ಕಲಿಸಿದ ಗುರುವಿಗೆ ನಮನ, ನೆನಪುಗಳ ಮೆರವಣಿಗೆ
ಹಳ್ಳಿ ಶಾಲೆಯಲ್ಲಿ ಸಂಭ್ರಮದ ಹೊನಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಡಕಲಕಟ್ಟಿ 1998-99 ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ, ಸ್ನೇಹ ಸಮ್ಮೇಳನದ ರಜತ ಮಹೋತ್ಸವ
ಧಾರವಾಡ: ತಾಲ್ಲೂಕಿನ ಪುಟ್ಟ ಗ್ರಾಮ ಪುಡಕಲಕಟ್ಟಿಯಲ್ಲಿ ಭಾನುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಸಮಾಗಮವಾಗಿತ್ತು. ಸೇರಿದ್ದವರೆಲ್ಲಾ ತಮ್ಮ ಬಾಲ್ಯದ ನೆನಪುಗಳನ್ನು ಒಬ್ಬೊಬ್ಬರು ಒಂದಂದಾಗಿ ಹೇಳಿದಾಗ ಕೂಡಿದ್ದ ಎಲ್ಲರಲ್ಲಿ ನಗೆಯ ಬುಗ್ಗೆ ಉಕ್ಕುತ್ತಿತ್ತು. ನೆನಪಿನ ಬುತ್ತಿಯನ್ನು ಬಿಚ್ಚಿದಾಗ ಆಗುವ ಸಂತೋಷಕ್ಕೆ ಪಾರವೇ ಇರಲಿಲ್ಲ. ನೆನಪುಗಳ ಮೆರವಣಿಗೆ ಎಲ್ಲರೂ ಮಿಂದೆದ್ದರು.
ಬಾಲ್ಯದ ಆಟ ಆ ಹುಡುಗಾಟ ಎಂಬಂತೆ… ಆಡಿದ ಆಟಗಳು, ಕಾಡಿದ್ದ ನೆನಪುಗಳು, ಗೆಳೆಯರು, ಗೆಳತಿಯರಿಗೆ ಏನಾದರೂ ಮಾತನಾಡಿ ಮಾಡಿದ್ದ ಚೆಸ್ಟೆಗಳು, ಆಟವಾಡುವಾಗ ಬಿದ್ದೆದ್ದ ಸನ್ನಿವೇಶಗಳು, ಗೆದ್ದಾಗ ಜಗತ್ತನ್ನೇ ಗೆದ್ದಷ್ಟು ಸಂಭ್ರಮಿಸಿದ್ದನ್ನು ಮೆಲುಕು ಹಾಕಿದಾಗ ಆಗುವ ಸಂತಸ, ಹಾಗೆಲ್ಲಾ ಮಾಡಿದ್ದೇವು ಎಂದು ನಗುತ್ತಿದ್ದರು. ಇವು ೨೫ ವರ್ಷಗಳ ಹಿಂದಿನ ನೆನಪುಗಳನ್ನು ಚಿಚ್ಚಿಟ್ಟದ್ದು ಗ್ರಾಮದ ಶಾಲೆಯ ಆವರಣದಲ್ಲಿ.
ಕಾರಣ ಇಷ್ಟೇ 1998-99 ಸಾಲಿನಲ್ಲಿ 7ನೇ ತರಗತಿ ಪಾಸಾದ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನದ ರಜತ ಮಹೋತ್ಸವ ಜೊತೆಗೆ ಅಕ್ಷರ ಕಲಿಸಿದ ಗುರುವಿಗೆ ಗುರುವಂದನೆ ಕಾರ್ಯಕ್ರಮದ ಸಂಭ್ರಮ ಅಲ್ಲಿತ್ತು.
ಹಿರಿಯ ವಿದ್ಯಾರ್ಥಿಗಳು ತಮ್ಮ ಸ್ಮೃತಿಪಟಲದಲ್ಲಿದ್ದ ನೆನಪುಗಳನ್ನು ಹೇಳಿದರು. ತಮಗಿಷ್ಟವಾದ ವಿಷಯ ಹಾಗೂ ಗುರುಗಳು ಹೇಳಿದ ಪಾಠವನ್ನು ನೆನಪಿಸಿಕೊಂಡರು. ಎಸ್.ಎಸ್.ಸಿದ್ಧರಾಮಯ್ಯಮಠ, ಆರ್.ಬಿ.ಲಿಂಗದಾಳ, ಎನ್.ಜಿ.ಗುರುಪುತ್ರನವರ, ಎಂ.ಎಸ್.ಕರೀಕಟ್ಟಿ, ಎಂ.ಐ. ದೀವಟಗಿ, ಎಫ್.ಎಂ. ಇಟಗಿ, ಲತಾ ಮುಳ್ಳೂರ, ಲೀಲಾವತಿ ಬಾಗಲಕೋಟಿ, ಸುನತಾ ತೇಗೂರ, ಹಾಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು.
