ಜಂಗ್ಲಿಪೇಟೆ ಬಸವಣ್ಣನ ಮುಂದೆ ನ್ಯಾಯ ಬಗೆಹರಿಯಲಿ
ಹುಬ್ಬಳ್ಳಿ: ನಾನು ಕೊಟ್ಟ 10 ಲಕ್ಷ ಮರಳಿ ಕೊಡಿ, ನಮ್ಮ ಆಸ್ತಿ ನಮಗೆ ಬಿಟ್ಟು ಕೊಡಿ ಎಂದು ಅವರ ಮನೆಗೆ ಹೋಗಿ ಕೇಳಿದ್ದಕ್ಕೆ ನಮ್ಮನ್ನೇ ನಿಂದಿಸಿ, ಮನೆಯಿಂದ ಲೋಕೇಶ್ ಗುಂಜಾಳ ಹೊರದಬ್ಬಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗಿರೀಶ್‌ಗೌಡ ಗದಿಗೆಪ್ಪಗೌಡರ ಸ್ಪಷ್ಟಪಡಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯ ಜಂಗ್ಲಿ ಪೇಟೆಯಲ್ಲಿ ನಾವು 40 ವರ್ಷದಿಂದ ವಾಸವಾಗಿದ್ದು, ಎಲ್ಲ ಸಮಾಜದವರೊಂದಿಗೆ ಅನ್ಯೋನ್ಯವಾಗಿ ಇದ್ದು, ರೂಢಿಯಲ್ಲಿ ನಾವು ಗುಂಜಾಳ ಕುಟುಂಬದೊಂದಿಗೆ ಬೀಗರಂತೆ ನಡೆದುಕೊಂಡಿದ್ದೇವೆ. ಆದರೆ, ಕೊಟ್ಟ ಹಣ ಮರಳಿಸುವುದು ಬಿಟ್ಟು, ರಾಜಕೀಯ ಸೇರಿಸಿ ನನ್ನ ಹಾಗೂ ನಮ್ಮ ಕುಟುಂಬದ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಆಸ್ತಿ ವಿವಾದ ಸಿವಿಲ್ ನ್ಯಾಯಾಲಯದಲ್ಲಿದೆ. ಆದರೆ, ಕೊಟ್ಟ ಹಣ ವನ್ನು ಮರಳಿಸುತ್ತಿಲ್ಲ. ನಾವು ಯಾವುದೇ ಹಲ್ಲೆ ಮಾಡಿಲ್ಲ. ಅಲ್ಲಿನ ಬೀದಿಯಲ್ಲಿರುವ ಪೊಲೀಸರೇ ಹಾಕಿದ ಸಿಸಿಟಿವಿ ಕ್ಯಾಮೆರಾದಲ್ಲಿ ಎಲ್ಲವೂ ದಾಖಲಾಗಿದೆ’ ಎಂದು ಹೇಳಿದರು.
ಜಗಳ ಬೆಳೆಯಲು ಬೆಂಡಿಗೇರಿ ಇನ್ಸಪೆಕ್ಟರ್ ಕುಮ್ಮಕ್ಕು ಕಾರಣ ಎಂದು ಆರೋಪಿಸಿದರಲ್ಲದೇ ಇವರ ವಿರುದ್ಧ ಕಮಿಷನರ್ ಕ್ರಮ ಕೈಗೊಂಡು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.
ಜಂಗ್ಲಿ ಪೇಟೆ ಜನತಾ ನ್ಯಾಯಾಲಯದಲ್ಲಿ ಜನರ ಮುಂದೆ ನ್ಯಾಯ ಬಗೆಹರಿಯಲಿ. ನಾನು ಒದ್ದಿ ಅರಿವೆಯಲ್ಲಿ ಬಸವಣ್ಣನ ಗರ್ಭಗುಡಿ ಪ್ರವೇಶ ಮಾಡುತ್ತೇನೆ. ನನಗೆ ಹಿರಿಯರಿಂದ ನ್ಯಾಯ ಸಿಗುವ ಸಂಪೂರ್ಣ ಭರವಸೆ ಇದೆ ಎಂದು ಹೇಳಿದರು.
ತಾವು ಸೆಂಟ್ರಲ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅದನ್ನು ತಪ್ಪಿಸುವ ಯತ್ನ ಸಹ ನಡೆದಿದೆ ಎಂದರಲ್ಲದೇ ಲೋಕೇಶ್ ಗುಂಜಾಳ ದೊಡ್ಡ ಮೋಸಗಾರ ಎಂದರು.
ಗೋಷ್ಠಿಯಲ್ಲಿ ವೀರುಪಾಕ್ಷಪ್ಪ ಹರ್ಲಾಪೂರ, ಮಲ್ಲೇಶಪ್ಪ ಹಿರೂರ, ಹನಮಂತಪ್ಪ ಮೇಟಿ, ವಿಜನಗೌಡ ಪಾಟೀಲ ಹಾಗೂ ಇತರರು ಇದ್ದರು.