ನಿರೀಕ್ಷಿತ ಫಲಿತಾಂಶ – ಹಿರಿಯ ಮುತ್ಸದ್ಧಿಗೆ ಮಹತ್ವದ ಪಟ್ಟ
ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಶಶಿ ತರೂರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಹಿರಿಯ ಮುತ್ಸದ್ಧಿ,ಕರ್ನಾಟಕದ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚುನಾಯಿತರಾಗಿದ್ದಾರ
ಅ. 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದು, ಮತಾಧಿಕಾರ ಪಡೆದಿದ್ದ ಒಟ್ಟು 9100 ಮಂದಿ ಪೈಕಿ ಶೇ. 96ರಷ್ಟು ಜನರು ಮತದಾನ ಮಾಡಿದ್ದರು. ಬ್ಯಾಲೆಟ್ ಬಾಕ್ಸ್‌ಗಳನ್ನು ಎಲ್ಲ ರಾಜ್ಯಗಳಿಂದ ದೆಹಲಿಗೆ ತರಿಸಿಕೊಂಡು ಇಂದು ಮತಎಣಿಕೆ ಮಾಡಲಾಯಿತು. ಅಂತಿಮವಾಗಿ ಫಲಿತಾಂಶ ಹೊರಬಿದ್ದಿದ್ದು, 24 ವರ್ಷಗಳ ಬಳಿಕ ಕಾಂಗ್ರೆಸ್ ಮೊದಲ ಬಾರಿಗೆ ಗಾಂಧಿಯೇತರ ಮುಖ್ಯಸ್ಥರನ್ನು ಪಡೆದಿದೆ.
ಈ ವರ್ಷ ಆಗಸ್ಟ್ 21ರಿಂದ ಸೆಪ್ಟೆಂಬರ್ 20ರ ನಡುವೆ ಹೊಸ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ಕಳೆದ ವರ್ಷ ಅಕ್ಟೋಬರ್‌ನಲ್ಲಿಯೇ ಘೋಷಿಸಿತ್ತು. 2019ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಸತತ ಎರಡನೇ ಸೋಲಿನ ನಂತರ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಹುಲ್ ರಾಜೀನಾಮೆ ಬಳಿಕ ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಆಡಳಿತವನ್ನು ವಹಿಸಿಕೊಂಡ ಸೋನಿಯಾ ಗಾಂಧಿ, ಒಂದು ಗುಂಪಿನ ನಾಯಕರು ಬಹಿರಂಗವಾಗಿ ಬಂಡಾಯ ಎದ್ದಾಗ ಆಗಸ್ಟ್ 2020ರಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಸಿಡಬ್ಲ್ಯೂಸಿ ಅವರನ್ನು ಮುಂದುವರಿಸಲು ಒತ್ತಾಯಿಸಿತ್ತು. ಇಲ್ಲಿಯವರೆಗೆ ಅವರು ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಘೋಷಿತ ಬೆಂಬಲದಿಂದ ಸ್ಪರ್ಧಿಸಿದ್ದ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಚುಕ್ಕಾಣಿ ಹಿಡಿಯುವುದು ನೂರರಕ್ಕೆ ನೂರರಷ್ಟು ನಿಕ್ಕಿಯಾಗಿತ್ತು.. 22ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಸೋನಿಯಾಗಾಂಧಿ ವಿರುದ್ಧ ಜಿತೇಂದ್ರ ಪ್ರಸಾದ್‌ರವರು ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಶೇ. 90ಕ್ಕೂ ಹೆಚ್ಚು ಮತಗಳನ್ನು ಪಡೆದು ಸೋನಿಯಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್‌ನ 137 ವರ್ಷಗಳ ಇತಿಹಾಸದಲ್ಲಿ 6 ಬಾರಿ ಚುನಾವಣೆ ನಡೆದಿದ್ದು, 22ವರ್ಷಗಳ ನಂತರ ಈಗ ನಡೆದಿರುವ ಚುನಾವಣೆ ದೇಶದ ಗಮನ ಸೆಳೆದಿರುವುದಂತೂ ನಿಜ. ಗಾಂಧಿ ಕುಟುಂಬದ ಕುಡಿಗಳು ಚುನಾವಣೆಯಿಂದ ದೂರ ಉಳಿದಿದ್ದರಿಂದ ಖರ್ಗೆ ಹಾಗೂ ತರೂರ್ ಮಧ್ಯೆ ಮೇಲುಗೈಗಾಗಿ ಪೈಪೋಟಿ ನಡೆಯುವಂತಾಯಿತು.
ಈ ಇಬ್ಬರು ನಾಯಕರು ಮತ ಸೆಳೆಯಲು ವಿವಿಧ ರಾಜ್ಯಗಳ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಖರ್ಗೆ ಅವರಿಗೆ ದೊರೆತ ಸ್ವಾಗತ ಗಮನಿಸಿದರೆ, ತರೂರ್ ಸೋಲು ಖಚಿತವಾಗಿತ್ತು.