ನಾಗಪುರ ಕಚೇರಿಯಲ್ಲಿ ತಿರಂಗಾ ಹಾರಿಸಿದ್ದಾರೆಯೆ?
ಹುಬ್ಬಳ್ಳಿ : ಬಿಜೆಪಿಯವರ ’ಹರ್ ಘರ್ ತಿರಂಗಾ’ ಘೋಷಣೆ ಡೋಂಗಿ ರಾಜಕೀಯದ್ದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಷ್ಟ್ರಧ್ವಜ ವಿಚಾರದಲ್ಲಿ ಡೋಂಗಿ ರಾಜಕೀಯ ಮಾಡಬಾರದು ಎಂದು ಹೇಳಿದ್ದೆ. ಹಿಂದೆ ಆರ್ ಎಸ್ ಎಸ್ ನ ಕೆಲವರು ರಾಷ್ಟ್ರಧ್ವಜ ಬೇಡ ಅಂದಿದ್ದರು. ನಮ್ಮ ರಾಷ್ಟ್ರಧ್ವಜ, ಸಂವಿಧಾನ, ಪ್ರಜಾಪ್ರಭುತ್ವ ವಿರೋಧ ಮಾಡಿದ್ದರು. ಆರ್ ಎಸ್ ಎಸ್ ನವರು ನಾಗರಪುರದ ಕಚೇರಿಯ ಮೇಲೆ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ ಎಂದು ನೇರ ಸವಾಲು ಹಾಕಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟ ತೊರೆಯುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವ ಮನಸ್ತಾಪ ದಿಂದ ಅವರು ಹೊರಗೆ ಬಂದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರೊಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಕೋಮುವಾದಿ ಪಕ್ಷ ಬಿಟ್ಟಿದ್ದು ಒಳ್ಳೆಯದು ಎಂದರು.
ರಾಜ್ಯದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಮೂರನೆಯವರಾದರೂ ಬರಲಿ ನಾಲ್ಕನೆಯವರಾದರು ಬರಲಿ ನಮಗೇನು ಸಂಬಂಧವಿಲ್ಲ. ಬಿ.ಎಸ್. ಯಡಿಯೂರಪ್ಪ ಬದಲಾವಣೆ ಬಗ್ಗೆ ನನಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿವರ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಬಗ್ಗೆ ಟ್ವಿಟ್ ಮಾಡಿದವರನ್ನು ಕೇಳಿ, ನಾನಂತು ಟ್ವಿಟ್ ಮಾಡಿಲ್ಲ.
ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದದ ಬಗ್ಗೆ ನನಗೆ ಗೊತ್ತಿಲ್ಲ. ಅದರ ಕಾನೂನು ವಿವಾದ ಮಾಹಿತಿ ಇಲ್ಲ. ಅಲ್ಲಿ ಮೊದಲಿನಂತೆ ಏನು ನಡೆಯುತಿತ್ತು ಗೊತ್ತಿಲ್ಲ. ಬಾದಾಮಿಯಲ್ಲಿ ನಾನು ಸ್ಪರ್ಧಿಸೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸದ್ಯ ನಾನು ಬಾದಾಮಿಯ ಶಾಸಕ, ಮುಂದಿನ ಚುನಾವಣೆ ಬಂದಾಗ ಬಗ್ಗೆ ನಾನೇ ಹೇಳುತ್ತೇನೆ ಎಂದರು.
ಸ್ವಾತಂತ್ರ್ಯ ನಡಿಗೆಗೆ ಚಾಲನೆ : ಬಾದಾಮಿಗೆ ತೆರಳುವ ಮಾರ್ಗದಲ್ಲಿ ಇಂದು ನವಲಗುಂದದಲ್ಲಿ ಕಾಂಗ್ರೆಸ್ ಪಕ್ಷದ ಐತಿಹಾಸಿಕ ’ಸ್ವಾತಂತ್ರ್ಯ ನಡಿಗೆ’ಗಿಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿಯವರ ಹರ್ ಘರ್ ತಿರಂಗಾ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದರು.
ಜಿಲ್ಲಾ ಅಧ್ಯಕ್ಷ ಅನೀಲ್ ಕುಮಾರ್ ಪಾಟೀಲ್, ಜಿಲ್ಲಾ ಉಸ್ತುವಾರಿ ಹಾಗೂ ಡಿ.ಆರ್.ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಅಸೋಟಿ, ಮಾಜಿ ಶಾಸಕರಾದ ಕೆ.ಎನ್.ಗಡ್ಡಿ, ಎನ್.ಎಚ್.ಕೋನರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವರ್ಧಮಾನ್ ಹಿರೇಗೌಡರ್, ಮಂಜುನಾಥ್ ಮಾಯನ್ನವವರ್, ಕೆಪಿಸಿಸಿ ಸದಸ್ಯರುಗಳಾದ ವಿಜಯ್ ಕುಲಕರ್ಣಿ, ರಾಜಶೇಖರ ಮೆಣಸಿನಕಾಯಿ, ಮುಖಂಡರುಗಳಾದ ಬಾಪುಗೌಡ ಪಾಟೀಲ್, ಅಪ್ಪಣ್ಣ ಹಳ್ಳದ, ಶಿವಾನಂದ ಭೂಮನ್ನವರ ಆರ್.ಜಿ.ಪಿ. ಎಸ್. ಜಿಲ್ಲಾಧ್ಯಕ್ಷ ಆರ್.ಎಚ್ ಕೋನರಡ್ಡಿ, ಜಿಲ್ಲಾ ಸೇವಾದಳ ಘಟಕದ ಅಧ್ಯಕ್ಷರಾದ ಚಂಬಣ್ಣ ಹಾಲದೊಟರ್, ಮಹಿಳಾ ಜಿಲ್ಲಾಧ್ಯಕ್ಷೆ ಶಾಂತಮ್ಮ ಗುಜ್ಜಳ, ಮಂಜು ಜಾಧವ, ಆರ್ ಡಿ ಧಾರವಾಡ, ಸಾವಿತ್ರಿ ಭಗವತಿ, ಶೋಬಾ ಅಣ್ಣಿಗೇರಿ, ಹುಸೇನಬಿ ಧಾರವಾಡ, ಮಾಂತೇಶ ಭೋವಿ, ಖೈರುನಬೀ ನಾಶಿಪುಡಿ, ಚಂದ್ರಲೇಕಾ ಮಳಗಿ, ಆನಂದ ಹೆಬಸೂರ, ಉಸ್ಮಾನ ಬಬರ್ಚಿ, ರವಿ ಬೆಂಡಿಗೇರಿ, ಈರಣ್ಣ ಸಿಡಗಂಟಿ, ನಿಂಗಪ್ಪ ಅಸುಂಡಿ, ಉಪಸ್ಥಿತರಿದ್ದರು. ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ನಂತರ ಮೊದಲ ಬಾರಿಗೆ ಆಗಮಿಸಿದ್ದರಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದರು.