ಹುಬ್ಬಳ್ಳಿ-ಧಾರವಾಡ ಸುದ್ದಿ
ರಾಜಣ್ಣ, ಶೆಟ್ರು, ಶಿವಣ್ಣ ,ರಾಧಕ್ಕಗೆ ಸ್ಥಾಯಿ ’ಅಧ್ಯಕ್ಷ’ಗಿರಿ?

ರಾಜಣ್ಣ, ಶೆಟ್ರು, ಶಿವಣ್ಣ ,ರಾಧಕ್ಕಗೆ ಸ್ಥಾಯಿ ’ಅಧ್ಯಕ್ಷ’ಗಿರಿ?

ಕೈ-ಕಮಲ ಮಧ್ಯೆ 4-3 ಹೊಂದಾಣಿಕೆ -ಅವಿರೋಧ ಬಹುತೇಕ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ನಾಡಿದ್ದು ಸೋಮವಾರ ಚುನಾವಣೆ ನಡೆಯಲಿದ್ದು ಎಲ್ಲ 28 ಸದಸ್ಯರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.


ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ ನಾಲ್ಕು ಹಾಗೂ ಮೂರು ಸೂತ್ರದನ್ವಯ ಹೊಂದಾಣಿಕೆ ಮಾಡಿಕೊಳ್ಳುವುದು ನಿಶ್ಚಿತವಾಗಿದ್ದು ಎರಡೂ ಪ್ರಮುಖ ಪಕ್ಷಗಳೇ ಹೊಂದಾಣಿಕೆ ಮಾಡಿಕೊಂಡಲ್ಲಿ ಚುನಾವಣೆ ಸಾಧ್ಯತೆ ಕಡಿಮೆಯಾಗಿದೆ.ಒಂದು ವೇಳೆ ಯಾವುದಾದರೂ ’ಅನುಕೂಲ’ ಮಾಡಿಕೊಡುವ ಪ್ರಸ್ತಾಪಕ್ಕೆ ಎಂಐಎಂ ಬರದೇ ಹಠವನ್ನೇ ಹಿಡಿದಲ್ಲಿ ಚುನಾವಣೆ ನಡೆದರೂ ಮೇಯರ್ ಮತ್ತು ಉಪಚುನಾವಣೆ ಫಲಿತಾಂಶವೇ ಮರುಕಳಿಸುವುದರಲ್ಲಿ ಸಂಶಯವಿಲ್ಲ.


ಮೇಯರ್ ಸ್ಥಾನಕ್ಕೆ ಡಜನ್‌ಗಟ್ಟಲೇ ಆಕಾಂಕ್ಷಿಗಳಿದ್ದರೂ ಪ್ರತ್ಯೇಕ ಪಾಲಿಕೆ ಕೂಗೂ ಮತ್ತು ಆಡಳಿತಕ್ಕೆ ಚಲನಶೀಲತೆ ನೀಡುವ ನಿಟ್ಟಿನಲ್ಲಿ ಅಂತಿಮವಾಗಿ ಈರೇಶ ಅಂಚಟಗೇರಿಯವರಿಗೆ ಗೌನ್ ಭಾಗ್ಯ ದೊರೆತಿದ್ದು ಹಿರಿಯರಿಗೆ ಈಗ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಲಕ್ಷ್ಯದಲ್ಲಿಟ್ಟುಕೊಂಡು ಸದಸ್ಯರನ್ನು ಆಯ್ಕೆ ಮಾಡುವರೆನ್ನಲಾಗಿದೆ. ಹಾಗಾಗಿ ಒಂದು ಬಾರಿ ಅಥವಾ ಹೆಚ್ಚಿಗೆ ಬಾರಿಗೆ ಆಯ್ಕೆಯಾದ ಮಾನದಂಡ ಅನ್ವಯ ಚುನಾಯಿಸಬಹುದಾಗಿದ್ದು ಬಹುತೇಕ ಹಿರಿಯರಿಗೆ ಸ್ಥಾನ ನಿಶ್ಚಿತ ಎನ್ನಲಾಗಿದೆ.


ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಹಿರಿಯ ಸದಸ್ಯರಾದ ರಾಜಣ್ಣ ಕೊರವಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ ಅಲ್ಲದೇ ಮಾಜಿ ಮೇಯರ್ ರಾಧಾಬಾಯಿ ಸಫಾರೆಗೆ ಪಟ್ಟ ನಿಶ್ಚಿತ ಎನ್ನಲಾಗಿದೆ. ಪ್ರಥಮ ಪ್ರಜೆಯಾಗಲು ರೇಸ್‌ನಲ್ಲಿದ್ದ ಅನೇಕರು ಸ್ಥಾಯಿ ಸಮಿತಿಗೆ ಆಯ್ಕೆ ಮಾಡುವಂತೆ ಪ್ರಮುಖರಿಗೆ ಒತ್ತಡ ಹೇರಿದ್ದಾರೆನ್ನಲಾಗಿದೆ.
ಅತ್ಯಂತ ನಿರ್ಣಾಯಕ ಸಮಿತಿಗಳಾದ ಹಣಕಾಸು ರಾಜಣ್ಣ ಪಾಲಾಗುವುದು ಖಚಿತ ಎನ್ನಲಾಗುತ್ತಿದ್ದು, ಕಾಮಗಾರಿ ಸ್ಥಾಯಿ ಸಮಿತಿ ವಿಜಯಾನಂದ ಶೆಟ್ಟಿಯವರಿಗೆ, ಶಿವು ಮೆಣಸಿನಕಾಯಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಒಲಿಯುವ ಸಾಧ್ಯತೆ ದಟ್ಟವಾಗಿದ್ದು, ಲೆಕ್ಕ ಸ್ಥಾಯಿ ಸಮಿತಿ ಕುರ್ಚಿಯಲ್ಲಿ ಶ್ರೀಮತಿ ಸಫಾರೆ ಕೂಡುವದು ನಿಕ್ಕಿ ಎನ್ನಲಾಗಿದೆ.

ಮೂರು ಕ್ಷೇತ್ರಗಳಿಗೂ ಹಂಚಿಕೆಯಾಗಲಿದ್ದು ಸ್ವತಃ ಮೇಯರ್ ಧಾರವಾಡ ಗ್ರಾಮೀಣ ಪ್ರತಿನಿಧಿಸುತ್ತಿರುವುದರಿಂದ ಪೂರ್ವಕ್ಕೆ ಎರಡು ಅಧ್ಯಕ್ಷಗಿರಿ ದಕ್ಕಲಿದೆ.
ಕಾಂಗ್ರೆಸ್‌ನಲ್ಲಿಯೂ ನಾಲ್ಕೂ ವಿಧಾನ ಸಭಾ ಕ್ಷೇತ್ರದ ಲೆಕ್ಕಾಚಾರದಲ್ಲಿ ಅಲ್ಲಿನ ಸದಸ್ಯ ಬಲ ಆಧರಿಸಿ ಪಾಲಿಕೆಯಲ್ಲಿನ ಹಿರಿತನ,ಅಲ್ಲದೇ ಪಕ್ಷದಲ್ಲಿನ ಸೀನಿಯಾರಿಟಿ ನೋಡಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಸೋಮವಾರ ಬೆಳಿಗ್ಗೆ 7.30ಕ್ಕೆ ಪಾಲಿಕೆ ವಿರೋಧಿ ಧುರೀಣರ ಕಚೇರಿಯಲ್ಲಿ ಎಲ್ಲ ಕಾರ್ಪೋರೇಟರ್‌ಗಳ ಕರೆದಿದ್ದು ಅಲ್ಲಿಯೇ ಸ್ಥಾಯಿ ಸಮಿತಿಗೆ ಆಯ್ಕೆ ಮಾಡುವುದಾಗಿ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.

administrator

Related Articles

Leave a Reply

Your email address will not be published. Required fields are marked *