ಕಸದ ರಸಕ್ಕೆ ಬಕೆಟ್ ಹಿಡಿದು ಕೋಟಿಗಟ್ಟಲೆ ಲೂಟಿ
ಹುಬ್ಬಳ್ಳಿ: ಕಸ ನಿರ್ವಹಣೆ ಸರಕಾರಕ್ಕಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ’ಸ್ವಚ್ಛ ಭಾರತ’ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಯತ್ನ ದೇಶಾದ್ಯಂತ ನಡೆದಿದ್ದು ಈ ಯೋಜನೆ ಅಧಿಕಾರಿಗಳಿಗೆ ಲೂಟಿ ಹೊಡೆಯಲು ದೊಡ್ಡ ಹುಲ್ಲುಗಾವಲಾಗಿ ಪರಿಣಮಿಸಿದೆಯಲ್ಲದೇ, ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಂತೂ ಅಕ್ಷರಶಃ ಕಸದಲ್ಲೂ ರಸ ತೆಗೆದು ಕೋಟ್ಯಾಂತರ ರೂ. ಗುಳುಂ ಮಾಡಲಾಗಿದೆ.
ಸ್ವಚ್ಛ ಭಾರತ್ ಯೋಜನೆ ಜಾರಿಯಾದ ಮೇಲೆ ಸರಕಾರ ಕಸ ನಿರ್ವಹಣೆ ಯನ್ನು ಜಾರಿಗೊಳಿಸುತ್ತಿದ್ದು, ಮೊದಲು ಪಟ್ಟಣಗಳಿಗೆ ಮಾತ್ರ ಸಿಮೀತ ವಾಗಿದ್ದ ಕಸ ನಿರ್ವಹಣೆ ಹಳ್ಳಗಳಲ್ಲೂ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಕಸ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಕೊಟ್ಟು ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆದೇಶ ನೀಡಿದೆ. ಈ ಆದೇಶದಿಂದ ಅಧಿಕಾರಿಗಳು ಅಕ್ಷರಶಃ ಚಕ್ಕಳ ಬಕ್ಕಳ ಹಾಕಿ ಊಟ ಮಾಡಿದ್ದು, ಕಸದ ಡಬ್ಬಿಗಳು ಲಕ್ಷ ಲಕ್ಷ ಜೇಬು ತುಂಬುವಂತೆ ಮಾಡಿದೆ.
ಈಗಾಗಲೇ ಕೆಲ ವಾಹಿನಿಗಳು ನಡೆಸಿದ ತನಿಖಾ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಮತ್ತು ಪೂರೈಕೆದಾರರ ಕಳ್ಳಾಟ ಬಯಲಿಗೆ ಬಂದಿದ್ದು ಧಾರವಾಡ ಜಿಲ್ಲೆಯಲ್ಲಿ ಸುಮಾರು ಎರಡುವರೆ ಕೋಟಿ ಗೂ ಹೆಚ್ಚಿನ ಗೋಲಮಾಲ್ ನಡೆದಿದೆ ಎಂಬ ಸತ್ಯ ಹೊರಬಂದಿದೆ.
ಸಾಮಾನ್ಯವಾಗಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಹೇಳಲಾಗುತ್ತಿದ್ದು,ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 7ತಾಲೂಕುಗಳ 1,54,553 ಕುಟುಂಬಗಳಿಗೆ (ಪ್ರತಿ ಕುಟುಂಬಕ್ಕೆ ಎರಡರಂತೆ) ಡಸ್ಟ್‌ಬಿನ್ ಗಳನ್ನು ಕೊಡಲಾಗುತ್ತಿದ್ದು, ಕೇವಲ ಕಸದ ಬಕೆಟ್‌ಗಳ ಖರೀದಿಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರವಾಗಿದ್ದು ಅಲ್ಲದೇ ಪ್ರತಿ ಗ್ರಾಮ ಪಂಚಾಯತಿಯಿಂದ ವಾಹನಗಳನ್ನೂ ಖರೀದಿಸಲಾಗಿದ್ದು ಅದರಲ್ಲೂ ದೊಡ್ಡ ಗೋಲಮಾಲ್ ಆಗಿದೆ ಎನ್ನಲಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಸದ್ಯಕ್ಕೆ ಒಂದು ಡಸ್ಟ್ ಬಿನ್ ಕೊಡಲಾಗಿದೆ. ಕೆಲವಡೆ ಎರಡೂ ಡಸ್ಟ್ ಬಿನ್ ಕೊಡಲಾಗಿದ್ದು ಕಸ ಸಂಗ್ರಹಣೆ ಆರಂಭವಾಗಿದೆ. ಎಲ್ಲೆಲ್ಲಿ ಒಂದು ಡಸ್ಟ್ ಬಿನ್ ಕೊಡಲಾಗಿದೆಯೋ ಅಲ್ಲಿ ಮತ್ತೊಂದು ಡಸ್ಟ್ ಬಿನ್ ಕೊಡಲು ಅಧಿಕಾರಿಗಳು ಆದೇಶಿಸಿದ್ದು, ಇದು ಪಿಡಿಓ ಹಾಗೂ ತಾಲೂಕಾ ಇಓಗಳಂತೂ ಬಿರಿಯಾನಿ ಊಟಕ್ಕೆ ಕುಳಿತಿರುವುದು ಮೇಲ್ನೋಟಕ್ಕೆ ಸಾಭೀತಾಗುವಂತಿದೆ.
