ಮುಂದುವರಿದ ಸಮಿತಿ ಸಭೆ – ಸರ್ಕಾರದ ಪ್ರತಿನಿಧಿ ಆಗಮನ ನಿರೀಕ್ಷೆ
ಕಾನೂನು ತಜ್ಞರ ಜತೆ ಚರ್ಚೆ – 8 ಅಹವಾಲು ಸಲ್ಲಿಕೆ
ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ, ಸಂತೋಷ ಚವ್ಹಾಣ ನೇತೃತ್ವದ ಸದನ ಸಮಿತಿಗೆ ಈಗಾಗಲೇ 6 ಸಂಘಟನೆಗಳು ಹಾಗೂ ಎರಡು ಪಕ್ಷಗಳು ಅಹವಾಲು ಸಲ್ಲಿಸಿವೆ.
ಆರು ಸಂಘಟನೆಗಳು ಮತ್ತು ಹಿಂದೂಸ್ತಾನ ಜನತಾ ಪಕ್ಷಗಳು ಈದಗಾದಲ್ಲಿ ಗಣೇಶ ಸ್ಥಾಪನೆ ಮಾಡಲು ಒತ್ತಾಯಿಸಿದ್ದರೆ, ಕೂಡ್ರಿಸಲು ಎಐಎಂಐಎಂ ಮಾತ್ರ ವಿರೋಧ ವ್ಯಕ್ತಪಡಿಸಿದೆ.
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಈದ್ಗಾ ಗಣೇಶೋತ್ಸವ ಸಮಿತಿ ಸದಸ್ಯರು ಗಣೇಶೋತ್ಸವಕ್ಕೆ ಪಟ್ಟು ಹಿಡಿದಿದ್ದು ಇಂದು ಸಂಜೆಯ ವೇಳೆಗೆ ಜಿಲ್ಲಾಧಿಕಾರಿ,ಪಾಲಿಕೆ ಆಯುಕ್ತರು ಅಲ್ಲದೇ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲು ಸರ್ಕಾರದ ಉಸ್ತುವಾರಿ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿ ಹುಬ್ಬಳ್ಳಿಗೆ ಬರಲಿದ್ದಾರೆಂಬ ಗುಸು ಗುಸುವಿದೆ.
ಅಧ್ಯಕ್ಷ ಸಂತೋಷ ಚವ್ಹಾಣ,ಸದಸ್ಯರಾದ ಶಿವು ಮೆಣಸಿನಕಾಯಿ, ಸುರೇಶ ಬೇದರೆ, ನಿರಂಜನ ಹಿರೇಮಠ, ಇಮ್ರಾನ್ ಯಲಿಗಾರ ಅಲ್ಲದೇ ಸಮಿತಿ ಸಮನ್ವಯ ಅಧಿಕಾರಿಯಾಗಿರುವ ಪಾಲಿಕೆ ಸಹಾಯಕ ಆಯುಕ್ತ ಎಸ್.ಸಿ.ಬೇವೂರ ಈಗಾಗಲೇ ಎರಡು ಮೂರು ಸಭೆಗಳನ್ನು ನಡೆಸಿದ್ದು ಇಂದು ಸಂಜೆ ಮತ್ತೆ ಕೂಡಿ ಸುಧೀರ್ಘವಾಗಿ ಚರ್ಚಿಸುವ ಸಾಧ್ಯತೆಗಳಿವೆ.
ಸಮಿತಿಯು ಇಂದು ಕಾನೂನು ತಜ್ಞರ ಜತೆಯೂ ಚರ್ಚಿಸಲಿದ್ದು, ಹಿಂದಿನ ಕೋರ್ಟ ಆದೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸುವ ಅಲ್ಲದೇ ಎಲ್ಲ ಪಕ್ಷಗಳ ಮುಖಂಡರ ಅಭಿಮತ ಪಡೆಯುವ ಸಾಧ್ಯತೆಗಳಿವೆ.
ತನ್ಮಧ್ಯೆ ನಿನ್ನೆ ಪಾಲಿಕೆ ವಿಪಕ್ಷ ನಾಯಕ ದೊರೆರಾಜ ಮಣಿಕುಂಟ್ಲ ಸಾಮಾನ್ಯ ಸಭೆಯಲ್ಲಿ ರಚಿಸಿರುವ ಸಮಿತಿಯನ್ನು ರಚಿಸಬೇಕೆಂದು ಮೇಯರ್‌ಗೆ ಪತ್ರ ಬರೆದಿದ್ದಾರೆ.
