ಧಾರವಾಡ: ಬೆಳಗಾದರೆ ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಲಿದ್ದು, ಕತ್ತಲ ರಾತ್ರಿ ದಿನ (ಸೋಮವಾರ) ಧಾರವಾಡ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೆಬ್ಬಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಈರಣ್ಣಾ ರತ್ನಪ್ಪ ಶಿವಳ್ಳಿ ಹಾಗೂ ಶಿವಳ್ಳಿ ಗ್ರಾಮದ ಫೈರೋಜ್ ನಾಯ್ಕರ್ ಎಂಬುವರ ಮನೆ ಮೇಲೆ ಅಧಿಕಾರಿಗಳ ಎರಡು ತಂಡ ಏಕಕಾಲಕ್ಕೆ ದಾಳಿ ಮಾಡಿದೆ. ಎಷ್ಟು ಹಣ ವಶಪಡಿಸಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಸುಮಾರು 20 ಅಧಿಕಾರಿಗಳನ್ನು ಒಳಗೊಂಡ ತಂಡವು ದಾಳಿ ನಡೆಸಿ, ತಮಗೆ ದೊರೆತ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಫೈರೋಜ್ ನಾಯ್ಕರ್ ಪೆಟ್ರೋಲ್ ಬಂಕ್ ಹೊಂದಿದ್ದು, ಈತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಗೊತ್ತಾಗಿದೆ.
ಪಕ್ಕದ ಹೆಬ್ಬಳ್ಳಿ ಗ್ರಾಮದ ಈರಣ್ಣಾ ಶಿವಳ್ಳಿ ಕೂಡ ಕಾಂಗ್ರೆಸ್ ಪಕ್ಷದ ಅಭಿಮಾನಿ ಎನ್ನಲಾಗುತ್ತಿದೆ.
ಮಂಗಳವಾರ ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಹಣ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಆಧರಿಸಿ ಐಟಿ ತಂಡ ದಾಳಿ ನಡೆಸಿದೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ತಾಲೂಕಿನ ಕೆಲವು ಕಾಂಗ್ರೆಸ್ ಮುಖಂಡರ ಮನೆ, ಅಂಗಡಿ ಮತ್ತು ಕಚೇರಿಗಳನ್ನು ಅಧಿಕಾರಿಗಳು ಜಾಲಾಡಿದ್ದರು.
ಇದೀಗ ಮತ್ತೆ ನಡೆದಿರುವ ಐಟಿ ದಾಳಿಯಿಂದ ಕಾಂಗ್ರೆಸ್ ನಾಯಕರು ಆತಂಕಕ್ಕೊಳಗಾಗಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಹಣ ಹಂಚುವದಕ್ಕಾಗಿ ಇಬ್ಬರ ಮನೆಯಲ್ಲಿ ಹಣ ಶೇಖರಿಸಿಡಲಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಇದು ಜಿಲ್ಲೆಯಲ್ಲಿ ರಾತ್ರಿ ಹೊತ್ತಲ್ಲೂ ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿದ್ದು, ಕುತೂಹಲ ಮೂಡಿಸಿದೆ.