ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ(ಈದ್ಗಾ) ಮೈದಾನ ಇದೇ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಇಂದು ವಿಸರ್ಜಿಸುವ ಮೂಲಕ ಸಂಭ್ರಮದಿಂದ ವಿದಾಯ ಹೇಳಲಾಯಿತು.
ಮಧ್ಯಾಹ್ನ ಮಧ್ಯಾಹ್ನ 2 ಗಂಟೆಗೆ ವಿಜೃಂಭಣೆಯಿಂದ ಆರಂಭಗೊಂಡ ಮೆರವಣಿಗೆ ನಗರದ ಇಂದಿರಾ ಗ್ಲಾಸ್ ಹೌಸ್ವರೆಗೆ ಜರುಗಿ ಅಲ್ಲಿರುವ ಬಾವಿಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೇರ ಅವರು ವಿಶೇಷ ಪೂಜೆ ಸಲ್ಲಿಸಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್, ಬಿಜೆಪಿ ಮುಖಂಡರು ಹಾಗೂ ಹಿಂದೂ ಪರ ಸಂಘಟನೆಗಳು ಪೂಜೆ ಸಲ್ಲಿಸಿದರು.
ನೂರಾರು ಭಕ್ತರು ಜೈ ಗಜಾನನ ಮಹರಾಜ ಕೀ, ಜೈ ಶ್ರೀರಾಮ, ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಭಾರತಾಂಬೆ ಭಾವಚಿತ್ರ ನೋಡುಗರ ಗಮನ ಸೆಳೆಯಿತು. ಎಲ್ಲೆಲ್ಲೂ ಕೇಸರಿ ಧ್ಜಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
ವಾದ್ಯ ಮೇಳ, ಡೊಳ್ಳು ಕುಣಿತ, ಗೊಂಬೆ ಕುಣಿತ, ಝಾಂಜ ಮೇಳ ಸೇರಿದಂತೆ ಕಲಾವಿರದ ತಂಡ ಮೆರವಣಿಗಗೆ ಮೆರಗು ತಂದರು. ವಿಸರ್ಜನೆಯಲ್ಲಿ ಭಾಗವಹಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಗೋವಿಂದರಾವ್, ರಾಣಿ ಚನ್ನಮ್ಮ ಮೈದಾನ ಗಣೇಶ ಉತ್ಸವ ಮಹಾಮಂಡಳ ಅಧ್ಯಕ್ಷ ಸಂಜು ಬಡಸ್ಕರ, ರಮೇಶ ಕದಂ, ಮಹೇಶ ಟೆಂಗಿನಕಾಯಿ, ಮಲ್ಲಿಕಾರ್ಜುನ ಸಾವುಕಾರ, ಲಿಂಗರಾಜ ಪಾಟೀಲ, ವೀರಣ್ಣ ಸವಡಿ, ಜಯತೀರ್ಥ ಕಟ್ಟಿ, ತಿಪ್ಪಣ್ಣ ಮಜ್ಜಗಿ, ವೀರಭದ್ರಪ್ಪ ಹಾಲಹರವಿ, ಹನುಮಂತಸಾ ನಿರಂಜನ, ಸಂತೋಷ ಚವ್ಹಾಣ, ಶಿವಾನಂದ ಸತ್ತಿಗೇರಿ, ಶಿವು ಮೆಣಸಿನಕಾಯಿ, ಸುಭಾಸಸಿಂಗ್ ಜಮಾದಾರ, ರಂಗಾ ಬದ್ದಿ ಅನೇಕರು ಪಾಲ್ಗೊಂಡಿದ್ದರು. ಬಿಗಿ ಬಂದೋಬಸ್ತ್: ಮೈದಾನದ ಸುತ್ತ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಿ, ಬಿಗಿ ಭದ್ರತೆ ನೀಡಲಾಗಿದೆ.
ಹಬ್ಬ ಆಚರಣೆಗೆ ಕೋರ್ಟ್ ಮೊರೆ: ಮುತಾಲಿಕ ಅಸಮಾಧಾನ
ಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವಿದ್ದರೂ, ನಮ್ಮದೇ ನೆಲದಲ್ಲಿ ಹಬ್ಬ ಆಚರಿಸಲು ಕೋರ್ಟ್ ಕಟ್ಟೆಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು.
ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ವಿಸರ್ಜನೆ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದವ ರೊಂದಿಗೆ ಅವರು ಮಾತನಾಡಿದರು.
ಇದೀಗ ಹಿಂದೂಗಳೆಲ್ಲರೂ ಒಂದಾಗಿದ್ದಾರೆ. ರಾಣಿ ಚನ್ನಮ್ಮ ಮೈದಾನದಲ್ಲಿ ನಡೆದ ಗಣೇಶೋತ್ಸವವೇ ಇದಕ್ಕೆ ಸಾಕ್ಷಿ. ಪ್ರಥಮ ಬಾರಿಗೆ ಇಲ್ಲಿ ಮೂರು ದಿನ ಗಣೇಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು.
ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ನೀಡದಂತೆ ವಿರೋಧಿಗಳು ಅಡ್ಡಿಪಡಿಸಲು ಸಾಕಷ್ಟು ತಂತ್ರ ರೂಪಿಸಿದರು. ಆದರೂ ಗಣೇಶ ನಮಗೆ ಬಲ ಕೊಟ್ಟು ಯಾವ ಶಕ್ತಿಯ ಆಟವೂ ನಡೆಯದಂತೆ ಮಾಡಿದ. ಅವನ ಆಶೀರ್ವಾದ ನಮಗೆ ದೊರಕಿದೆ ಎಂದು ಹೇಳಿದರು.
ಮೂರು ದಿನದ ಗಣೇಶೋತ್ಸವವನ್ನು ಈ ವರ್ಷ ಹಿಂದೂ ಸಂಘಟನೆಗಳು, ಎಲ್ಲ ಗಣೇಶ ಮಂಡಳಿಗಳ ಸಹಕಾರದಿಂದ ಉತ್ಸವ ಆಚರಿಸಲಾಗಿದೆ. ಮುಂದೆ ಇನ್ನೂ ಹೆಚ್ಚು ದಿನ ವಿಜೃಂಭಣೆಯಿಂದ ಕಾರ್ಯಕ್ರಮ ಮಾಡೋಣ. ಲಕ್ಷಾಂತರ ಭಕ್ತರ ಹಾಗೂ ಅವರ ಭಾವನೆಗಳಿಗೆ ಸರ್ಕಾರ, ಕೋರ್ಟ್, ಮೇಯರ್ ಸ್ಪಂದಿಸಿ, ಉತ್ಸವಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲ ಹಿಂದೂ ಸಂಘಟನೆಗಳಿಂದ ಅವರಿಗೆ ಅಭಿನಂದನೆಗಳು ಎಂದರು.
ಕಾನೂನು ಚೌಕಟ್ಟಿನಲ್ಲಿ ಕ್ರಮ: ಚಿತ್ರದುರ್ಗದ ಮುರುಘಾ ಮಠದ ಶರಣರ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ವಾಮೀಜಿ ಕಡೆಯವರು ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಸಂತ್ರಸ್ತರ ಕಡೆಯವರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು.