ಹುಬ್ಬಳ್ಳಿ-ಧಾರವಾಡ ಸುದ್ದಿ

ಪಿಸ್ತೂಲ್ ತೋರಿಸಿ ಅಂತರ ರಾಜ್ಯ ನಟೋರಿಯಸ್ ಆರೋಪಿ ಬಂಧಿಸಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು!

ವಿಜಯಪುರದಲ್ಲಿ ಖಾಕಿಗಳ ಮೇಲೆ ಹಲ್ಲೆಗೆ ಯತ್ನ

10ಲಕ್ಷ ರೂ ತಾಮ್ರದ ವೈರ್ ಕಳ್ಳತನ ಪ್ರಕರಣ

ಹುಬ್ಬಳ್ಳಿ : ವಿಜಯಪುರ ನಗರದಲ್ಲಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಕಳ್ಳತನದ ಆರೋಪಿಯನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಪಿಸ್ತೂಲ್ ತೋರಿಸಿ ಬಂಧಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಮೂರು ತಿಂಗಳ ಹಿಂದೆ ನಡೆದ ಕಾರ್ಖಾನೆಯೊಂದರ ಸುಮಾರು 10ಲಕ್ಷ ರೂ ತಾಮ್ರದ ವೈರ್ ಕಳ್ಳತನ ಆರೋಪದಲ್ಲಿ ಅವಿನಾಶ ಮಚ್ಚಾಳೆ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದ.


ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಅವಿನಾಶ ಗುಮ್ಮಟ ನಗರದಲ್ಲಿ ತಲೆ ಮರೆಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮಫ್ತಿಯಲ್ಲಿ ವಿಜಯಪುರ ನಗರಕ್ಕೆ ಆಗಮಿಸಿದ್ದರು. ಮಫ್ತಿಯಲ್ಲಿದ್ದ ಹುಬ್ಬಳ್ಳಿ ಪೊಲೀಸರು ಅವಿನಾಶ ಬಂಧನಕ್ಕೆ ಮುಂದಾಗುತ್ತಲೇ ಆತನ ಕುಟುಂಬದ ಸದಸ್ಯರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ನಗರದ ಜಿಲ್ಲಾಧಿಕಾರಿ ನಿವಾಸದ ಎದುರು ನಿನ್ನೆ ಮಧ್ಯಾಹ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಆರೋಪಿಯನ್ನು ಸುತ್ತುವರೆದ ಹುಬ್ಬಳ್ಳಿ ಪೊಲೀಸರ ವಾಹನಕ್ಕೆ ಹತ್ತಿಸುವಾಗ ಕುಟುಂಬದ ಸದಸ್ಯರು ಪೊಲೀಸರ ಮೇಲೆ ಹಲ್ಲೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಈ ಹಂತದಲ್ಲಿ ಮುನ್ನೆಚ್ಚರಿಕೆಯಾಗಿ ಆತ್ಮರಕ್ಷಣೆಗಾಗಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಎಎಸೈ ಹೊನ್ನಪ್ಪನವರ ಪಿಸ್ತೂಲ್ ಹೊರ ತೆಗೆಯುತ್ತಲೇ ಆರೋಪಿ ವಾಹನ ಏರಿದ್ದಾನೆ. ಆಕ್ಷೇಪಕ್ಕೆ ಮುಂದಾದವರು ಹಿಂದೆ ಸರಿದಿದ್ದಾರೆ. ಕೂಡಲೇ ಸೆರೆ ಸಿಕ್ಕ ಆರೋಪಿ ಅವಿನಾಶನನ್ನು ವಾಹನದಲ್ಲಿ ಕರೆದೊಯ್ದು ಹುಬ್ಬಳ್ಳಿ ಪೊಲೀಸರು ನಗರದ ಗೋಲಗುಂಬಜ್ ಠಾಣೆಗೆ ತೆರಳಿ ತಮ್ಮ ವಿಳಾಸ, ಗುರುತು ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ತೋರಿಸಿದ್ದಾರೆ. ಬಳಿಕ ಆರೋಪಿ ಅವಿನಾಶನನ್ನು ಹುಬ್ಬಳ್ಳಿಗೆ ಕರೆತಂದಿದ್ದು ಇಂದು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ ಎಂದು ಗ್ರಾಮೀಣ ಇನ್ಸಪೆಕ್ಟರ್ ಮುರಗೇಶ ಚಿನ್ನಣ್ಣವರ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *