’ಗುಂಪು’ ಪ್ರಶ್ನಿಸಿದ್ದಕ್ಕೆ ಹಲ್ಲೆ : ಅಪ್ರಾಪ್ತ ಐವರ ಬಂಧನ
ಹುಬ್ಬಳ್ಳಿ: ಸ್ಥಳೀಯ ವಿದ್ಯಾನಗರದ ಪ್ರತಿಷ್ಠಿತ ಕಾಲೇಜು ಆವರಣದಲ್ಲಿ ಗುಂಪು ಕಟ್ಟಿಕೊಂಡು ಯಾಕೆ ಅಡ್ಡಾಡುತ್ತೀರಿ ಎಂದು ಪ್ರಶ್ನಿಸಿದ ಇಬ್ಬರು ವಿದ್ಯಾರ್ಥಿಗಳ ಮೇಲೆ ಗೋಪನಕೊಪ್ಪ ಪ್ರದೇಶದ ಹೈಸ್ಕೂಲ್‌ನಲ್ಲಿ ಓದುತ್ತಿರುವವರ ತಂಡ ಹಲ್ಲೆ ನಡೆಸಿದ ಘಟನೆ ನಿನ್ನೆ ಸಾಯಂಕಾಲ ನಡೆದಿದೆ.
ಘಟನೆ ವೇಳೆ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳಿಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನೆಗೆ ಕಾರಣರಾದ ಐವರು ಅಪ್ರಾಪ್ತರನ್ನು ಬಂಧಿಸಲಾಗಿದೆ ಎಂದು ವಿದ್ಯಾನಗರ ಪಿಐ ಮಹಾಂತೇಶ ಹೋಳಿ ಹೇಳಿದ್ದಾರೆ.
ಹಿನ್ನೆಲೆ : ಬುಧವಾರ ಸಿದ್ಧಾರೂಢಮಠ ಜಾತ್ರೆ ವೇಳೆ ಗೋಪನಕೊಪ್ಪ,ರಾಜನಗರದ ಹೈಸ್ಕೂಲ ವಿದ್ಯಾರ್ಥಿಗಳಿಗೂ ಹಾಗೂ ಇನ್ನೊಂದು ತಂಡದ ಹಳೇಹುಬ್ಬಳ್ಳಿ,ಗೋಕುಲ ರಸ್ತೆಯ ಇಬ್ಬರಿಗೂ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಗೋಪನಕೊಪ್ಪ ಮೂಲದ ಐದಾರು ವಿದ್ಯಾರ್ಥಿಗಳ ತಂಡ ಜಗಳ ತೆಗೆದವರು ಕೆಎಲ್‌ಇ ಪಾಲಿಟೆಕ್ನಿಕ್‌ನವರು ಎಂದು ತಿಳಿದು ಅವರನ್ನು ಹುಡುಕಲು ಹಾಕಿ ಸ್ಟಿಕ್ ಸಹಿತ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯ ಆವರಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಬಿಇ ಮೊದಲನೆ ವರ್ಷದ ಅಸ್ಮಿತ್ ಹಾಗೂ ಡಿಪ್ಲೋಮಾ ವಿದ್ಯಾರ್ಥಿ ಕಾಲೇಶ ಎಂಬುವವರು ಯಾಕೆ ಗುಂಪುಕಟ್ಟಿ ಅಡ್ಡಾಡುತ್ತೀರಿ ಎಂದು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿದ್ದು ಇಬ್ಬರ ತಲೆಗೂ ಏಟು ಬಿದ್ದಿದ್ದು ಗಂಭೀರ ಗಾಯಗಳಾಗಿವೆ.
ಈ ಹಿನ್ನೆಲೆಯಲ್ಲಿ ಕೆಲ ಕಾಲ ಬಿವಿಬಿ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ತಕ್ಷಣ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.