ಡಸ್ಟ್ ಬಿನ್ ಖರೀದಿಯಲ್ಲೇ ಕೊಟ್ಯಾಂತರ ರೂಪಾಯಿ ಹಗರಣವಾಗಿದ್ದು ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ಈ ಡಸ್ಟ್ ಬಿನ್ ಗಳ ಬೆಲೆ 110 ರಿಂದ 140 ರೂಪಾಯಿ ಕೊಟ್ಟು ಖರೀದಿಸಲಾಗಿದೆ. ಆದರೆ ಇವುಗಳ ಮಾರುಕಟ್ಟೆ ಬೆಲೆ ಉತ್ತಮ ಗುಣಮಟ್ಟದ್ದಕ್ಕೆ ಹೆಚ್ಚೆಂದರೆ 60 ರೂ ಆಗಿದ್ದು ,ಈಗಾಗಲೇ ಸರಭರಾಜು ಆಗಿರುವವು ಎರಡನೇ ಮತ್ತು ಮೂರನೇ ದರ್ಜೆಯವುಗಳಾಗಿದ್ದು 35ರಿಂದ 40 ರೂಗೆ ಸಿಗುವಂತವು. ಸರಾಸರಿ ಒಂದೊಂದು ಕನಿಷ್ಟ 60ರಿಂದ 70 ರೂ ಜೇಬಿಗಿಳಿಸಿದ್ದಾರೆನ್ನಲಾಗುತ್ತಿದೆ. ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತಿಗಳು ನವನಗರದ ಗರುಡಾ ಎಂಟರಪ್ರೈಸಸ್ ಸೇರಿದಂತೆ ಸುಮಾರು 5 ಏಜೆನ್ಸಿಗಳ ಮೂಲಕ ಡಸ್ಟ್ ಬಿನ್‌ಗಳನ್ನು ಖರೀದಿ ಮಾಡಿವೆ. ಉತ್ತಮ ದರ್ಜೆಯ ಡಸ್ಟ್ ಬಿನ್ ಖರೀಸುವಂತೆ ಆದೇಶಿಸಲಾಗಿದ್ದರೂ ಖರೀದಿ ಮಾಡಿರುವುದು ಮೂರನೆ ದರ್ಜೆಯದ್ದು ಎನ್ನಲಾಗುತ್ತಿದೆ.
ಡಸ್ಟ್ ಬಿನ್ ತಳದ ಸುತ್ತಳತೆ: 20.5 ಸೆಮೀ,
ಒಳ ಕಂಠದ ಸುತ್ತಳತೆ: 27ಸೆಮೀ,
ಹೊರ ಕಂಠದ ಸುತ್ತಳತೆ: 29 ಸೆಮೀ,
ಎತ್ತರ: 29 ಸೆಮೀ
ಒಟ್ಟು ತೂಕ
300 ಗ್ರಾಂ ಇರಬೇಕೆಂದು ಹೇಳಲಾಗಿದೆ.
ಡಸ್ಟ್ ಬಿನ್ ಬೆಲೆಯನ್ನು ನಗರದ ಅನೇಕ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಪರೀಶೀಲಿಸಲಾಗಿ ಈಗಾಗಲೇ ಗ್ರಾಮ ಪಂಚಾಯತಿಗಳು ಖರೀದಿಸಿರುವ ಡಸ್ಟ್ ಬಿನ್ ಒಂದಕ್ಕೆ ಬಿಲ್ ಕೊಟ್ಟಿದ್ದರೆ 72 ರೂಪಾಯಿ, ಜಿ ಎಸ್ ಟಿ ತಪ್ಪಿಸಿ ಕೊಟ್ಟಿದ್ದು ಅಂದರೆ ಬಿಲ್ ಇಲ್ದೇ ಕೊಟ್ಟಿದ್ದರೆ 60ರಿಂದ 66 ರೂಪಾಯಿ ಎನ್ನಲಾಗುತ್ತಿದೆ.
ಕೆಲ ಅಂಗಡಿಕಾರರು ಬಿಲ್ ಇಲ್ದೆ ತೆಗೆದುಕೊಂಡಲ್ಲಿ ಮತ್ತಷ್ಟು ವಿಶೇಷ ಡಿಸ್ಕೌಂಟ್ ಕೊಡುವುದಾಗಿ ಹೇಳಿದ್ದು, ಆದರೆ ಖಾತೆಗೆ ಹಣ ಹಾಕ್ಬೇಡಿ, ನಗದು ನೀಡಬೇಕು ಎಂಬುದು ಕಂಡೀಶನ್. ಜಿ ಎಸ್ ಟಿ ತಪ್ಪಿಸಿ ವ್ಯಾಪಾರ ಮಾಡೋ ಖದೀಮರು ಇನ್ನೂ ಜೀವಂತವಾಗಿದ್ದಾರೆಂಬುದಕ್ಕೆ ಇದು ಸಣ್ಣ ಉದಾಹರಣೆ.
ಡಸ್ಟ್ ಬಿನ್ ಅವ್ಯವಹಾರ ಪ್ರಶ್ನಿಸಿದಲ್ಲಿ ತಾವೊಬ್ಬರೆ ಖರೀದಿ ಮಾಡಿಲ್ಲ ಇಡೀ ತಾಲೂಕಿನ ಎಲ್ಲಾ ಪಂಚಾಯತಿಯವರು ಒಂದೇ ಏಜೆನ್ಸಿಯವರ ಬಳಿ ಖರೀದಿ ಮಾಡಿದ್ದೀವಿ,
ನಾನೊಬ್ಬನೇ ಕಳ್ಳ ಅಲ್ಲ ಇಡೀ ಊರಿಗೆ ಊರೇ ಕಳ್ಳರ ಗುಂಪಿದೆ ಎನ್ನುವಂತೆ ಕೆಲ ಪಿಡಿಒಗಳು ಹೇಳಿದರೆ,
ಜಿಲ್ಲಾ ಪಂಚಾಯತನಿಂದ ಎಲ್ಲಿ ಖರೀದಿ ಮಾಡಿ ಅಂತ ಹೇಳಿದಾರೋ ಅಲ್ಲೇ ಖರೀದಿ ಮಾಡಿದ್ದೇವೆ ಎನ್ನುವ ಮಾತು ಬೇರೆ. ಇನ್ನೂ ಕೆಲವೆಡೆ
ಏಜೆನ್ಸಿ ಬೇಡಾ ನಾವೇ ಖರೀದಿ ಮಾಡೋಣ ಎಂದು ಸದಸ್ಯರೇ ಮುಂದೆ ನಿಂತು ಖರೀದಿ ಮಾಡಿಸಿದ್ದಾರಂತೆ. ಕೆಲವರು ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಡೆಗೂ ಬೆರಳು ತೋರಿಸುತ್ತಾರೆ.
