ಹುಬ್ಬಳ್ಳಿ-ಧಾರವಾಡ ಸುದ್ದಿ
ಪೊಲೀಸರ ದೌರ್ಜನ್ಯ: ಅಮೃತ ದೇಸಾಯಿ ಖಂಡನೆ

ಪೊಲೀಸರ ದೌರ್ಜನ್ಯ: ಅಮೃತ ದೇಸಾಯಿ ಖಂಡನೆ

ಎಸ್‌ಪಿಯವರಿಗೆ ದೂರು ನೀಡಿ ಮನವರಿಕೆ ಮಾಡಲು ತೆರಳಿದ ದಣಿ

ಧಾರವಾಡ: ತಾಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನನ್ನು ಮಾರಣಾಂತಿಕವಾಗಿ ಥಳಿಸಲಾಗಿದ್ದು, ಇದು ಪೊಲೀಸರ ಅಮಾನವೀಯ ವರ್ತನೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ತೀವ್ರವಾಗಿ ಖಂಡಿಸಿದ್ದಾರೆ.

ಪೊಲೀಸರಿಂದ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಕಾರ್ತಿಕ ಈಟಿ ಎಂಬ ಯುವಕನ ಆರೋಗ್ಯ ವಿಚಾರಿಸಿ ನಂತರ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಏನಿದು ಘಟನೆ: ಗರಗ ಗ್ರಾಮದ ಕಾರ್ತಿಕ ಈಟಿ ಎಂಬ ಯುವಕ ಆನಂದಗೌಡ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದನು. ೬ ತಿಂಗಳ ಹಿಂದೆ ಏಜೆನ್ಸಿಯಲ್ಲಿ ಕಳ್ಳತನದ ಪ್ರಕರಣ ನಡೆದಿತ್ತು. ಈಗ ಅದೇ ಪ್ರಕರಣದ ನೆಪ ಇಟ್ಟುಕೊಂಡು ಕಾರ್ತಿಕನೇ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ೩ ದಿನಗಳಿಂದ ಅವನನ್ನು ಪೊಲೀಸರು ವಶಪಡಿಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅಮೃತ ದೇಸಾಯಿ, ಗರಗ ಪೊಲೀಸರು ಹೀಗೆ ದುರುದ್ದೇಶದಿಂದ ನಮ್ಮ ಯುವಕರನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಥಳಿಸುತ್ತಿದ್ದಾರೆ. ತೀವ್ರ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಕಾರ್ತಿಕ ಈಟಿ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಾದ ಆನಂದಗೌಡ ಪಾಟೀಲರೇ ಸ್ವತಃ ಕಾರ್ತಿಕ ಒಳ್ಳೆಯ ಹುಡುಗನಾಗಿದ್ದಾನೆ. ಅವನಿಂದ ಕಳ್ಳತನ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆದರೂ ಪೊಲೀಸರು ಮನಬಂದಂತೆ ಥಳಿಸಿರುವುದನ್ನು ನೋಡಿದರೆ ಇದರ ಹಿಂದೆ ಏನೋ ದುರುದ್ದೇಶ ಅಡಗಿದೆ. ಇದು ಹೀಗೇ ಮುಂದುವರಿದರೆ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ಎಸ್‌ಪಿಯವರಿಗೆ ದೂರು ನೀಡಿ ಮನವರಿಕೆ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಆನಂದಗೌಡ ಪಾಟೀಲ, ಮಹೇಶ ಯಲಿಗಾರ, ವಿಜಯ ಮಗೆಣ್ಣವರ, ವಿಠ್ಠಲ ಪೂಜಾರ, ಬಸವರಾಜ ಬುಡರಕಟ್ಟಿ, ಪ್ರಕಾಶ ಪಾಟೀಲ ಇದ್ದರು.

 

administrator

Related Articles

Leave a Reply

Your email address will not be published. Required fields are marked *