ಹುಬ್ಬಳ್ಳಿ-ಧಾರವಾಡ ಸುದ್ದಿ

ಡಿಪಿಆರ್ ಹೆಸರಲ್ಲಿ ಜನತೆಗೆ ಮತ್ತೆ ಬಿಜೆಪಿ ಮೋಸ!

ಬಿಡುಗಡೆ ಮಾಡಿದ್ದು ದಿನಾಂಕವಿಲ್ಲದ ನಿರ್ಗತಿಕ ದಾಖಲೆ
ಕಳಸಾ ಬಂಡೂರಿ ವಾಸ್ತವ ಬಿಚ್ಚಿಟ್ಟ ಎಚ್.ಕೆ.ಪಾಟೀಲ

ಹುಬ್ಬಳ್ಳಿ: ಕಳಸಾ ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿರುವ ದಾಖಲೆ ದಿನಾಂಕವಿಲ್ಲದ ನಿರ್ಗತಿಕ ದಾಖಲೆಯಾಗಿದೆ. ಕೆಲಸ ಆರಂಭ ಮಾಡಬೇಕಾದ ಸಂದರ್ಭದಲ್ಲಿ ಡಿಪಿಆರ್ ಅನುಮತಿ ಬಗ್ಗೆ ಮಾತನಾಡುತ್ತಿರುವುದು ಪುನಃ ಜನರನ್ನು ಮೋಸ ಮಾಡುವು ದಾಗಿದೆ ಎಂದು ಮಾಜಿ ಜಲ ಸಂಪನ್ಮೂಲ ಸಚಿವ ಹಾಗೂ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ ಬಿಜೆಪಿಯ ವಿರುದ್ಧ ಕಿಡಿ ಕಾರಿದರು.


ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಯೋಜನೆ ಬಗ್ಗೆ ಕಾಳಜಿಯಿದ್ದರೆ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿತ್ತು ಎಂದರಲ್ಲದೇ
ಜನೇವರಿ 2 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮಹದಾಯಿ ಜಲ ಜನಾದೋಲನ ಸಮಾವೇಶದ ಮುಜುಗರದಿಂದ ತಪ್ಪಿಸಿಕೊಳ್ಳಲು ಮಾಡಿರುವ ಕುತಂತ್ರ ಎಂದು ಆರೋಪಿಸಿದರು.

