ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡದಲ್ಲಿ ’ಮದ್ಯ’ರಾತ್ರಿ ಫೈರಿಂಗ್ : ನಾಲ್ವರು ವಶಕ್ಕೆ

ಧಾರವಾಡದಲ್ಲಿ ’ಮದ್ಯ’ರಾತ್ರಿ ಫೈರಿಂಗ್ : ನಾಲ್ವರು ವಶಕ್ಕೆ

ಅನವಶ್ಯಕ ಆಯುಧ : ಲೈಸೆನ್ಸ್ ನವೀಕರಣ ವೇಳೆ ಪರಿಶೀಲನೆ

ಧಾರವಾಡ: ತಡರಾತ್ರಿ ಮನೆಗೆ ಹೋಗುತ್ತಿದ್ದ ಸ್ಕೂಟಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದು ಗುಂಡು ಹಾರಿಸಿದ ಪ್ರಕರಣವೊಂದು ಧಾರವಾಡದ ಆರ್.ಎನ್.ಶೆಟ್ಟಿ ಮೈದಾನದ ಬಳಿ ನಿನ್ನೆ ಮಧ್ಯರಾತ್ರಿ 12.30 ರಿಂದ 1 ಗಂಟೆಗೆ ಸಂಭವಿಸಿದೆ,


ಘಟನೆಗೆ ಸಂಬಂಧಿಸಿದಂತೆ ದೂರು ಪ್ರತಿದೂರು ದಾಖಲಾಗಿದ್ದು ಈ ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಪೋಲೀಸ ಆಯುಕ್ತ ಶಶಿಕುಮಾರ ಎನ್ ಇಂದು ತಿಳಿಸಿದರು.
ಸಂಗಮ ಸರ್ಕಲ್‌ನಲ್ಲಿ ಪೈನಾನ್ಸ್ ನಡೆಸುತ್ತಿರುವ ಅಭಿಷೇಕ ಬಡ್ಡಿಮನಿ ಎಂಬ ಯುವಕ ಬೈಕ್‌ನಲ್ಲಿ ತನ್ನ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಪ್ರಜ್ವಲ ಕಲ್ಮೇಶ ಹಾವೇರಿಪೇಟ್, ಗಣೇಶ ಅರ್ಜುನ ಖೋಡೆ, ದಾನೇಶ ಮಹಾದೇವಪ್ಪ ಕಠಾರಿ ಎಂಬುವವರು ಇದ್ದ ಕಾರು ಆರ್ ಎನ್ ಶಟ್ಟಿ ಕ್ರೀಡಾಂಗಣ ಹತ್ತಿರ ಡಿಕ್ಕಿ ಹೊಡೆದ ಪರಿಣಾಮ ಗಲಾಟೆ ಆಗಿದೆ.


ಪ್ರಜ್ವಲ, ಗಣೇಶ ಮತ್ತು ದಿನೇಶ ಎಂಬುವವರು ಕಾರಿನಲ್ಲಿ ಬಂದು ಅಭಿಷೇಕನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಲ್ಲೆ ಮಾಡಲು ಯತ್ನಿಸಿದರು. ಅದಕ್ಕಾಗಿ ಜೀವ ರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಅಭಿಷೇಕ ದೂರಿನಲ್ಲಿ ತಿಳಿಸಿದರೆ, ಪ್ರಜ್ವಲ ಮತ್ತು ಸ್ನೇಹಿತರು ತಾವು ಕಾರಿನಲ್ಲಿ ಬರುವಾಗ ಏಕಾಏಕಿ ಡಿಕ್ಕಿ ಹೊಡೆದು ಅಭಿಷೇಕ ಹಲ್ಲೆ ಮಾಡಲು ಬಂದನು. ಅಲ್ಲದೇ ಗುಂಡು ಹಾರಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.


ಆತನ ದೂರಿನ ಮೇರೆಗೆ ಎದುರುಗಾರರಾದ ಪ್ರಜ್ವಲ, ಗಣೇಶ ಮತ್ತು ದಾನೇಶ ಇವರನ್ನು ವಶಕ್ಕೆ ಪಡೆಯಲಾಗಿದೆ. ಎಸಿಪಿ ಪ್ರಶಾಂತ ಸಿದ್ದನಗೌಡ್ರ, ಸಿಪಿಐಗಳಾದ ಎನ್.ಎಸ್.ಕಾಡದೇವರ, ಸಂಗಮೇಶ ದಿಡಿಗಿನಾಳ, ಶಿವರಾಜ ಕಡಕಬಾವಿ ಇತರರಿದ್ದರು. ಅಭಿಷೇಕ ಬಡ್ಡಿಮನಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್‌ಗೆ ದಾಖಲಿಸಲಾಗಿದೆ

 

ಅನವಶ್ಯಕ ಆಯುಧ : ಲೈಸೆನ್ಸ್ ನವೀಕರಣ ವೇಳೆ ಪರಿಶೀಲನೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕೆಲವರು ಅನವಶ್ಯಕ ಆಯುಧ ಹೊಂದಿರುವುದನ್ನು ಪರವಾನಗಿ ನವೀಕರಣ ಸಂದರ್ಭದಲ್ಲಿ ಪುನರ್ ಪರಿಶೀಲಿಸು ವುದಾಗಿ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು.


ಕೆಲವು ಹದಿವಯದ ಯುವಕರು ಅನವಶ್ಯಕವಾಗಿ ಆಯುಧಗಳನ್ನು ಹೊಂದುತ್ತಿರು ವುದು ಗಮನಕ್ಕೆ ಬಂದಿದೆ. ಆತ್ಮ ಸಂರಕ್ಷಣೆ, ಆಸ್ತಿ ರಕ್ಷಣೆ ಉದ್ದೇಶದಿಂದ ಪರವಾನಗಿ ಸಹಿತ ಆಯುಧಗಳನ್ನು ಪಡೆಯುವುದು ಸ್ವಾಭಾವಿಕ. ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಗಂಭೀರ ಉದ್ದೇಶ ಇಲ್ಲದ ಯುವಕರು ಪರವಾನಗಿ ಪಡೆಯುತ್ತಿದ್ದಾರೆ. ಇದರಿಂದ ಆಯುಧಗಳ ದುರುಪಯೋಗ ಆಗುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಆಯುಧಗಳನ್ನು ಹೊಂದುವ ಉದ್ದೇಶವನ್ನು ಪರವಾನಗಿ ನವೀಕರಣ ಸಂದರ್ಭದಲ್ಲಿ ಪುನರ್ ಪರಿಶೀಲಿಸುವುದಾಗಿ ಆಯುಕ್ತರು ತಿಳಿಸಿದರು.

administrator

Related Articles

Leave a Reply

Your email address will not be published. Required fields are marked *