ಧಾರವಾಡ : ಬಡ್ಡಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ವಿಷ ಸೇವಿಸಿದ ಘಟನೆ ಇಲ್ಲಿನ ಸವದತ್ತಿ ರಸ್ತೆಯಲ್ಲಿನ ಗೊಲ್ಲರ ಕಾಲನಿಯಲ್ಲಿ ನಡೆದಿದೆ.
ನಜೀರಸಾಬ ಅತ್ತಾರ ಎಂಬುವನೇ ವಿಷ ಸೇವಿಸಿದ ವ್ಯಕ್ತಿ. ಖಾಸಗಿಯವರಿಂದ ಸಾಲ ಪಡೆದಿದ್ದ ಈತನು, ಬಡ್ಡಿ ಕಿರುಕುಳಕ್ಕೆ ಬೇಸತ್ತು ಇಂದು ಮನೆಯಲ್ಲಿ ವಿಷ ಸೇವಿಸಿದ್ದಾನೆ.
ತೀವ್ರ ಅಸ್ವಸ್ಥನಾದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನಿಗೆ ಪ್ರಜ್ಞೆ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಶಹರ ಠಾಣೆಯ ಸಿಪಿಐ ಎನ್.ಜಿ.ಕಾಡದೇವರ ತಿಳಿಸಿದ್ದಾರೆ.
ಸಾಂತ್ವನ: ಬಡ್ಡಿ ಕಿರುಕುಳಕ್ಕೆ ಬೇಸತ್ತು ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲಾದ ನಜೀರಸಾಬನನ್ನು ಭೇಟಿ ಮಾಡಿದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹಾಗೂ ಸದಸ್ಯರು ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇಂತಹ ಘಟನೆಗಳು ಮರುಕಳಿಸಬಾರದು. ಅಲ್ಲದೇ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ತಮಟಗಾರ ಅವರು ಪೊಲೀಸ್ ಆಯುಕ್ತರಿಗೆ ಆಗ್ರಹಿಸಿದ್ದಾರೆ.