ಹುಬ್ಬಳ್ಳಿ-ಧಾರವಾಡ ಸುದ್ದಿ

ದಂಡೆ ದಂಪತಿಗೆ ’ಸಂಗಮ ಸಿರಿ’ ಪ್ರದಾನ

ಹುಬ್ಬಳ್ಳಿ: ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಪ್ರಥಮ ಸಂಗಮ ಸಿರಿ ಪ್ರಶಸ್ತಿಯನ್ನು ವಚನ ಸಾಹಿತ್ಯದಲ್ಲಿ ಹಿರಿದಾದ ಸಾಧನೆ ಮಾಡಿದ ಕಲಬುರ್ಗಿಯ ಡಾ.ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ದಂಪತಿಗೆ ಪ್ರದಾನ ಮಾಡಲಾಯಿತು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ರವಿವಾರ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ಮೂರುಸಾವಿರಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ 10 ಸಾವಿರ ರೂ.ನಗದು ಹಾಗೂ ಫಲಕ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಡಾ ಹಂಡಿಗಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಇಂದು ಅವರು ಸ್ಮರಿಸುವ ಕಾರ್ಯ ನಡೆಯುತ್ತಿರುವುದು ಅಭಿನಂದನೀಯ. ಬರಹ ಇದ್ದರೆ ವ್ಯಕ್ತಿ ಶಾಶ್ವತವಾಗಿ ಇರುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದು ತಮ್ಮ ಹಾಗೂ ಹಂಡಗಿಯವರ ಒಡನಾಟ ಸ್ಮರಿಸಿದರು.


ಪ್ರಶಸ್ತಿ ಸ್ವೀಕರಿಸಿದ ದಂಡೆ ದಂಪತಿಗಳು ಮಾತನಾಡಿ ಸಂಶೋಧನೆ ಎನ್ನುವುದು ನಿರಂತರ ನಡೆಯುವ ಪ್ರಕ್ರಿಯೆ. ನಾವಿಬ್ಬರೂ ಸೇರಿ ರಾಜ್ಯದ ಹಲವೆಡೆ ಸಂಚರಿಸಿ ಶರಣರು ನಡೆದಾಡಿದ ಜಾಗದಲ್ಲಿ ಏನೇನಿದೆ ಏನಾಗಿತ್ತು ಎಂಬುದರ ಕುರಿತು ಸಂಶೋಧನೆ ಮಾಡಿ ಈ ಸಮಾಜಕ್ಕೆ ನೀಡಿದ್ದು ಇಂದು ಪ್ರಶಸ್ತಿಯ ಮೂಲಕ ಮತ್ತಷ್ಟು ಸಾರ್ಥಕವಾಯಿತು ಎಂದರು.
ಇದೇ ಸಂದರ್ಭದಲ್ಲಿ ‘ಆಧುನಿಕ ವಚನಗಳು ಭಾಗ-10’ ಕೃತಿ ಬಿಡುಗಡೆ ಮಾಡಲಾಯಿತು. ಬೀದರಿನ ಹಂಶಕವಿ ಮಾತನಾಡಿ ಆಧುನಿಕ ವಚನಕಾರರು ರಚಿಸಿರುವ ವಚನಗಳನ್ನು ಒಂದೆಡೆ ಒಂದೆಡೆ ತರುವ ಕೆಲಸವನ್ನು ಮಾಡಲಾಗುತ್ತಿದೆ ಒಟ್ಟಾರೆ ೫೧ ಸಂಪುಟಗಳನ್ನ ಹೊರ ತರುವ ಯೋಜನೆ ಇದೆ ಎಂದರು.
ಮುಖ್ಯ ಅತಿಥಿ ಹಿರಿಯ ಸಾಹಿತಿ ಮಹಾಂತಪ್ಪ ನಂದೂರ ಆಯ್ಕೆ ಪ್ರಕ್ರಿಯೆ ವಿವರಿಸಿ ಯೋಗ್ಯರಿಗೆ ಈ ಪ್ರಶಸ್ತಿ ಸಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಜಿ ಬಿ ಗೌಡಪ್ಪಗೋಳ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಪ್ರತಿಷ್ಠಾನವನ್ನು ಮುನ್ನಡೆಸುವ ಕುರಿತು ಹಾಗೂ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿದರು.


ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ವೀರೇಶ್ ಹಂಡಗಿ ಸ್ವಾಗತಿಸಿದರು. ಎಫ್.ಬಿ.ಗೊರವನಕೊಳ್ಳ ವಚನ ಹಾಡಿದರು. ಸಾಹಿತಿ ಸೋಮು ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಬಿ ಎಸ್ ಮಾಳವಾಡ ವಂದಿಸಿದರು.

ಈ ಸಂದರ್ಭದಲ್ಲಿ ಡಾ.ಲಿಂಗರಾಜ ಅಂಗಡಿ, ಸಂತೋಷ ಶೆಟ್ಟಿ, ಇಂಜನೀಯರ್ ಜಿಎಸ್ ಅಂಗಡಿ, ವೀರೇಶ್ ಹೊಳೆಯಪ್ಪನವರ್, ಡಾ, ರಶ್ಮಿ ಅಂಗಡಿಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಂಸದ ಐ.ಜಿ ಸನದಿ, ರಾಮು ಮೂಲಗಿ, ಬಸವರಾಜ ಕರ್ಕಿ ಇತರರು ಇದ್ದರು.

 

administrator

Related Articles

Leave a Reply

Your email address will not be published. Required fields are marked *