ಜಿಲ್ಲೆಯಾದ್ಯಂತ ಡಸ್ಟ್ ಬಿನ್ ಖರೀದಿಯಲ್ಲಿ ಭಾರಿ ಅವ್ಯವಹಾರ ಆಗಿದ್ದು, ರಿಟೇಲ್ ಮಾರುಕಟ್ಟೆಯಲ್ಲಿ 30 ರಿಂದ 70 ರೂಪಾಯಿ ವರೆಗೆ ಸಿಕ್ಕುವ ಈ ಡಸ್ಟ್ ಬಿನ್ ಗಳಿಗೆ 115 ರಿಂದ 135 ರೂಪಾಯಿ ವರೆಗೆ ಡಬ್ಬಲ್ ರೇಟ್ ಹಾಕಿ ಖರೀದಿ ಮಾಡಿದ್ದಾರೆ. ವಾಣಿಜ್ಯ ರಾಜಧಾನಿ ಖ್ಯಾತಿಯ ಹುಬ್ಬಳ್ಳಿಯಲ್ಲಿ ಸಾಲು ಸಾಲು ಹೋಲ್ ಸೇಲ್ ಅಂಗಡಿಗಳು ಇದ್ದರೂ,ಅಂಗಡಿಗಳಲ್ಲಿ ಖರೀದಿ ಮಾಡದೆನೆ ಕೆಲವು ಏಜೆನ್ಸಿಗಳಿಂದ ಖರೀದಿ ಮಾಡಲಾಗಿದೆ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಇದೇ ರೀತಿಯ ಡಬ್ಬಲ್ ರೇಟ್ ಗೆ ಖರೀದಿಯಾಗಿದೆ. ರಿಟೇಲ್ ಮಾರುಕಟ್ಟೆಯಲ್ಲಿನೇ 30 ರಿಂದ 70 ರೂಪಾಯಿ ಪಂಚಾಯತಿಗಳು ಖರೀದಿಸಿರುವ ಡಸ್ಟ್ ಬಿನ್ ಸಿಕ್ಕುತ್ತಿವೆ, ಇನ್ನು ಸಗಟು ಮಾರುಕಟ್ಟೆಯಲ್ಲಿ ಬೆಲೆ ಇನ್ನೂ ಕಡಿಮೆ ಬೆಲೆಗೆ ಸಿಕ್ಕುತ್ತವೆ. ಜಿಲ್ಲೆಯೊಂದರಲ್ಲೇ 1,54,553 ಕುಟುಂಬಗಳಿವೆ ಈ ಕುಟುಂಬಗಳಿಗೆ ತಲಾ ಎರಡು ಡಸ್ಟ್ ಬಿನ್ ಅಂದ್ರೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಡಸ್ಟ್ ಬಿನ್‌ಗಳಾಯ್ತು. ಒಂದು ಡಸ್ಟ್ ಬಿನ್ ಮೇಲೆ 70ರೂಪಾಯಿ ಉಳಿಸಿಕೊಂಡರೂ ಜಿಲ್ಲೆಯ ಒಟ್ಟು ಡಸ್ಟ್ ಬಿನ್ ಗಳ ಮೇಲೆ ಎರಡೂವರೆ ಕೋಟಿಗೂ ಹೆಚ್ಚು ಪಿಡಿಓ ಸೇರಿದಂತೆ ಇನ್ನಿತರರ ಜೇಬು ಸೇರಿದೆ ಎಂಬುದು ಮೇಲ್ನೋಟಕ್ಕೆ ಸಿಗುವ ಲೆಕ್ಕವಾಗಿದೆ.
ಜಿಲ್ಲೆಯ ಒಟ್ಟೂ 144 ಗ್ರಾಮ ಪಂಚಾಯತಿಗಳಲ್ಲಿ ಬಹುತೇಕ ಕಡೆ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತರದೇ ಡಸ್ಟ್ ಬಿನ್ ಖರೀದಿಸಲಾಗಿದ್ದು, ಕೆಲವು ಕಡೆ ಖರೀದಿ ಮಾಡಿದರೂ ಹಂಚಿಲ್ಲವಾಗಿದೆ. ಹುಬ್ಬಳ್ಳಿಗೆ ಹತ್ತಿಕೊಂಡೇ ಇರುವ ರಾಯನಾಳ ಗ್ರಾಮ ಪಂಚಾಯತಿಯೇ ಇದಕ್ಕೆ ಸಾಕ್ಷಿಯಾದರೆ ಉಳಿದ ಕಡೆ ಹೇಗಿರಬಹುದು ನೀವೆ ಊಹಿಸಬಹುದಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಯುಕ್ತರಾಗಿ ದಕ್ಷ ರೀತಿಯಿಂದ ಕಾರ್ಯ ನಿರ್ವಹಿಸಿದ ಹಾಲಿ ಸಿಇಓ ಡಾ.ಸುರೇಶ ಇಟ್ನಾಳ ಈ ಬಗ್ಗೆ ತ್ವರಿತ ಗತಿಯಲ್ಲಿ ತನಿಖೆ ನಡೆಸಿದಲ್ಲಿ ಅನೇಕ ಪಿಡಿಓಗಳ ಬಂಡವಾಳ ಹೊರಬರುವುದು ನಿಶ್ಚಿತ.
