ಹಣಕಾಸು ಚಾವಿ ಮೆಣಸಿನಕಾಯಿ ಬಳಿ
ನಗರ ಯೋಜನೆಗೆ ಶೆಟ್ಟಿ ಬಾಸ್
ಬೇದರೆಗೆ ಆರೋಗ್ಯ – ಲೆಕ್ಕಕ್ಕೆ ರಾಧಕ್ಕ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೆ ಬಿಜೆಪಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಮೇಯರ್ ಈರೇಶ ಅಂಚಟಗೇರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಿವು ಮೆಣಸಿನಕಾಯಿ, ನಗರ ಯೋಜನಾ ಸಮಿತಿಗೆ ವಿಜಯಾನಂದ ಶೆಟ್ಟಿ, ಆರೋಗ್ಯ ಸ್ಥಾಯಿ ಸಮಿತಿಗೆ ಸುರೇಶ ಬೇದರೆ ಹಾಗೂ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಾಧಾಬಾಯಿ ಸಫಾರೆ ಚುನಾಯಿತರಾದರು. ನಾಲ್ಕೂ ಸಮಿತಿಗಳಿಗೆ ತಲಾ ಒಂದೊಂದೆ ನಾಮಪತ್ರ ಇದ್ದ ಹಿನ್ನಲೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಯಿತು.
ಕಾಂಗ್ರೆಸ್ ಸದಸ್ಯರಾದ ಹಣಕಾಸು ಸ್ಥಾಯಿ ಸಮಿತಿಗೆ ಇಮ್ರಾನ್ ಯಲಿಗಾರ ಹಾಗೂ ನಗರಯೋಜನಾ ಸಮಿತಿಗೆ ರಾಜಶೇಖರ ಕಮತಿ ನಾಮಪತ್ರ ಸಲ್ಲಿಸಿದ್ದರಾದರೂ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಸರಳವಾಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ನಾಲ್ವರನ್ನೂ ಮೇಯರ್ ಅಂಚಟಗೇರಿ ಹಾಗೂ ಆಯುಕ್ತ ಡಾ.ಗೋಪಾಲಕೃಷ್ಣ ಅವರು ಅಭಿನಂದಿಸಿದರು.
ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ ನಾಲ್ಕು ಹಾಗೂ ಮೂರು ಸೂತ್ರದನ್ವಯ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ೨೮ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಹಣಕಾಸು ಮತ್ತು ನಗರಯೋಜನಾ ಸಮಿತಿಗೆ ತೀವ್ರ ಪೈಪೋಟಿಯಿದ್ದರೂ ಶಿವು ಹಾಗೂ ವಿಜಯಾನಂದ ಶೆಟ್ಟಿಯವರಿಗೆ ಪಟ್ಟ ಕಟ್ಟುವ ಮುಂದಲೋಚನೆಯಿಂದ ಲೆಕ್ಕಾಚಾರ ಹಾಕಿಯೇ ಆಯ್ಕೆ ಮಾಡಲಾಗಿತ್ತು.
ಮಹಾನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನೂತನ ಅಧ್ಯಕ್ಷರುಗಳಾದ ಮೆಣಸಿನಕಾಯಿ,ಬೇದರೆ, ವಿಜಯಾನಂದ ಶೆಟ್ಟಿ ಅಲ್ಲದೇ ರಾಧಾಭಾಯಿ ಸಫಾರೆ ಹೇಳಿದ್ದಾರೆ.
ಬಹುತೇಕ ಎಲ್ಲ ಸ್ಥಾಯಿ ಸಮಿತಿ ಸದಸ್ಯರು ಇಂದಿನ ಪ್ರಕ್ರಿಯೆಗೆ ಹಾಜರಾಗಿದ್ದರು.
ಪಕ್ಷೇತರರಾಗಿ ಆಯ್ಕೆಯಾದ ದುರ್ಗಮ್ಮ ಬಿಜವಾಡ, ಕಿಶನ್ ಬೆಳಗಾವಿ, ಚಂದ್ರಿಕಾ ಮೇಸ್ತ್ರಿ, ಅಲ್ಲದೇ ಜೆಡಿಎಸ್‌ನ ಲಕ್ಷ್ಮಿ ಹಿಂಡಸಗೇರಿ ಬಿಜೆಪಿ ಬೆಂಬಲಿಸಿದ್ದು ಸ್ಥಾಯಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.