ಈಗಾಗಲೇ ೮ಅರ್ಜಿಗಳು ಬಂದಿದ್ದು, ಇಂದು ರಾತ್ರಿಯೊಳಗೆ ಕಾನೂನು ತಜ್ಞರ ಜತೆ ಚರ್ಚಿಸಿ ಸಮಿತಿಯು ನಾಳೆ ಬೆಳಿಗ್ಗೆ ೧೧ಗಂಟೆಗೆ ಈದ್ಗಾದಲ್ಲಿ ಗಣೇಶನ ಕೂಡಿಸುವ ಬಗ್ಗೆ ಅಂತಿಮ ವರದಿ ನೀಡಲಿದೆ ಎಂದು ಸಮಿತಿ ಅಧ್ಯಕ್ಷ ಚವ್ಹಾಣ ಹೇಳಿದ್ದಾರೆ.
ಮೇಯರ್ ಈರೇಶ ಅಂಚಟಗೇರಿ ಮೇಯರ್ ಸಮ್ಮೇಳನಕ್ಕೆ ರಾಯಪುರ್‌ಕ್ಕೆ ತೆರಳಿದ್ದು ಇಂದು ರಾತ್ರಿಯೊಳಗೆ ವಾಪಸ್ ಆಗಲಿದ್ದು ನಾಳೆ ವರದಿ ಸ್ವೀಕರಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ.
ಸಮಿತಿ ನೀಡುವ ವರದಿ ಆಧಾರದ ಮೇಲೆ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗದಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಈಗಾಗಲೇ ಹೇಳಿದ್ದಾರೆ. ಹುಬ್ಬಳ್ಳಿ ಮೊದಲೇ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.ಅಲ್ಲದೇ ಕೆಲವು ಸಮಾಜ ಘಾತುಕ ಶಕ್ತಿಗಳು ಇಂಥ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆಯೂ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಪ್ರತಿನಿಧಿ ಬಂದು ಚರ್ಚಿಸುವರೆನ್ನಲಾಗಿದೆ. ತನ್ಮಧ್ಯೆ ಪಾಲಿಕೆ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತ ಶನಿವಾರವೇ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದೆ. ಮೈದಾನದ ಒಳಗಡೆ ಮೂರು ಕಡೆ, ಪ್ರವೇಶಿಸುವ ಮೂರು ಕಡೆ ಹಾಗೂ ಇಡೀ ಮೈದಾನದ ಎಲ್ಲ ದೃಶ್ಯಾವಳಿ ಸೆರೆ ಹಿಡಿಯಬಲ್ಲ ಎರಡು ಸಿಸಿಟಿವಿ ಕೂಡ್ರಿಸಿದೆ.ಗಣೇಶ ಹಬ್ಬದ ಉತ್ಸವದ ವೇಳೆ ಅವಳಿನಗರದಲ್ಲಿ ಬಿಗಿ ಭದ್ರತೆಗೂ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.
ಬೆಂಗಳೂರು ಚಾಮರಾಜಪೇಟೆ ಮಾದರಿಯಲ್ಲಿ ಒಂದೇ ದಿನ ಅಥವಾ ಮೂರು ದಿನ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ ಕಾನೂನು ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಹತ್ವದ್ದಾಗಿದೆ.ಅನುಮತಿ ಇಲ್ಲದೆ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದು.ಪೂಜಾ ವಿವಿಧಾನಗಳನ್ನು ಬೆಳಗ್ಗೆ 6ರಿಂದ ಸಂಜೆ 6ರೊಳಗೆ ಮುಗಿಸಬೇಕು. ಅತಿಯಾದ ಡಿಜೆ ಬಳಕೆ, ಇತರರಿಗೆ ತೊಂದರೆಯಾಗುವ ರೀತಿಯಲ್ಲಿ ಆರ್ಕೆಸ್ಟ್ರಾ ನಡೆಸದೆ ಇರುವುದು ಸೇರಿದಂತೆ ಕಟ್ಟು ನಿಟ್ಟಿನ ನಿಬಂಧನೆ ಹಾಕಬಹುದು ಎಂಬ ಮಾತು ಕೇಳಿ ಬಂದಿದೆ.
ಈಗಾಗಲೇ 8ಅರ್ಜಿಗಳು ಬಂದಿದ್ದು, ಇಂದು ರಾತ್ರಿಯೊಳಗೆ ಕಾನೂನು ತಜ್ಞರು, ವಿವಿಧ ಮುಖಂಡರ ಜತೆ ಚರ್ಚಿಸಿ ಸಮಿತಿಯು ನಾಳೆ ಬೆಳಿಗ್ಗೆ 11ಗಂಟೆಗೆ ಮಹಾಪೌರರಿಗೆ ಅಂತಿಮ ವರದಿ ನೀಡಲಿದೆ
ಸಂತೋಷ ಚವ್ಹಾಣ
ಸದನ ಸಮಿತಿ ಅಧ್ಯಕ್ಷ