ಸ್ವಚ್ಛ ಭಾರತ್ ಯೋಜನೆಯಿಂದ ಗ್ರಾಮಗಳು ಸ್ವಚ್ಛ ಆಗಿದೆಯೆ ಎಂದು ಕೆಲ ಗ್ರಾಮಗಳ ಸಾರ್ವಜನಿಕರನ್ನು ’ಸಂಜೆ ದರ್ಪಣ’ಮಾತನಾಡಿಸಿದಾಗ ಯೋಜನೆ ಹೆಸರಲ್ಲಿ ಅಧಿಕಾರಿಗಳು ಮಾತ್ರ ಯೋಜನೆಯನ್ನೇ ಸ್ವಚ್ಛ ಮಾಡುತ್ತಿದ್ದಾರೆ ಎಂಬ ಗ್ರಾಮಸ್ಥರ ಮಾತು ನೂರಕ್ಕೆ ನೂರರಷ್ಟು ಸತ್ಯ.
ಡಸ್ಟ್ ಬಿನ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ಗ್ರಾ.ಪಂ ಸದಸ್ಯರು ತಮಗೂ ಮೌಖಿಕವಾಗಿ ಹೇಳಿದ್ದಾರೆ.ಇದರಲ್ಲಿ ಪಿಡಿಓ ಹಾಗೂ ಇತರ ಮೇಲಾಧಿಕಾರಿಗಳ ಪಾತ್ರ ನಿಶ್ಚಿತ. ನಿಗದಿತ ರೇಟ್‌ಗಿಂತ ಹೆಚ್ಚು ನೀಡಿ ಖರೀದಿಸಿದ್ದೇ ಆದಲ್ಲಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು.
ಸಿ.ಎಂ.ನಿಂಬಣ್ಣವರ
ಶಾಸಕರು, ಕಲಘಟಗಿ
ಜಿಲ್ಲೆಯ ಸುಮಾರು 131 ಗ್ರಾ.ಪಂ ಗಳಲ್ಲಿ ಡಸ್ಟ್‌ಬಿನ್ ಖರೀದಿಯಾಗಿದ್ದು, ಇನ್ನೂ 13 ಪಂಚಾಯ್ತಿಗಳಲ್ಲಿ ಖರೀದಿಗೆ ಪ್ರಕ್ರಿಯೆ ನಡೆದಿದೆ. ಅನೇಕ ಕಡೆ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬುದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದೆ.ಒಂದು ಲಕ್ಷಕ್ಕಿಂತ ಹೆಚ್ಚಿನ ಖರೀದಿಗೆ ಟೆಂಡರ್ ಕರೆಯಬೇಕು.ಆದರೆ ಕರೆದಿಲ್ಲ. ಕೇವಲ ಕೊಟೆಶನ್ ಪಡೆದು ಖರೀದಿಸಲಾಗಿದೆ. ಅಲ್ಲದೇ ಹಿಂದಿನ ಸಿಇಓ ಅವರು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಖರೀದಿ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಿದ್ದು ಅವರಿಂದ ಇನ್ನೂ ವರದಿ ಬಂದಿಲ್ಲ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶೋಕಾಸ್ ನೋಟಿಸ್ ನೀಡಿ ಚಾರ್ಜಶೀಟ್ ಮಾಡಿ ಮರುಪಾವತಿಸಿಕೊಳ್ಳಲಾಗುವುದು.
ಡಾ.ಸುರೇಶ ಇಟ್ನಾಳ
ಸಿಇಓ ಧಾರವಾಡ ಜಿ.ಪಂ
ಡಸ್ಟ್ ಬಿನ್ ಖರೀದಿ ಬಗ್ಗೆ ತನಿಖೆ ಮಾಡಲು ನನಗೆ ಹಿಂದಿನ ಸಿಇಓ ಆಗಿದ್ದ ಸುಶೀಲಾ ಮೇಡಂ ಅವರು ಸೂಚಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಇನ್ನೂ ವರದಿ ನೀಡಬೇಕಾಗಿದ್ದು ಆದಷ್ಟು ಶೀಘ್ರ ಸಲ್ಲಿಸುವೆ.
ಪುರುಷೋತ್ತಮ, ಜಂಟಿ ನಿರ್ದೇಶಕರು
ಸಮಾಜಕಲ್ಯಾಣ ಇಲಾಖೆ