ಒಡವೆ, ಹಣಕ್ಕಾಗಿ ಮರ್ಡರ್ ಮಾಡಿ ಸುಟ್ಟಿದ್ದ ಕಿರಾತಕರು
ಧಾರವಾಡ: ಹುಬ್ಬಳ್ಳಿಯ ಈಶ್ವರನಗರದ ನಿವಾಸಿಗಳಾದ ಮಹಿಳೆಯರಿಬ್ಬರನ್ನು ಕೊಲೆ ಮಾಡಿದ್ದಲ್ಲದೇ ಪೆಟ್ರೋಲ್ ಸುರಿದು ತಾಲೂಕಿನ ಕಾಡನಕೊಪ್ಪ ಹಾಗೂ ತಂಬೂರ ಬಳಿ ಸುಟ್ಟು ಹಾಕಿದ್ದ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಳೇ ಹುಬ್ಬಳ್ಳಿ ಪ್ರದೇಶದ ಈಶ್ವರ ನಗರದ ಇಂದ್ರಾಬಾಯಿ ಪವಾರ ಹಾಗೂ ಮಹಾದೇವಿ ನೀಲಮ್ಮನವರ ಎಂಬ ಮಹಿಳೆಯರನ್ನು ಕೊಲೆ ಮಾಡಿ ಕೆಲ ದಿನಗಳ ಹಿಂದೆ ಒಂದೇ ರೀತಿಯಲ್ಲಿ ಸುಟ್ಟು ಹಾಕಲಾಗಿತ್ತು.ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಜನರನ್ನು ಬಂಧಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹುಬ್ಬಳ್ಳಿ ಸಮೀಪದ ಈಶ್ವರನಗರದ ದೇವರಾಜ ಮೊಗಲೇರ, ಅದರಗುಂಚಿ ಗ್ರಾಮದ ಕಾಳಪ್ಪ ರಘುವೀರ ರೋಗಣ್ಣವರ, ಬಸವರಾಜ ಶಂಕ್ರಪ್ಪ ವಾಳದ, ಮಹ್ಮದರಫೀಕ ಬಡಿಗೇರ, ಬೆಳಗಲಿಯ ಶಿವಾನಂದ ಲಕ್ಷ್ಮಣ ಕೆಂಚಣ್ಣವರ ಮತ್ತು ರೊಟ್ಟಿಗವಾಡದ ಗಂಗಪ್ಪ ಮರತಂಗಿ ಬಂಧಿತ ಆರೋಪಿಗಳಾಗಿದ್ದಾರೆಂದರು.
ದಿ.11-5-2022 ರಂದು ಕಲಘಟಗಿ ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಮಹಿಳೆಯನ್ನು ಸುಟ್ಟು ಹಾಕಿದ ಪ್ರಕರಣ ಬೆಳಕಿಗೆ ಬಂದಿತ್ತು. ಇದು ಈಶ್ವರ ನಗರದ ಮಹಾದೇವಿ ನೀಲಣ್ಣವರ ಎಂಬುದು ತನಿಖೆ ಸಂದರ್ಭದಲ್ಲಿ ಗೊತ್ತಾಗಿತ್ತು.
ದಿ.2-7-22 ರಂದು ತಂಬೂರ ಬಳಿ ಅರಣ್ಯ ಪ್ರದೇಶ ದಲ್ಲಿ ಸುಮಾರು 75 ವರ್ಷ ವಯಸ್ಸಿನ ಮಹಿಳೆಯ ಶವವನ್ನು ಸೀಮೆ ಎಣ್ಣೆ ಸುರಿದು ಸುಟ್ಟು ಹಾಕಲಾಗಿತ್ತು. ಎರಡೂ ಹತ್ಯೆ ಪ್ರಕರಣಗಳಲ್ಲಿನ ಸಾಮ್ಯತೆಯ ಜಾಡು ಹಿಡಿದು ತನಿಖೆ ಕೈಕೊಳ್ಳಲಾಗಿತ್ತು.
ತಮ್ಮ ಮೋಜಿನ ಖರ್ಚಿಗಾಗಿ ಆರೋಪಿಗಳು ಮಹಿಳೆಯರ ಬಳಿಯ ಹಣ ಮತ್ತು ಒಡವೆಗಳಿಗಾಗಿ ಕೊಲೆಗೈದು, ನಂತರ ಕಲಘಟಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಂದು ಸುಟ್ಟು ಹಾಕಿದ್ದರು. ಕಲಘಟಗಿ ಸಿಪಿಐ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ, ಸಿಪಿಐಗಳಾದ ರಮೇಶ ಗೋಕಾಕ, ಪ್ರಮೋದ ಯಲಿಗಾರ , ಜಯಪಾಲ ಪಾಟೀಲ ಮತ್ತು ನವನಗರ ಸಿಪಿಐ ಬಿ.ಎಸ್.ಮಂಟೂರ, ಪಿಎಸ್ ಐ ಬಿ.ಎನ್.ಸಾತಣ್ಣವರ ಮತ್ತು ಸಿಬ್ಬಂದಿ ತನಿಖೆ ಕೈಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಡಿಎಸ್‌ಪಿ ಎಂ.ಬಿ.ಸಂಕದ ಮತ್ತು ಪೊಲೀಸದ ಅಧಿಕಾರಿಗಳು ಸುದ್ದಿಗೋಷ್ಠಿ ಯಲ್ಲಿದ್ದರು.