ಅಂದು ಬಿಜೆಪಿ ಮುಖಂಡರು- ಇಂದು ಕಾಂಗ್ರೆಸ್ ನಾಯಕರು
ಹುಬ್ಬಳ್ಳಿ : 1990ರ ದಶಕದಲ್ಲಿ ಅಂದು ಭಾರತೀಯ ಜನತಾಪಕ್ಷ ರಾಷ್ಟ್ರ ಧ್ವಜ ಸಂರಕ್ಷಣಾ ಸಮಿತಿ ಮೂಲಕ ಈದಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುವ ವಿಷಯವನ್ನೇ ಮುಂದೆ ಮಾಡಿ ಜಿಲ್ಲೆಯ ತನ್ನ ಅಸ್ಥಿತ್ವ ವಿಸ್ತರಿಸಿಕೊಂಡಿದ್ದು ಈಗ ಇತಿಹಾಸ. ಈಗ ಅಂತಹದ್ದೇ ಒಂದು ಹೋರಾಟ ಕಾಂಗ್ರೆಸ್ ಕೈಗೆತ್ತಿಕೊಂಡಿದೆಯಲ್ಲದೇ ಹುಬ್ಬಳ್ಳಿಯಿಂದ ದಿಲ್ಲಿಯವರೆಗೂ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ಸರಕಾರ ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಿರುವುದನ್ನು ಖಂಡಿಸಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಆರಂಭಿಸಿದ ಹೋರಾಟ ಇಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಹ ಇಂದು ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡುವ ಹಂತ ತಲುಪಿದೆ.
ಬಿಜೆಪಿಯವರ ರಾಷ್ಟ್ರಧ್ವಜವೇ ಬೇರೆ ಇದೆ. ಅವರ ರಾಷ್ಟ್ರ ಪರಿಕಲ್ಪನೆಯೇ ಬೇರೆ ಆಗಿದೆ. ಅದಕ್ಕಾಗಿಯೇ ರಾಷ್ಟ್ರ ಧ್ವಜವನ್ನು ಪಾಲಿಸ್ಟರ್ ಬಟ್ಟೆಯಲ್ಲಿಯೂ ತರುವ ಉದ್ದೇಶದಿಂದ ಧ್ವಜ ನಿಯಮಗಳಿಗೆ ತಿದ್ದುಪಡಿ ತಂದಿದ್ದಾರೆ ಎಂದು ಹೇಳುವ ಮೂಲಕ ಕೇಸರಿ ಪಡೆಯ ಅಸಲಿ ರಾಷ್ಟ್ರಭಕ್ತಿಗೆ ಸವಾಲು ಹಾಕಿದ್ದಾರೆ.
ರಾಷ್ಟ್ರಭಕ್ತಿಯನ್ನು ಗುತ್ತಿಗೆ ಪಡೆದವರಂತೆ ಹೇಳುವ ಬಿಜೆಪಿ ಮೇಡ್ ಇನ್ ಇಂಡಿಯಾ, ಆತ್ಮ ನಿರ್ಭರ ಮುಂತಾದ ಆಕರ್ಷಕ ಘೋಷವಾಕ್ಯ ಹೇಳುತ್ತ ಚೀನಾದಿಂದ ಧ್ವಜ ತರಿಸಲು ಹೊರಟಿದ್ದಾರೆಂಬ ಕಾಂಗ್ರೆಸ್ಸಿಗರು ಹಾಗೂ ಅನೇಕ ಸಾಮಾಜಿಕ ಹೋರಾಟಗಾರರ ಮಾತು ಇಂದು ಸಾಮಾನ್ಯರೂ ಯೋಚಿಸುವಂತೆ ಮಾಡಿದೆ.
ಹಲವು ವರ್ಷಗಳ ಹಿಂದೆಯೇ ಮಾನಕ ಬ್ಯೂರೊದಿಂದ ಮಾನ್ಯತಾ ಪಡೆದ ಹುಬ್ಬಳ್ಳಿಯ ಬೆಂಗೇರಿಯ ರಾಷ್ಟ್ರಧ್ವಜ ತಯಾರಕ ಘಟಕವಾಗಿದ್ದು, ಇಂತಹ ತಯಾರಕ ಘಟಕವನ್ನು ಮುಚ್ಚಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂಬ ಭಾವನೆ ಮೊಳಕೆಯೊಡೆಯುವಂತೆ ಮಾಡಿದೆ.
ಈಗಾಗಲೇ ಖಾದಿ ಗ್ರಾಮೋದ್ಯೋಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ, ಸತೀಶ ಜಾರಕಿಹೊಳಿ, ಯುವ ಕಾಂಗ್ರೆಸ್ ಅಧ್ಯಕ್ಷ ಹ್ಯಾರಿಸ ನಾಲಪಾಡ್ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿ ಖಾದಿ ರಾಷ್ಟ್ರಧ್ವಜಕ್ಕೆ ಬೆಂಬಲ ಸೂಚಿಸಿದ್ದು ಅವಳಿನಗರದ ಅನೇಕ ಕಾಲೇಜ್ ವಿದ್ಯಾರ್ಥಿಗಳು ಸಹ ಸ್ವಯಂ ಪ್ರೇರಿತವಾಗಿ ಬೆಂಬಲ ಸೂಚಿಸಿದ್ದು, ಪಾಲಿಸ್ಟರ್ ರಾಷ್ಟ್ರಧ್ವಜದ ವಿರುದ್ಧ ಒಂದು ಅಭಿಯಾನವೇ ಆರಂಭವಾಗಿದೆ. ಇಂದು ಬೆಳಿಗ್ಗೆ ದಾವಣಗೆರೆಗೆ ಹೋಗುವ ಮೊದಲು ಖಾದಿ ಚರಕವನ್ನು ಪ್ರದರ್ಶಿಸಿ ಸ್ವತಃ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದು ಸಂಜೆ ಭೇಟಿ ನೀಡಲಿದ್ದಾರೆ.
1992ರ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಿತ ರಕ್ಷಣಾ ಸಮಿತಿಯಲ್ಲಿ ಇಂದಿನ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿದ್ದರಲ್ಲದೇ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹಿತ ಅನೇಕರು ಹೋರಾಟದ ಮುಂಚೂಣಿಯಲ್ಲಿದ್ದರು.
ಇಂದು ರಾಷ್ಟ್ರಧ್ವಜ ಉಳಿಸಿ ಹೋರಾಟದಲ್ಲಿ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಸಹಿತ ನೂರಾರು ಯುವಕರ ಪಡೆಯೇ ಇದೆ. ಕಾಂಗ್ರೆಸ್ಸಿನ ಪಾಲಿಕೆ ಸದಸ್ಯರು ಸಹ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಖಾದಿ ಟೋಪಿ ಧರಿಸಿಯೇ ಬಂದಿದ್ದನ್ನು ಸ್ಮರಿಸಬಹುದು.
ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಸಂಜೆ ಭೇಟಿ
ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತಮಹೋತ್ಸವದಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಸಾಯಂಕಾಲ ಐದು ಗಂಟೆ ಸುಮಾರಿಗೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಗಮಿಸಿ ಅಲ್ಲಿನ ಖಾದಿ ಕಾರ್ಯಕರ್ತರೊಡನೆ ಭೇಟಿಯಾಗಿ ಮಾತುಕತೆ ನಡೆಸಿ ತದನಂತರ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ. ರಾಹುಲ್ ಬೆಂಗೇರಿ ಭೇಟಿ ತಡರಾತ್ರಿ ಅಂತಿಮಗೊಂಡಿದ್ದು ಆಗಮನದ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಬಿಗಿಬಂದೋಬಸ್ತ ಕೈಗೊಂಡಿದ್ದಾರೆ.