ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ
ಹಂತಕ ಗಿರೀಶ ಸಾವಂತಗಾಗಿ ಜಾಲ
ಹುಬ್ಬಳ್ಳಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಮನಬಂದಂತೆ ಯುವಕನೋರ್ವ ಇರಿದು ಕೊಲೆ ಮಾಡಿದ ಘಟನೆ ಇಲ್ಲಿನ ವೀರಾಪುರ ಓಣಿ ಕರಿಯಮ್ಮನ ಗುಡಿ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ.
ರಾಷ್ಟ್ರದಾದ್ಯಂತ ಸುದ್ದಿ ಮಾಡಿರುವ ನೇಹಾ ಹಿರೇಮಠ ಹತ್ಯೆಯ ನೆನಪು ಮರೆಯುವ ಮುನ್ನವೇ ಅದೇ ಮಾದರಿಯಲ್ಲಿ ವೀರಾಪುರ ಓಣಿಯ ದೇವಿಗುಡಿ ಅಂಜಲಿ ಮೋಹನ ಅಂಬಿಗೇರ (20) ಹತ್ಯೆಯಾಗಿದ್ದು, ಯಲ್ಲಾಪುರ ಓಣಿಯ ಗಿರೀಶ(ವಿಶ್ವ) ಎಸ್. ಸಾವಂv(21) ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಕ್ಯಾಟರಿಂಗ ಕೆಲಸ ಮಾಡುತ್ತಿದ್ದ ಅಂಜಲಿಗೆ ಪ್ರೀತಿ ಮಾಡುವಂತೆ ಕಾಡಿಸುತ್ತಿದ್ದ ಅಲ್ಲದೇ ಈಕೆ ನಿರಾಕರಿಸಿದ್ದಳು ಈತನ ಕಿರುಕುಳಕ್ಕೆ ಯುವತಿ ಬೇಸತ್ತು ಘಂಟಿಕೇರಿಯ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಅಂಜಲಿಯು ಪ್ರೀತಿ ನಿರಾಕರಿಸಿದ್ದಕ್ಕೆ ಗಿರೀಶ ಆಕೆಯ ಇರುವ ಜಾಗ ಪತ್ತೆ ಹಚ್ಚಿ ಇಂದು ಬೆಳಗಿನ ಜಾವ ೫-೧೦ರ ಸುಮಾರಿಗೆ ಬಂದು ಮನೆಯ ಬಾಗಿಲು ಬಡಿದಿದ್ದಾನೆ. ಆಗ ಅಂಜಲಿಯೇ ಬಾಗಿಲು ತೆರೆದಾಗ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಕೃತ್ಯ ಎಸಗಿದ ಗಿರೀಶ ಅಲ್ಲಿಂದ ಪರಾರಿಯಾಗಿದ್ದು, ಆತನ ತಾಯಿ ಮನೆ ಮನೆಯ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದಾಳೆನ್ನಲಾಗಿದೆ.
ಅಂಜಲಿಯ ಸಹೋದರಿ ಯಶೋದಾ ದೂರು ನೀಡಿದ್ದಾಳೆ. ಬೆಂಡಿಗೇರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದು ಹಂತಕನಿಗಾಗಿ ವ್ಯಾಪಕ ಜಾಲ ಬೀಸಿದ್ದಾರೆ.
ನೇಹಾ ಹಿರೇಮಠಳನ್ನೂ ಸಹ ಫಯಾಜ್ ೧೫ಕ್ಕೂ ಹೆಚ್ಚು ಬಾರಿ ಇರಿದು ಕಳೆದ ತಿಂಗಳು ಬಿವಿಬಿ ಕಾಲೇಜ್ ಆವರಣದಲ್ಲೇ ಹತ್ಯೆ ಮಾಡಿದ್ದ. ಇದು ಮನೆಯ ಮುಂಬಾಗದಲ್ಲೇ ನಡೆದಿದೆ.