ನಿವೃತ್ತರಾಗಿ ಸರಿಯಾಗಿ ನಡೆಯಲು ಆಗದ ಹಿರಿಯ ಶಿಕ್ಷಕರನ್ನು ವಿದ್ಯಾರ್ಥಿಗಳು ಕೈಹಿಡಿದು ವೇದಿಕೆಗೆ ಕರೆ ತಂದರು. ಇದನ್ನು ಸ್ಮರಿಸಿದ ಗಣ್ಯರು, ಹಿರಿಯ ವಿದ್ಯಾರ್ಥಿಗಳು, ನಾವು ಶಾಲೆಗೆ ಬಂದಾಗ ನಮಗೆ ಎಲ್ಲಿ ಹೋಗಬೇಕು ಎಂದು ಗೊತ್ತಾಗದಾಗ ನಮ್ಮನ್ನು ಕೈ ಹಿಡಿದು ನಡೆಸಿದರು. ಬಿದ್ದಾಗ ಎತ್ತಿ ಮುದ್ದಾಡಿ ಬೆಳೆಸಿದರು. ಅಂಥ ಹಿರಿಯ ಶಿಕ್ಷಕರನ್ನು ಇಂದು ವೇದಿಕೆಗೆ ತಂದ ಖುಷಿ ವಿದ್ಯಾರ್ಥಿಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಸಾನ್ನಿಧ್ಯ ವಹಿಸಿದ್ದ ಚನ್ನವೀರಯ್ಯ ಹಿರೇಮಠ, ಪ್ರಭಯ್ಯಾ ಚಿಕ್ಕಮಠ, ಅಧ್ಯಕ್ಷತೆ ವಹಿಸಿದ್ದ ಗ್ರಾ,ಪಂ ಅಧ್ಯಕ್ಷ ಮಹಾಬಳೇಶ್ವರ ಕೋರಕೊಪ್ಪ, ವಿಶೇಷ ಆಹ್ವಾನಿತರಾಗಿದ್ದ ಐರನ್ ಮ್ಯಾನ್ ಹಾಗೂ ಟೈಗರ್ ಮ್ಯಾನ್ ಖ್ಯಾತಿಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಧಾರವಾರ ಜಾನಪದ ಪರಿಷತ್ ಅಧ್ಯಕ್ಷ ಶ್ರೀಶೈಲ ಹುದ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಡಯಟ್ ಹಿರಿಯ ಉಪನ್ಯಾಸಕ ಪ್ರಭಯ್ಯ ಚಿಕ್ಕಮಠ, ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ, ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಜಟ್ಟಣ್ಣವರ ಅವರು ಹಿತ ನುಡಿಗಳನ್ನು ಹೇಳಿ, ಗುರುಗಳನ್ನು ನೆನಪಿಸಿಕೊಂಡ ವಿದ್ಯಾರ್ಥಿಗಳ ಕಾರ್ಯ ಸ್ತುತ್ಯಾರ್ಹ ಎಂದು ಶ್ಲಾಘಿಸಿದರು.
ಗ್ರಾಮದಲ್ಲಿ ದಿನವಿಡೀ ಸಂಭ್ರಮದ ವಾತಾವರಣ, ಹರ್ಷದ ಹೊನಲು ಇತ್ತು. ಎಲ್ಲರ ಕಣ್ಣಲ್ಲಿ ಏನೋ ಒಂದು ಸಾಧನೆ ಎಂಬಂತೆ ಆನಂದಬಾಷ್ಟ, ಮುಖದಲ್ಲಿ ಮಂದಹಾಸ, ನಗು ಇತ್ತು. ಒಲ್ಲದ ಮನಸ್ಸಿನಿಂದಲೇ ಎಲ್ಲರೂ ಕೈ ಮುಗಿಯುತ್ತಾ ನಮಸ್ಕಾರ ಎನ್ನುತ್ತಾ ಒಲ್ಲದ ಮನಸ್ಸಿನಿಂದಲೇ ಶಾಲಾ ಆವರಣದಿಂದ ಹೊರನಡೆದರು.
98-99 ಸಾಲಿನ ಬಸಯ್ಯ ಸುತಗಟ್ಟಿಮಠ, ರಾಜು ದೇವಣ್ಣವರ ಶಿವಲೀಲಾ ಬುಡರಕಟ್ಟಿ, ಭಾರತಿ ಸವಟಗಿ, ರೋಹಿಣಿ ದೊಡಮನಿ, ಮೈಲಾರ ಅಂಬಡಗಟ್ಟಿ, ಹುಚ್ಚಪ್ಪ ಮಡಿವಾಳರ, ವೀರಣ್ಣ ಹಟ್ಟಿಹೊಳಿ ಸೇರಿದಂತೆ ತರಗತಿಯ 32 ವಿದ್ಯಾರ್ಥಿಗಳು ಭಾಗವಹಿಸಿದ್ದರು.