ಈಗಾಗಲೇ ಯೋಜನೆಗೆ ಅನುಮತಿ ಪಡೆದ ನಂತರವೂ ಪುನಃ ಡಿಪಿಆರ್ ಅನುಮತಿ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದರೆ ಒಂದು ಹಂತ ಮುಂದೆ ಹಾಗಿದ್ದಾರೆ ಎನ್ನಬಹುದಿತ್ತು. ಅದು ಬಿಟ್ಟು ಪರಿಷ್ಕೃತ ಡಿಪಿಆರ್ ಸಲ್ಲಿಸಿ ಅದಕ್ಕೆ ಅನುಮತಿ ನೀಡಿದೆ ಎಂದು ಜನರನ್ನು ವಂಚಿಸುವ ಕೆಲಸವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ದಿನಾಂಕವಿಲ್ಲ. ಇದು ಸರಕಾರಿ ದಾಖಲೆ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈಗಾಗಲೇ ೨೦೦೨ ರಲ್ಲಿ ಕಳಸಾ ನಾಲಾ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಅಲ್ಲಿ ಕಾಮಗಾರಿ ಕೂಡ ಆಗಿದೆ. ಈ ಎಲ್ಲಾ ಕಾರ್ಯಗಳು ಡಿಪಿಆರ್ ಇಲ್ಲದೆ ನಡೆದಿದೆಯೇ. ಕೆಲಸ ಮಾಡುವ ಹಂತದಲ್ಲಿ ಯೋಜನೆ ಇರುವಾಗ ಡಿಪಿಆರ್ ಎನ್ನುವ ಒಂದನೇ ತರಗತಿ ಯ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮಹದಾಯಿ ಯೋಜನೆಗೆ ಗೋವಾ ಮುಖ್ಯಮಂತ್ರಿ ಇನ್ನು ಮುಂದೆ ಯಾವುದೇ ತಕರಾರು ಸೇರಿದಂತೆ ಇನ್ನಿತರೆ ಸಮಸ್ಯೆ ಮಾಡುವುದಿಲ್ಲ ಎನ್ನುವ ಪತ್ರ ನೀಡಿರುವುದಾಗಿ ಇದೇ ನೆಹರು ಮೈದಾನದಲ್ಲಿ ಪ್ರದರ್ಶಿಸಿದ್ದರು. ಅದು ಬೋಗಸ್ ಪತ್ರ ಎಂಬುವುದು ಗೊತ್ತಾಯಿತು. ಇದೀಗ ಕೇಂದ್ರ ಸಚಿವರು ಬಿಡುಗಡೆ ಮಾಡಿರುವ ದಾಖಲೆಯಲ್ಲಿ ದಿನಾಂಕ ಇಲ್ಲದಿರುವುದನ್ನು ನೋಡಿದರೆ ಇದು ಕೂಡ ಜನರನ್ನು ವಂಚಿಸುವ ನಿರ್ಗತಿಕ ದಾಖಲೆ ಅನ್ನಿಸುತ್ತದೆ. ಇದೇ ದಾಖಲೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಪ್ರಸ್ತಾಪ ಮಾಡಿದರು. ಒಂದು ವೇಳೆ ಈ ದಾಖಲೆ ನಿಜವಾಗಿದ್ದರೆ ಹಾಕಿರುವ ನಿಬಂಧನೆಗಳು ರಾಜ್ಯದ ಪಾಲಿಗೆ ಸಮಸ್ಯೆ ತಂದೊಡ್ಡಲಿವೆ ಎನ್ನುವುದನ್ನು ಮರೆತಿದ್ದಾರೆ. ಇವರಿಗೆ ಯೋಜನೆ ಬಗ್ಗೆ ಕಾಳಜಿಯಿದ್ದರೆ ಈ ನಿಬಂದನೆಗಳ ಬಗ್ಗೆ ಸರ್ವ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಬಹುದಿತ್ತು. ಈ ಎಲ್ಲಾ ಬೆಳವಣಿಗೆ ನೋಡಿದರೆ ಜನರನ್ನು ಮತ್ತೊಮ್ಮೆ ಮೂರ್ಖರನ್ನಾಗಿಸುವ ಕುತಂತ್ರ ಎಂದರು.

ಮಾಜಿ ಸಚಿವ ಎ.ಎಂ.ಹಿಂಡಸಗೇರಿ,ಮಾಜಿ ಶಾಸಕ ಜಿ.ಎಸ್.ಪಾಟೀಲ, ಮುಖಂಡರಾದ ಅನಿಲಕುಮಾರ ಪಾಟೀಲ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ಎಫ್.ಎಚ್. ಜಕ್ಕಪ್ಪನವರ ಗೋಷ್ಠಿಯಲ್ಲಿ ಇದ್ದರು.

ಬಾಕ್ಸ
೨ರಂದು ಜಲ-ಜನಾಂದೋಲನ
ನ್ಯಾಯಾಧಿಕರಣ ಆದೇಶ ಬಂದು ನಾಲ್ಕು ವರ್ಷ ಕಳೆದಿದ್ದರೂ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಕುರಿತಾದ ಸಣ್ಣ ಪ್ರಗತಿಯೂ ಇಲ್ಲ. ನಾಲ್ಕು ದಿನಗಳ ಹಿಂದೆ ದೆಹಲಿಯ ಅಧಿಕೃತವಾಗಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇಲ್ಲಿಯವೆರೆಗೂ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿಗೆ ಪ್ರಸ್ತಾವನೆ ಬಂದಿಲ್ಲ ಎಂದಿದ್ದರು. ಜ.2 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮಹದಾಯಿ ಜಲ ಹಾಗೂ ಜನಾಂದೋಲನ ನಡೆಯಲಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ ಸೇರಿದಂತೆ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು

 

administrator

Related Articles

Leave a Reply

Your email address will not be published. Required fields are marked *