ಹುಬ್ಬಳ್ಳಿ-ಧಾರವಾಡ ಸುದ್ದಿ

’ಕೇಶವ ಕುಂಜ’ಕ್ಕೆ ಕೈ ಪಡೆಯಿಂದ ರಾಷ್ಟ್ರಧ್ವಜ ಉಡುಗೊರೆ!

ವಾಗ್ವಾದದ ನಂತರ ಹಸ್ತಾಂತರ – ಕಾಂಗ್ರೆಸ್‌ನಿಂದ ಧ್ವಜ ಸಂಹಿತೆ ಪಾಠ

ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಕುಂಜ ಕಚೇರಿಯಲ್ಲಿನ ಸಂಘದ ಪ್ರಮುಖರಿಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ಅವರ ನೇತೃತ್ವದ ಕೈ ಕಾರ್ಯಕರ್ತರ ತಂಡ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜ ಹಸ್ತಾಂತರಿಸಿತು.


ಕೇಂದ್ರ ಸರ್ಕಾರದ ಆದೇಶದಂತೆ ಕಳೆದ ಏಳು ದಿನಗಳಿಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಭಾವಚಿತ್ರವನ್ನು ಪ್ರೊಫೈಲ್ ಪಿಚ್ಚರ್ ಆಗಿ ಪ್ರದರ್ಶಿಸಲಾಗುತ್ತಿದೆ. ಆದರೆ ಇಂದಿನವರೆಗೂ ಆರ್ ಎಸ್ ಎಸ್ ನವರು ತಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ಭಗವಾ ದ್ವಜವೇ ಇಟ್ಟುಕೊಂಡ ಹಿನ್ನೆಲೆಯಲ್ಲಿ ಇಂದು ಸಂಘದ ಕಚೇರಿಗೆ ತೆರಳಿ ಖಾದಿ ರಾಷ್ಟ್ರಧ್ವಜ ನೀಡಲಾಗಿದೆ.


ಬೆಳಿಗ್ಗೆ ಕೇಶವಕುಂಜಕ್ಕೆ ಹೋದಾಗ ನಮಗೆ ಬೇಡ ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಸಂಘದ ಪ್ರಮುಖರು ಕಲೆ ಬಿದ್ದಿರುವ ರಾಷ್ಟ್ರ ಧ್ವಜವನ್ನು ತಂದು ಕಾಂಗ್ರೆಸ್ಸಿಗರಿಗೆ ತೋರಿಸಿದರು, ಇದಕ್ಕೆ ತಕರಾರು ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕಲೆ ಬಿದ್ದಿರುವ ಧ್ವಜವನ್ನು ಧ್ವಜಾರೋಹಣ ಮಾಡಬಾರದು ಎಂದು ತಿಳಿ ಹೇಳಿದರು. ಆಗ ಆರ್ ಎಸ್ ಎಸ್ ನವರು ನಾವು ಈ ಧ್ವಜವನ್ನು ತೊಳೆದು ಧ್ವಜಾರೋಹಣ ಮಾಡುತ್ತೇವೆ ಎಂದು ವಾದಿಸಿದರು. ಆಗ ಕೈ ಪಡೆ ಧ್ವಜದ ಮೇಲೆ ಕಲೆ ಬಿದ್ದರೆ ಅಂತಹ ಧ್ವಜವನ್ನು ತೊಳೆಯಬಾರದು ಎಂದು ಧ್ವಜ ಸಂಹಿತೆ ಹೇಳುತ್ತದೆ ಎಂದು ವಿವರಣೆ ನೀಡಿ ಮನವೊಲಿಸಿದರು.


ಕೆಲ ಕಾಲದ ವಾಗ್ವಾದ ನಡೆದ ನಂತರ ಸಂಘದ ಪ್ರಮುಖ ಅಮರನಾಥ್ ಅವರು ತ್ರಿವರ್ಣ ರಾಷ್ಟ್ರಧ್ವಜವನ್ನು ಸ್ವೀಕರಿಸಿದರು. ಮಾಜಿ ಪಾಲಿಕೆ ಸದಸ್ಯ ಹೂವಪ್ಪ ದಾಯಗೋಡಿ, ಬಸವರಾಜ ಮಲಕಾರಿ, ಮೊಹಮ್ಮದ್ ಶರೀಫ್ ಗರಗದ, ವಿರೇಶ್ ಜಂಜುನವರ, ಕಿರಣ ಹಿರೇಮಠ, ಶಿವುಕುಮಾರ ಹಿರೇಮಠ,ಬಸವರಾಜ ಮ್ಯಾಗೇಡಿ, ಮಲ್ಲಣ್ಣ ಮುತ್ತಗಿ, ಸಂತೋಷ್ ಮುದ್ದಿ, ಬಾಳಮ್ಮ ಜಂಗಿನವರ, ಪುಷ್ಪಾ ಪಾಟೀಲ, ಸಂತೋಷ ನಾಯಕ, ವಿಶಾಲ ಸಿಂಹಾಸನ, ನಾಗರಾಜ ಓಬ್ಬಳಮಪಲ್ಲೆ, ಸುನಿಲ ಮರಾಠೆ ಸೇರಿದಂತೆ ಅನೇಕರಿದ್ದರು.


ಈಗಾಗಲೇ ಪಾಲಿಸ್ಟರ್ ರಾಷ್ಟ್ರಧ್ವಜದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಕಾರ್ಯಕರ್ತರು ಮೊನ್ನೆ ಮೊನ್ನೆ ಮಾಜಿ ಸಿಎಂ ಜಗದೀಶ ಶೆಟ್ಟರ್ ನಿವಾಸಕ್ಕೂ ತೆರಳಿ ಧ್ವಜ ನೀಡಿದ್ದನ್ನಿಲ್ಲಿ ಸ್ಮರಿಸಬಹುದು. ಈಶ್ವರಪ್ಪನವರು ದೇಶದ ತ್ರಿವರ್ಣವನ್ನು ಬದಲಾಯಿಸಿ ಭಗವಾ ಧ್ವಜವೇ ನಮ್ಮ ರಾಷ್ಟ್ರಧ್ವಜ ಎಂದು ಹೇಳಿದ್ದರೆಂಬುದನ್ನು ಉಲ್ಲೇಖಿಸಿದ ರಜತ್ ಉಳ್ಳಾಗಡ್ಡಿಮಠ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 52 ವರ್ಷಗಳ ಕಾಲ ಆರ್ ಎಸ್ ಎಸ್ ತ್ರಿವರ್ಣ ರಾಷ್ಟ್ರ ಧ್ವಜಾರೋಹಣ ಮಾಡಿರಲಿಲ್ಲ ಮಾಧ್ಯಮದವರೊಂದಿಗೆ ಮಾತನಾಡುತ್ತ ಆರೋಪಿಸಿದರು.

administrator

Related Articles

Leave a Reply

Your email address will not be published. Required fields are marked *