ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವರ ಭೇಟಿ : ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಹುಬ್ಬಳ್ಳಿ ನಗರದ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಆಕ್ಸನಿಕ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಖಾನೆ ಯಲ್ಲಿ ನಿನ್ನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ ಮೂರಕ್ಕೇರಿದೆ.
ಇಂದು ಬೆಳಗಿನ ಜಾವ 1.40ರ ಸುಮಾರಿಗೆ ತಾರೀಹಾಳದ ಗೌರವ್ವರಭದ್ರಯ್ಯ ಹಿರೇಮಠ(45) ಮೃತರಾದರೆ, ಬೆಳಿಗ್ಗೆ 7.55 ಕ್ಕೆ ಕಲಘಟಗಿ ತಾಲೂಕಿನ ಲಿಂಗನಕೊಪ್ಪದವರಾದ ಮಾಳೇಶ ಬಸಪ್ಪ ಹದ್ದಣ್ಣವರ (27) ಕೊನೆಯುಸಿರೆಳೆದಿದ್ದಾರೆ. ಕಳೆದ ರಾತ್ರಿ 10.20ರ ಸುಮಾರಿಗೆ ವಿಜಯಲಕ್ಷ್ಮಿ ವೀರಭದ್ರಪ್ಪ ಸಾವನ್ನಪ್ಪಿದ್ದರು. ತಾರೀಹಾಳ ಕೈಗಾರಿಕಾ ಪ್ರದೇಶದ ದುರಂತ ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಸ್ಪಾರ್ಕಲ್ ಕ್ಯಾಂಡಲ್ ಉತ್ಪಾದನಾ ಘಟಕದಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದ್ದಾರೆ.
ಅಧಿಕಾರಿಗಳೆ ಇರಲಿ, ಫ್ಯಾಕ್ಟರಿ ಮಾಲೀಕರೆ ಇರಲಿ. ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ಕೂಲಂಕುಷ ತನಿಖೆಗೆ ಆದೇಶಿಸಲಾಗಿದೆ. ಮೃತ ವ್ತಕ್ತಿಗಳ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ ಎಂದರು.
ಅನಧಿಕೃತವಾಗಿ ನಡೆಸುತ್ತಿರುವ ಕಾರ್ಖಾನೆಗಳನ್ನು ಮೂರು ದಿನದಲ್ಲಿ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದು, ಮೂವರು ಮೃತಪಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಪೊಲೀಸ್ ಇಲಾಖೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಜಿಲ್ಲಾಡಳಿತಕ್ಕೆ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಒಂದು ತಿಂಗಳ ಹಿಂದೆ ಕಾರ್ಖಾನೆ ಆರಂಭವಾಗಿತ್ತು. ಕಾನೂನಿನ ಪ್ರಕಾರ ಕಾರ್ಖಾನೆ ನಡೆಸಲು ಪರವಾನಗಿ ಪಡೆಯಬೇಕು. ಆದರೆ ಯಾವ ಇಲಾಖೆ ಯಲ್ಲಿ ಕಾರ್ಖಾನೆ ನೋಂದಣಿ ಮಾಡಿಸಿಲ್ಲ. ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು. ಯಾವುದೇ ಕಾರ್ಖಾನೆಯಾದರು ಮುಂಜಾಗೃತ ಕ್ರಮ ತೆಗದುಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಲೊಕೇಶ್ ಜಿ, ತಹಶೀಲ್ದಾರ ಶಶಿಧರ ಮಾಡ್ಯಾಳ, ತಾರಿಹಾಳದ ಪ್ರದೇಶದ ಉದ್ಯಮಿ ಮನೀಶ ನಾಯಕ ಇದ್ದರು
ನಿನ್ನೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ,ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ಹತೋಟಿಗೆ ತಂದಿತ್ತಲ್ಲದೇ 8 ಮಂದಿ ಗಾಯ ಗೊಂಡಿದ್ದರಲ್ಲದೇ ಮೂವರ ಸ್ಥಿತಿ ಚಿಂತಾಜನಕವಾಗಿತ್ತು. ಸ್ಫೋಟದ ತೀವ್ರತೆಗೆ ಬಾಯ್ಲರ್, ಸ್ಪಾರ್ಕ್ ಕ್ಯಾಂಡಲ್‌ಗಳು, ಕಟ್ಟಿಗೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿದ್ದು ಗೋಡೆ ಸಹ ಜಖಂ ಆಗಿದೆ.
