ಹುಬ್ಬಳ್ಳಿ-ಧಾರವಾಡ ಸುದ್ದಿ

ತಬಲಾ ಮಾಂತ್ರಿಕ ಯಾವಗಲ್‌ಗೆ ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ

ಹುಬ್ಬಳ್ಳಿ : ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಸಂಗೀತ, ನಾಟಕ ಹಾಗೂ ನೃತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದವರಿಗೆ 2019, 2020,2021ನೇ ಸಾಲಿನ ಪ್ರಶಸ್ತಿಯನ್ನು ಕಳೆದ ಶುಕ್ರವಾರ ಘೋಷಣೆ ಮಾಡಿದ್ದು ಇದರಲ್ಲಿ ನಗರದವರೇ ಆದ ತಬಲಾ ಮಾಂತ್ರಿಕ ರವೀಂದ್ರ ಯಾವಗಲ್ ಅವರಿಗೂ ಪ್ರತಿಷ್ಠಿತ ಗೌರವ ದೊರೆತಿದೆ.


ಕರ್ನಾಟಕ ಅಥವಾ ಹಿಂದೂಸ್ತಾನಿ ಸಂಗೀತ,ಜಾನಪದ ಸಂಗೀತ, ನೃತ್ಯ, ನಾಟಕ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದ್ದು ಇದೇ ಮೊದಲ ಬಾರಿಗೆ ರಾಜ್ಯದ ಸುಮಾರು 23ಕ್ಕೂ ಹೆಚ್ಚು ಕಲಾವಿದರಿಗೆ ಪ್ರಶಸ್ತಿ ಬಂದಿದೆ. 2021ನೇ ಸಾಲಿನ ಪ್ರಶಸ್ತಿಗೆ ನಗರದ ರವೀಂದ್ರ ಯಾವಗಲ್ ಅವರು ಈ ಪ್ರಶಸ್ತಿಗೆ ಭಾಜನ ರಾಗಿದ್ದು, ಪುರಸ್ಕೃತರಿಗೆ ತಲಾ 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದು, ರಾಷ್ಟ್ರದ ಪ್ರಥಮ ಪ್ರಜೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.


ಕೇವಲ ಐದು ವರ್ಷದ ಬಾಲಕನಿದ್ದಾಗಲೇ ಧಾರವಾಡ ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮದಲ್ಲಿ ತಬಲಾ ಕಾರ್ಯಕ್ರಮ ನೀಡಿ, 10ನೇ ವಯಸ್ಸಿನಲ್ಲಿ ಕುಂದಗೋಳದ ಪ್ರತಿಷ್ಠಿತ ಸವಾಯಿ ಗಂದರ್ವ ಸಂಗೀತೋತ್ಸವದಲ್ಲಿ ತಬಲಾ ಕಾರ್ಯಕ್ರಮ ನೀಡಿದ ಹಿರಿಮೆ ಇವರದ್ದು. ಪಂ.ಮಲ್ಲಿಕಾರ್ಜುನ ಮನ್ಸೂರ್,ಡಾ.ಗಂಗೂಬಾಯಿ ಹಾನಗಲ್, ಪಂ.ಭೀಮಸೇನ ಜೋಶಿ, ಪಂ.ಬಸವರಾಜ ರಾಜಗುರು ಪಂ.ಜಸ್‌ರಾಜ, ಪಂ.ಫಿರೋಜ ದಸ್ತೂರ, ಪಂ.ರಾಮ ಮರಾಠೆ, ಶ್ರೀಮತಿ ಕಿಶೋರಿ ಅಮೋನಕರ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನೂರಾರು ಕಲಾವಿದರಿಗೆ ತಬಲಾ ಸಾಥ್ ನೀಡಿದ ಹಿರಿಮೆ ಇವರದ್ದು.ಇವರಿಗೆ ರಾಜ್ಯೋತ್ಸವ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಅರಸಿ ಬಂದಿವೆ.

administrator

Related Articles

Leave a Reply

Your email address will not be published. Required fields are marked *