ನಲವಡಿ ಮಹಿಳೆಯಿಂದ ಆರು ಜನರ ವಿರುದ್ದ ದೂರು
ಹುಬ್ಬಳ್ಳಿ : ಮಾನಸಿಕ ಅಸ್ವಸ್ಥನಾದ ವ್ಯಕ್ತಿಯೋರ್ವನನ್ನು ಉಪ ನೊಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಹೋಗಿ ಶಿರಗುಪ್ಪಿ ಹೋಬಳಿಯ ಸುಮಾರು 24 ಎಕರೆ ಜಮೀನಿನ ಖರೀದಿ ಸಂಚಗಾರ ಮಾಡಿಸಿದ್ದಲ್ಲದೇ ಆತನ ಬ್ಯಾಂಕ ಖಾತೆಯ ಹಣವನ್ನೂ ಲಪಟಾಯಿಸಿ ಮೋಸ ಮಾಡಿದ ಬಗೆಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆಯೊಬ್ಬಳು ದೂರು ದಾಖಲಿಸಿದ್ದಾಳೆ.
ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದ ಬಡಿಗೇರ ಓಣಿಯ ನಿವಾಸಿ ಶೇಖವ್ವ ಮಾನಪ್ಪ ಬಡಿಗೇರ ಎಂಬಾಕೆಯೆ ಕಳೆದ ತಿಂಗಳು ದಿ. 17 ರಂದು ದೂರು(101/2023) ದಾಖಲಿಸಿದ್ದು ಹುಬ್ಬಳ್ಳಿಯ ಗೀತಾ ಯಕಲಾಸಪುರ, ನಲವಡಿಯ ಪಾಂಡಪ್ಪ ಸುರೇಶ ಮುದರಡ್ಡಿ, ಸಹಿತ ಹುಬ್ಬಳ್ಳಿ ಮೂಲದ ನಾಲ್ವರು ಮೋಸ ಮಾಡಿದ್ದಾರೆಂದು ಹೇಳಿದ್ದಾರೆ.
ತಮ್ಮ ಪತಿ ಮಾನಪ್ಪ ಭೀಮರಾಯಪ್ಪ ಬಡಿಗೇರ ಹುಟ್ಟಿನಿಂದಲೂ ಮಾನಸಿಕ ಅಸ್ವಸ್ಥನೆಂಬುದನ್ನು ದೃಢೀಕರಿಸುವ ದಾಖಲೆಯನ್ನೂ ಸಹ ದೂರಿನೊಂದಿಗೆ ಲಗತ್ತಿಸಿದ್ದಾರಲ್ಲದೇ ತಮಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದ ಸುಮಾರು 40 ಎಕರೆ ಜಮೀನು ಇದ್ದು,ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಹೋಬಳಿಯ ಉಮಚಗಿ ಗ್ರಾಮದ ಸರ್ವೇ ನಂ 184(ಅ) ನೇದ್ದರಲ್ಲಿ 4 ಎಕರೆ 13 ಗುಂಟೆ, 184 (ಬ) ದ್ದರಲ್ಲಿ 10 ಎಕರೆ 19 ಗುಂಟೆ,ಮತ್ತು ಸರ್ವೆ ನಂ 105 ನೇದ್ದರಲ್ಲಿ 9 ಎಕರೆ 16 ಗುಂಟೆ ಜಮೀನು ಇದೆ ಎಂಬುದನ್ನು ಹೇಳಿದ್ದಾರೆ.
ತಮಗೆ ಪರಿಚಿತರಾದ ಗೀತಾ ಯಕಲಾಸಪುರ ಹಾಗೂ ಇನ್ನೊಬ್ಬರು ಪಾಂಡಪ್ಪ ಮುದರೆಡ್ಡಿ ಇವರುಗಳು ಮಠಪತಿ, ಜೈನ ಇವರುಗಳಿಗೆ ಜಮೀನು ನೋಂದ ಮಾಡಿ ಬಂದ ಹಣವನ್ನು ನಲವಡಿ ಕೆವಿಜಿಬಿನಲ್ಲಿದ್ದುದನನ್ನು ಆರ್ಟಿಜಿಎಸ್ ಮೂಲಕ ತೆಗೆದು ಉಳಿದ ಹಣವನ್ನೂ ಪಡೆದಿದ್ದಾರೆ.ಅಲ್ಲದೇ ಮಠಪತಿ ಅವರಿಗೆ ಮಾರಾಟ ಮಾಡಿದ ಜಮೀನನ್ನು 26-12-2022 ರಂದು ಮಹ್ಮದಯೂಸೂಪ್ ಮತ್ತು ರಾಜೇಸಾಬರಿಗೆ ಮಾರಿದ್ದಾರೆ. ಇವರೆಲ್ಲರು ಮೋಸ ಮಾಡುವ ಉದ್ದೇಶದಿಂದ ಖರೀದಿ ಮತ್ತು ಸಂಚಗಾರ ಪತ್ರ ಮಾಡಿದ್ದು 10-01-2020 ರಿಂದ 26-12-2022 ರವರೆಗೆ ಈ ಎಲ್ಲ ಘಟನೆಗಳು ಹುಬ್ಬಳ್ಳಿ ಉತ್ತರ ವಿಭಾಗದ ಉಪ ನೋಂದಣಿ ಕಚೇರಿಯಲ್ಲಿ ಆಗಿವೆ ಎಂದು ದೂರಿನಲ್ಲಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.