ಠಾಣೆಯ ಮೆಟ್ಟಿಲೇರಿದ ಪ್ರಕರಣ – ಸಾಥ್ ನೀಡಿದ ಪ್ರಾಚಾರ್ಯ ವಶಕ್ಕೆ
ಅಧ್ಯಕ್ಷ ಯಡವಣ್ಣವರ ನಾಪತ್ತೆ – ಪೊಲೀಸರಿಂದ ತೀವ್ರ ಶೋಧ
ಧಾರವಾಡ: ಕಾಲೇಜಿನ ಸಂಸ್ಥಾಪಕ ಅಧ್ಯಕ್ಷನೇ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಇಲ್ಲಿನ ಸರ್.ಎಂ. ವಿಶ್ವೇಶ್ವರಯ್ಯ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದೆ.
ನಗರದ ಜಯನಗರಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಪದವಿಪೂರ್ವ ವಿಜ್ಞಾನ ಕಾಲೇಜಿನ ಅಧ್ಯಕ್ಷ ಬಸವರಾಜ ಯಡವಣ್ಣವರ ಎಂಬಾತನೇ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಎನ್ನಲಾಗಿದ್ದು. ಈತನಿಗೆ ಕಾಲೇಜಿನ ಪ್ರಾಚಾರ್ಯ ಮಹಾದೇವ ಕುರುವತ್ತಿಗೌಡರ ಕೂಡ ಸಾಥ್ ನೀಡುತ್ತಿದ್ದ ಎನ್ನಲಾಗಿದೆ.
ಅಧ್ಯಕ್ಷ ಬಸವರಾಜನು ಪ್ರತಿದಿನ ರಾತ್ರಿ ೧೨ರ ವರೆಗೂ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಇರುತ್ತಿದ್ದನಲ್ಲದೇ ಓರ್ವ ವಿದ್ಯಾರ್ಥಿನಿಯನ್ನು ದೇವಸ್ಥಾನಕ್ಕೆ ಹೋಗೋಣ ಬಾ ಎಂದು ಹೇಳಿ ಗೋವಾ, ದಾಂಡೇಲಿಗೆ ಕರೆದುಕೊಂಡು ಹೋಗಿ ಅಲ್ಲಿ ಒತ್ತಾಯಪೂರ್ವಕವಾಗಿ ಬಿಯರ್ ಕುಡಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.
ಈತನ ಕೃತ್ಯಕ್ಕೆ ಪ್ರಾಚಾರ್ಯ ಕುರುವತ್ತಿಗೌಡರನೂ ಕೂಡ ಪ್ರಚೋದನೆ ನೀಡುತ್ತಿದ್ದ ಎಂಬುದು ಗೊತ್ತಾಗಿದೆ.ಈ ವಿಷಯ ತಿಳಿದ ಎಬಿವಿಪಿ ಕಾರ್ಯಕರ್ತರೂ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಅಧ್ಯಕ್ಷ, ಪ್ರಾಚಾರ್ಯನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಸಂಬಂಧ ವಿದ್ಯಾರ್ಥಿನಿಯೋರ್ವಳು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಾಚಾರ್ಯ ಕುರುವತ್ತಿಗೌಡರನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಪರಾರಿಯಾಗಿರುವ ಕಾಲೇಜು ಅಧ್ಯಕ್ಷ ಬಸವರಾಜ ಯಡವಣ್ಣವರಗಾಗಿ ಶೋಧ ನಡೆಯುತ್ತಿದೆ.
ಶಾಲಾ-ಕಾಲೇಜು ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಹೊರ ಊರುಗಳಿಂದ ಬಂದ ಲಕ್ಷಾಂತರ ವಿದ್ಯಾರ್ಥಿಗಳು ನಗರದಲ್ಲಿದ್ದು, ಈ ಪ್ರಕರಣದಿಂದ ಶಿಕ್ಷಣ ಸಂಸ್ಥೆಗಳಿಗೆ ಕಳಂಕ ಅಂಟಿದಂತಾಗಿದೆ ಅಲ್ಲದೇ, ಮಕ್ಕಳ ಪಾಲಕರು ಆತಂಕ ಪಡುವಂತಾಗಿದೆ.