿ ಗುರೂಜಿ ಕೋಟ್ಯಾಂತರ ಮೌಲ್ಯದ ಆಸ್ತಿ ಮಾಡಿದ್ದು,ಅದರ ಪೈಕಿ ಐದು ಕೋಟಿಗೆ ಆಸ್ತಿಯೊಂದನ್ನು ಮಾರಿದ ವಿಚಾರವಾಗಿ ಹಲವು ಬಾರಿ ಗಲಾಟೆ ನಡೆದಿತ್ತೆನ್ನಲಾಗಿದ್ದು, ಆಸ್ತಿಯ ಹಣ ಏಕೆ ಕೊಡಬೇಕು ಎಂದು ರೊಚ್ಚಿಗೆದ್ದು ಮಂಜುನಾಥ ಮರೇವಾಡನ ಜೊತೆ ಸೇರಿ ಕೊಲೆ ಮಾಡಿದ್ದಾನೆಂದು ಮೂಲಗಳು ಹೇಳಿವೆ.
ನಿನ್ನೆ ರಾತ್ರಿಯಿಂದ ಪೊಲೀಸರು ಹಂತಕರ ವಿಚಾರಣೆ ನಡೆಸಿದ್ದು ಇಷ್ಟರಲ್ಲೇ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಪುನಃ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಪೊಲೀಸ್ ಆಯುಕ್ತ ಲಾಭೂರಾಮ್ ಹೇಳಿದ್ದಾರೆ.
ಮಹಾಂತೇಶ, ಹಾಗೂ ಮಂಜುನಾಥ ಇಬ್ಬರನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ ಅನೇಕ ಮಹತ್ವದ ಸಂಗತಿ ಬಾಯಿ ಬಿಟ್ಟಿದ್ದಾರೆಂದರು.
ಇಬ್ಬರು ಎಸಿಪಿಗಳು ಮೂವರು ಇನ್ಸ್ ಪೆಕ್ಟರ್ ಗಳಿಂದ ಆರೋಪಿಗಳ ವಿಚಾರಣೆ ನಡೆಸಿದ್ದು, ಬೇನಾಮಿ ಆಸ್ತಿ ಮಾರಾಟ ಹಿನ್ನಲೆಯಲ್ಲಿ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದು, ಗುರೂಜಿಯ ಒಟ್ಟು ಆಸ್ತಿ, ಎಲ್ಲೆಲ್ಲಿ ಇದೆ. ಅಲ್ಲದೇ ಯಾರ ಯಾರ ಹೂಡಿಕೆಯಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆನ್ನಲಾಗಿದೆ.
ಗುರೂಜಿ ತಮ್ಮ ಆಪ್ತ ವಲಯದ ಹತ್ತಕ್ಕೂ ಹೆಚ್ಚು ಮಂದಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಖರೀದಿ ಮಾಡಿರುವುದನ್ನು ಬಾಯಿ ಬಿಟ್ಟಿದ್ದು
ಅವಳಿನಗರ ಸುತ್ತಮುತ್ತಲು ಸುಮಾರು 200 ಎಕರೆ ಜಮೀನಿರುವ ಬಗೆಗೂ ಹೇಳಿದ್ದಾರೆನ್ನಲಾಗಿದೆ.
ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ
ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆ ಇಲ್ಲಿ ಸುಳ್ಳ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ನಡೆಯಿತು.
ನಗರದ ಸುಳ್ಳ ರಸ್ತೆಯಲ್ಲಿರುವ ಶಿವಪ್ರಭು ಲೇಔಟ್ ನಲ್ಲಿರುವ ಗುರೂಜಿಗೆ ಸೇರಿದ ಹೊಲದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದುವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಶವವನ್ನು ಕೂರಿಸಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದರೆ, ಗುರೂಜಿ ಅವರ ಮರಣೋತ್ತರ ಪರೀಕ್ಷೆ ಮಾಡಿ, ಶವವನ್ನು ಪ್ಲಾಸ್ಟಿಕ್ ನಿಂದ ಪ್ಯಾಕ್ ಮಾಡಿರುವುದರಿಂದ ಮಲಗಿಸಿ ಅಂತಿಮ ವಿಧಿವಿಧಾನವನ್ನು ಹುಬ್ಬಳ್ಳಿಯ ಮೂರುಸಾವಿರ ಮಠದ ಕೊಟ್ರೇಶ ಶಾಸ್ತ್ರಿ ನೇತೃತ್ವದಲ್ಲಿ ನೆರವೇರಿಸಲಾಯಿತು. ರಾಜಕೀಯ ಮುಖಂಡರು, ಉದ್ಯಮಿಗಳು,ಸಾಹಿತಿಗಳು, ಅಲ್ಲದೇ ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಗುರೂಜಿಯ ಭಕ್ತರು ಅಭಿಮಾನಿಗಳು ಅಂತ್ಯಕ್ರಿಯೆ ವೇಳೆ ಉಪಸ್ಥಿತರಿದ್ದರು.
ದ್ವೇಷದಿಂದ ಹತ್ಯೆ
ಬೆಂಗಳೂರು: ಸರಳವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆಗೆ ಹಗೆತನಕ್ಕೆ ವೈಯುಕ್ತಿಕ ದ್ವೇಷವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದೇಶದ ಮಾಜಿ ಉಪಪ್ರಧಾನಿ ದಿ. ಡಾ. ಬಾಬು ಜಗಜೀವನರಾಮ್ ಅವರ ೩೬ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಗಳು, ಚಂದ್ರಶೇಖರ ಗುರೂಜಿ ಅವರ ಕೊಲೆಗೂ, ಕಾನೂನು ಸುವ್ಯವಸ್ಥೆಗೂ ಸಂಬಂಧ ಇಲ್ಲ. ಇಂದಿನ ಯುವಕರಲ್ಲಿ ಮೂಡಿರುವ ಹಗೆತನ, ದ್ವೇಷ, ಮನಃಸ್ಥಿತಿಯಿಂದ ಈ ರೀತಿಯ ಕೃತ್ಯಗಳಾಗುತ್ತಿವೆ. ಇವನ್ನೆಲ್ಲಾ ದಮನ ಮಾಡಲು ಕಾನೂನನ್ನು ಮತ್ತಷ್ಟು ಬಿಗಿಗೊಳಿಸಬೇಕಿದೆ ಎಂದರು. ಈ ಹತ್ಯೆ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆಯ ಯಾವುದೇ ಲೋಪ ಇಲ್ಲ. ಯುವಕರ ಮನಃಸ್ಥಿತಿಗಳನ್ನು ಸರಿಪಡಿಸಬೇಕಿದೆ ಎಂದು ಅವರು ಹೇಳಿದರು.
ಎಫ್ಬಿಯಲ್ಲಿ ಸುಳಿವು
ಕೊಲೆ ಪ್ರಕರಣದ ಆರೋಪಿ ಮಹಾಂತೇಶ ಶಿರೂರ ಐದು ದಿನಗಳ ಹಿಂದೆಯೇ ಗುರೂಜಿ ಕೊಲೆಯ ಸುಳಿವು ನೀಡಿ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ ಹಾಕಿದ್ದು ಅದರಲ್ಲಿ ಭಗವದ್ಗೀತೆಯ ಶ್ಲೋಕದ ಪೋಸ್ಟ್ ಅನ್ನು ಶೇರ್ ಮಾಡಿದ್ದ.
‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನು ವಿಳಂಬವೇಕೆ ಪ್ರಭುವೇ ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇಯುಗೇ’ ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ.