ಮನೆಗೆ ನುಗ್ಗಿ ಜೀವ ಬೆದರಿಕೆ
ಹುಬ್ಬಳ್ಳಿ : ನಗರದಲ್ಲಿ ಮತ್ತೆ ಮೀಟರ್‌ಬಡ್ಡಿ ಕುಳಗಳು ಬಾಲ ಬಿಚ್ಚಲಾರಂಭಿಸಿದ್ದು ನಾಲ್ವರ ತಂಡ ಕೇಶ್ವಾಪುರ ವ್ಯಾಪ್ತಿಯ ಮಹಿಳೆಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿ ಎಳೆದಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ ಘಟನೆ ಕಳೆದ ದಿ. 29ರಂದು ಮಧ್ಯಾಹ್ನ ನಡೆದಿದೆ.
ಶ್ರೀಮತಿ ರೇಣು ಕಿರಣ ಮಾಗಡಿ(48) ಎಂಬ ಮಹಿಳೆಯ ಮೇಲೆಯೇ ಏಕಾಏಕಿ ಒಳನುಗ್ಗಿ ಮನೆಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಾಡಿ ಎಳೆದಾಡಿದ್ದು ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕುಖ್ಯಾತ ಬಡ್ಡಿಕುಳ ವಿದ್ಯಾನಗರ ನಿವಾಸಿ ರಾಜೇಶ ಮೆಹರವಾಡೆ, ಮೋಹಿತ ಮೆಹರವಾಡೆ,ಅನಿಲ ಮೆಹರವಾಡೆ, ನಾರಾಯಣ ಮೆಹರವಾಡೆ ಎಂಬುವವರೇ ಹಲ್ಲೆ ನಡೆಸಿದವರಾಗಿದ್ದಾರೆ.
ಹಿನ್ನೆಲೆ : ರೇಣು ಮಾಗಡಿ(48) ತಮ್ಮ ಮಕ್ಕಳೊಂದಿಗೆ ಮನೋಜ ಪಾರ್ಕನಲ್ಲಿನ ಮನೆಯಲ್ಲಿ (ನಂ.116) ವಾಸಿಸುತ್ತಿದ್ದು ಇವರ ಪತಿ ಕಿರಣ ಮಾಗಡಿ ಒಂದು ವರ್ಷದ ಹಿಂದೆ ಮೃತರಾಗಿದ್ದಾರೆ.
ಮನೋಜ್ ಪಾರ್ಕ್‌ದಲ್ಲಿರುವ ಈ ಮನೆಯನ್ನು ರೇಣು ಅವರ ಪತಿ ಜೀವಂತ ಇದ್ದಾಗ ರಾಜೇಶ ಮೆಹರವಾಡೆ ಅನ್ನುವವರಿಗೆ ಸೇಲ್ ಡೀಡ್ ಮಾಡಿಕೊಟ್ಟು ಹಣ ಪಡೆದಿದ್ದು ಈ ವಿಷಯ ಗಂಡ ತೀರಿಕೊಂಡ ನಂತರ ಅರಿವಿಗೆ ಬಂದಿದೆ. ಪದೇ ಪದೇ ರಾಜೇಶ ಮನೆಗೆ ಬಂದು ಮನೆಯನನು ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದರು.