ಅಗ್ನಿ ಅವಘಡ ಸಂಭವಿಸಿದ ಆಕ್ಸನಿಕ್ ಇನೋವೇಷನ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರು ವುದು ಬೆಳಕಿಗೆ ಬಂದಿದ್ದು ಫ್ಯಾಕ್ಟರಿ ಕಟ್ಟಡದ ಮೂಲ ಮಾಲೀಕ ಬನಶಂಕರ ದೀಕ್ಷೀತ್ ಅವರು, ಗದಗ ಮೂಲದ ಮುಂಬೈನ ಉದ್ಯಮಿ ಅಬ್ದುಲ್ ಶೇಖ್ ಅವರಿಗೆ ಕಾರ್ಖಾನೆ ನಡೆಸಲು ಬಾಡಿಗೆ ನೀಡಿದ್ದರು.
2021ರ ಡಿಸೆಂಬರ್ ತಿಂಗಳಿನಲ್ಲಿ ಕಾರ್ಖಾನೆ ಕಾರ್ಯಚಟುವಟಿಕೆ ಆರಂಭವಾಗಿದ್ದರೂ, ಕಳೆದ ಹದಿನೈದು ದಿನಗಳಿಂದ ಸ್ಪಾರ್ಕ್ ಕ್ಯಾಂಡಲ್ ತಯಾರಿಸುತ್ತಿತ್ತು. ಆದರೆ, ಕೈಗಾರಿಕೆ ಇಲಾಖೆಯಿಂದ ಅನುಮತಿ ಹಾಗೂ ಅಗ್ನಿಶಾಮಕ ದಳದಿಂದ ಪ್ರಮಾಣ ಪತ್ರ ಪಡೆಯದೆ ಕಾರ್ಖಾನೆ ನಡೆಸ ಲಾಗುತ್ತಿತ್ತು. ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಮೂಲ ಮಾಲೀಕ ಹಾಗೂ ಬಾಡಿಗೆ ಪಡೆದಿರುವ ಉದ್ಯಮಿ ವಿರುದ್ದ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಈಗಾಗಲೇ ಕಾರ್ಖಾನೆಯ ಮ್ಯಾನೇಜರ್ ಮಂಜುನಾಥ ಹರಿಜನನ್ನು ವಶಕ್ಕೆ ಪಡೆಯಲಾಗಿದೆ.ಉದ್ಯಮಿ ಶೇಖ್ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆನ್ನಲಾಗಿದೆ.
ಸ್ಪೋಟದ ಸ್ಥಳದಲ್ಲಿ ಸ್ಪಾರ್ಕ್ ಆಗುವ ವ್ಯಾಕ್ಸಿನ್ ರಾಸಾಯನಿಕ ಮತ್ತು ಬೆಟಾಲಿನ್ ರಾಸಾಯನಿಕ ಇರುವುದು ಕೈಗಾರಿಕಾ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.
- ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಇಂತಹ ದೊಡ್ಡ ದುರಂತ ನಡೆದಾಗ ಮಾತ್ರ ಕೈಗಾರಿಕೆ ಇಲಾಖೆ, ಪರಿಸರ ಇಲಾಖೆ, ಅಗ್ನಿಶಾಮಕ ಇಲಾಖೆಗಳ ಹುಳುಕುಗಳು ಹೊರ ಬರುತ್ತಿವೆ. ಧಾರವಾಡ ಜಿಲ್ಲೆಯಲ್ಲಿನ ವಿವಿಧ ಕೈಗಾರಿಕಾ ವಸಾಹತು ಪ್ರದೇಶಗಳ ಸಾವಿರಾರು ಕಾರ್ಖಾನೆಗಳು ಕಾರ್ಯನಿರ್ವ ಹಿಸುತ್ತಿವೆ. ಅವುಗಳಲ್ಲಿ ಕೆಲವು ಕಾರ್ಖಾನೆಗಳು ಅನುಮತಿ ಪಡೆಯದೆಯೇ ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗುತ್ತಿದೆ. ಈ ಇಲಾಖೆಗಳ ಬಹುತೇಕ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಮಂಥ್ಲಿ ಫಿಕ್ಸಿಂಗ್ ದಂಧೆ ಇಂತಹ ಅವಘಡಗಳಿಗೆ ಕಾರಣ ಎಂದು ಕೆಲ ಉದ್ಯಮಿದಾರರೇ ಬಾಯಿ ಬಿಡುತ್ತಾರೆ.