ಊಹಾಪೋಹಗಳಿಗೆ ಶೆಟ್ಟರ್ ತೆರೆ
ಹುಬ್ಬಳ್ಳಿ: ಮುಂದಿನ 2023ರ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದಲೇ ತಾವೇ ಸ್ಪರ್ಧಿಸಲಿದ್ದು,ಮತ್ತೆ ಯಾರನ್ನೂ ಕಣಕ್ಕೆ ಇಳಿಸುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತೆರೆ ಎಳೆದಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆ ಯಲ್ಲಿ ಕೂಡ ನಾನು ಸ್ಪರ್ಧೆ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೇ ನಾನು ರಾಜ್ಯಪಾಲರಾಗಿ ಹೋಗುತ್ತೇನೆಂಬ ಮಾತುಗಳು ಕೇಳಿ ಬಂದಿದ್ದವು. ಅದರಂತೆ ಇದೀಗ ಮತ್ತೆ ಅದೇ ರಾಗ ಆರಂಭವಾಗಿದೆ. ಅವೆಲ್ಲವೂ ಊಹಾಪೋಹ. ಮುಂಬರುವ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದರು.
ಭ್ರಷ್ಟಾಚಾರ ಕುರಿತಂತೆ ಹಿಂದೆ ಆಡಳಿತ ನಡೆಸಿದ ಸರಕಾರಗಳ ತನಿಖೆಗೆ ಆಗ್ರಹಿಸಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಭ್ರಷ್ಟಾಚಾರ ತನಿಖೆ ಕುರಿತು ಲೋಕಾಯುಕ್ತದಲ್ಲಿ ದೂರು ಸಲ್ಲಿಕೆ ಆಗಿದೆ. ಅದರೊಟ್ಟಿಗೆ ಈ ಹಿಂದಿನ ಸರಕಾರಗಳಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆಯಾಗಲಿ. ಅಲ್ಲದೇ ಸಿದ್ದರಾಮಯ್ಯ ತಮ್ಮಲ್ಲಿರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ದೂರು ನೀಡಲಿ. ಅದು ಬಿಟ್ಟು ಸುಖಾಸುಮ್ಮನೆ ಆರೋಪ ಮಾಡುವುದು. ಹಿಟ್ ಆಂಡ್ ರನ್ ಆರೋಪ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.
ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಮಹಾಪೌರರು ಪತ್ರ ಬರೆದಿರುವ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಗಳೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಅನುದಾನ ಸಿಗಲಿದೆ ಎಂದರು.
ಪತ್ರಕರ್ತರಿಗೆ ಉಡುಗೊರೆ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾದ ಬಗ್ಗೆ ನನಗೆ ಗೊತ್ತಿಲ್ಲ. ಉಡುಗೊರೆ ಪಡೆದು ಕೊಂಡವರಿದ್ದರೆ ಬೇಕಾದರೆ ದೂರು ಕೊಡಲಿ ಎಂದರು.