ದಿ.29ರಂದು ಮಧ್ಯಾಹ್ನ 1.45 ಗಂಟೆ ಸುಮಾರಿಗೆ ರೇಣು ಮಾಗಡಿ, ಮಗ ಗಗನ ಹಾಗೂ ಮನೆಕೆಲಸ ಸುಶೀಲಾ ಮಲ್ಲನಗೌಡರ ಇರುವ ವೇಳೆಯಲ್ಲಿ ರಾಜೇಶ,ಮೋಹಿತ,ಅನೀಲ ಹಾಗೂ ನಾರಾಯಣ ಮೆಹರವಾಡೆ ಇವರುಗಳು ಒಳ ನುಗ್ಗಿ ಮನೆ ಖಾಲಿ ಮಾಡಿ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರಲ ನಾವು ಏಕೆ ಹೊರಗೆ ಹೋಗಬೇಕು ಅಂತ ಪ್ರಶ್ನಿಸಿದಾಗ ನಮ್ಮ ಹಣ ಕೊಡಿರಿ ಇಲ್ಲವೇ ಮನೆಯಿಂದ ಹೊರಗೆ ಹೋಗಿರಿ ಎಂದು ಹೇಳಿ ಹಾಲ್‌ದಲ್ಲಿದ್ದ ಟಿವಿ, ಟಿಪಾಯಿ, ಸೋಫಾ ಹಾಗೂ ಹಾಲ್‌ದಲ್ಲಿದ್ದ ಎಲ್ಲ ಸಾಮಾನುಗಳನ್ನು ಹೊರಗೆ ಒಗೆದಿದ್ದಾರಲ್ಲದೇ . ನಾನು ತಡೆದಿದ್ದರಿಂದ ರಾಜೇಶ ಮೆಹರವಾಡೆ ತಮ್ಮ ಕುತ್ತಿಗೆ ಹಿಡಿದುಕೊಂಡು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ನನಗೆ ಎಲ್ಲರೆದುರೇ ಎಳೆದಾಡಿ ಹೊಡೆದಿದ್ದ ಧರಿಸಿದ್ದ ಟಾಪ ಹರಿದು ಮಾನಭಂಗಕ್ಕೆ ಯತ್ನಿಸಿದ್ದು, ತಡೆಯಲು ಬಂದ ಕೆಲಸದಾಕೆಯನ್ನು ತಳ್ಳಿದ್ದಾರೆ.ಆಗ ಮಗನಿಗೆ ಪೊಲೀಸರಿಗೆ ಪೋನ್ ಮಾಡಲು ತಿಳಿಸಿದಾಗ ಮನೆ ಖಾಲಿ ಮಾಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಕೇಶ್ವಾಪುರ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ಸಿಬ್ಬಂದಿ ಮಹಿಳೆ ಮೇಲೆ ಹಾಡು ಹಗಲೇ ಹಲ್ಲೆ ಮಾಡಿದ ಮೆಹರವಾಡೆ ಸೋದರರಿಗಾಗಿ ಹುಡುಕಾಟ ನಡೆಸಿದ್ದು ತಲೆ ಮರೆಸಿಕೊಂಡಿದ್ದಾರೆನ್ನಲಾಗಿದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಡ್ಡಿಕುಳಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು ಕೆಲ ದಿನಗಳ ಹಿಂದೆ ಕೇಶ್ವಾಪುರದ ಸುನೀಲ ಧೋಂಗಡಿ ಎಂಬಾತ ಹಣಕಾಸಿನ ಕಿರುಕುಳದಿಂದಲೇ ಕಳೆದ ತಿಂಗಳು 18ರಂದು ರಾತ್ರಿ ಉಣಕಲ್ ಕೆರೆಗೆ ಹಾರಿಕೊಂಡಿದ್ದ. ಸಿಲ್ವರ್ ಪಾರ್ಕ ನಿವಾಸಿ ಬಸವಾ ಎಂಬಾತನೇ ವ್ಯಾಪಕ ಕಿರುಕುಳ ನೀಡಿದ್ದ ಎನ್ನಲಾಗುತ್ತಿದ್ದು ವಿದ್ಯಾನಗರ ಪೊಲೀಸರು ಹೇಳಿಕೆಯನ್ನು ಪಡೆದಿದ್ದಾರೆನ್ನಲಾಗಿದೆ.
ಖಡಕ್ ಪೊಲೀಸ ಆಯುಕ್ತ ಲಾಭೂರಾಮ್ ಹೇಳದೇ ಮಾಡುವ ಜಾಯಮಾನದವರಾಗಿದ್ದು ಅವಳಿನಗರ ವ್ಯಾಪ್ತಿಯ ಎಲ್ಲ ಬಡ್ಡಿಕುಳಗಳ ಜಾತಕ ಜಾಲಾಡಿ ಶಾಶ್ವತ ಕ್ರಮಕ್ಕೆ ಮುಂದಾದರೆ ಮಹಾನಗರ ಜನತೆ ಚಿರಋಣಿಗಳಾಗುವುದು ನಿಶ್ಚಿತ.