ತಂದೆ, ಮಕ್ಕಳ ಅಕ್ಷರ ಆರಾಧನೆಯ ಅಪರೂಪದ ಸಾಧನೆ
ಹುಬ್ಬಳ್ಳಿ : ಉತ್ತರ ಕನ್ನಡ ಮೂಲದ ಹಬ್ಬು ಕುಟುಂಬದ ಸಾಹಿತ್ಯ ಸಾಧನೆ ಇಂಡಿಯಾ ವರ್ಲ್ಡ್ ರೆಕಾರ್ಡ ಫೌಂಡೇಶನ್‌ನ ದಾಖಲೆ ಪುಟಗಳಲ್ಲಿ ಸೇರಿದೆ. ಒಂದೇ ಕುಟುಂಬದ ಏಳು ಜನರ ’ಅಕ್ಷರ’ಯ ಆರಾಧನೆ ಇಂಡಿಯಾ ಬುಕ್ ಆಪ್ ರೆಕಾರ್ಡನಲ್ಲಿ ಗುರುತಿಸಿಕೊಳ್ಳುವದರೊಂದಿಗೆ ಅಪರೂಪದ ಐತಿಹಾಸಿಕ ಸಾಧನೆ ಮಾಡಿದೆ.
ದಿವಂಗತ ಸಗುಣ ಹಬ್ಬು ಹಾಗೂ ಆರು ಮಂದಿ ಮಕ್ಕಳ ಸಾಹಿತ್ಯ ಸಾಧನೆಯನ್ನು ಮನಗಂಡು ಏಳು ಮಂದಿ ಸಾಹಿತಿಗಳಿರುವ ಏಕೈಕ ಕುಟುಂಬ ದಾಖಲೆಯಲ್ಲಿ ಉಲ್ಲೇಖಿಸಿದೆ. ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಕುಟುಂಬವೇ ಈ ಕರ,ಮಸ್ತಕಗಳಲ್ಲಿ ಸರಸ್ವತಿಯ ಆಶ್ರಯತಾಣವಾಗಿರುವ ಕುಟುಂಬ.
ಅರುಣಕುಮಾರ ಅವರ ತಂದೆ 1938 ರಿಂದ ಬರೆದ ಅನೇಕ ವೈಚಾರಿಕ ಲೇಖನಗಳು, ಕವನ, ವಿಡಂಬನೆ, ವ್ಯಂಗ್ಯಚಿತ್ರಗಳ ಸಂಕಲನ ಅನಾಮಿಕನ ಉಲುಹು ಎಂಬ ಶೀರ್ಷಿಕೆಯಲ್ಲಿ ಮುದ್ರಣಗೊಂಡು ಈಗಾಗಲೇ ಜನಪ್ರಿಯವಾಗಿದೆ.
ಇವರ ಹಿರಿಯ ಸಹೋದರ ದಿವಂಗತ ಸುಭಾಷಚಮದ್ರ ಹಬ್ಬು ’ವ್ಯಕ್ತ’ ಎಂಬ ಶೀರ್ಷಿಕೆಯಡಿ ತಮ್ಮ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ..
ಎರಡನೇ ಹಿರಿಯ ಸಹೋದರ ಪ್ರೊ. ಮೋಹನದಾಸ ಹಬ್ಬು ಒಬ್ಬ ಬರೆಹಗಾರನಾಗಿದ್ದು ಕಥಾ ಸಂಕಲನ, ಕವನ ಸಂಕಲನ, ನಾಟಕ, ವಿಮರ್ಶಾ ಗ್ರಂಥ, ಗಜಲ್ ಗಳ ಅನುವಾದ ಮೊದಲಾದ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಆ ಕರಾಳ ರಾತ್ರಿ ನಾಟಕ ಚಲನಚಿತ್ರವಾಗಿದೆ. ಮೂರನೇ ಹಿರಿಯ ಸಹೋದರ ರಾಮಚಂದ್ರ ಹಬ್ಬು ಅಲಿಯಾಸ್ ಮದನ ಮಹಾತ್ಮಾ ಗಾಂಧಿಯವರ ಜೀವನ ಚರಿತ್ರೆಯೆಂಬ ಬೃಹತ್ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವತಃ ಅರುಣಕುಮಾರ ರಾಜ್ಯದ ಪತ್ರಿಕೋದ್ಯಮದಲ್ಲಿ ಮೂರುವರೆ ದಶಕಗಳ ಕಾಲ ನಿರ್ವಹಿಸಿದ್ದು, ಪತ್ರಿಕೋದ್ಯಮ ಕುರಿತು ನಾಲ್ಕು ಕೃತಿಗಳನ್ನು ರಚಿಸಿದ್ದು, ಖ್ಯಾತ ಸಾಹಿತಿ ಗೋಪಾಲಕೃಷ್ಣ ನಾಯಕರ ಜೀವನ ಚರಿತ್ರೆ, ಆತ್ಮ ಚರಿತ್ರೆ ’ಬೊಗಸೆ ನೀರು’ ಇಷ್ಟರಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಇವರ ಕಿರಿಯ ಸಹೋದರ ಉದಯಕುಮಾರ ಹಬ್ಬು ಈಗಾಗಲೇ ಕಥೆ,ಕವನ, ಕಾದಂಬರಿ ಸೇರಿ ಐವತ್ತಕ್ಖೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾಗಿದ್ದಾರೆ. ಇನ್ನೊಬ್ಬ ಸಹೋದರ ಜಯಪ್ರಕಾಶ ಹಬ್ಬು ನೆನಪಿನ ಜರಡಿಯಲ್ಲಿ ಎಂಬ ಆತ್ಮಾವಲೋಕನ ಕೃತಿ ರಚಿಸಿದ್ದು ಅದು ಸಾಕಷ್ಟು ಜನಪ್ರಿಯವಾಗಿದೆ.
ಇನ್ನೊಂದು ವಿಶೇಷವೆಂದರೆ ಬುದ್ಧನ ತ್ರಿಪಿಟಕದ ನಾಲ್ಕು ಬೃಹತ್ ನಿಕಾಯಗಳನ್ನು ನಾಲ್ಕು ಸಹೋದರರು ಕನ್ನಡಕ್ಕೆ ಅನುವಾದಿಸಿದ್ದು ಅವುಗಳನ್ನು ಬೆಂಗಳೂರಿನ ಮಹಾಬೋಧಿ ಸಂಸ್ಥೆ ಪ್ರಕಟಿಸಿದೆ. ಈ ಸಹೋದರರೆಲ್ಲರ ಪುಸ್ತಕಗಳ ಪ್ರದರ್ಶನ ಇತ್ತೀಚೆಗೆ ಸಾಗರ ತಾಲೂಕಿನ ಆನಂದಪುರದಲ್ಲಿ ಏರ್ಪಡಿಸಲಾಗಿತ್ತು.
ಸಾಹಿತ್ಯ ರಚನೆಗೆ ತಮ್ಮ ತಂದೆಯೆ ಪ್ರೇರಣೆಯಾದರೂ ನಾವು ನಡೆದ ಹೆಜ್ಜೆ ಗುರುತುಗಳು, ಹಿನ್ನೋಟ,ಅನುಭವಿಸಿದ ಸಂಕಷ್ಟಗಳು ಎಲ್ಲವೂ ನಮ್ಮೆಲ್ಲರಲ್ಲೂ ಬರವಣಿಗೆ ತುಡಿತ ಹೆಚ್ಚಿಸಿದವು.
ಅರುಣಕುಮಾರ ಹಬ್ಬು, ಹಿರಿಯ ಪತ್ರಕರ್ತರು,