2 ತಲವಾರ, ಒಂದು ಡ್ರಾಗ್ಯಾನ್ ಜಪ್ತಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಇಂದು ಗಾಂಜಾ ಮಾರಾಟದಲ್ಲಿ ತೊಡಗಿದ್ದ 16 ಜನರನ್ನು ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿ ಬಂಧಿಸಿ ಅವರಿಂದ ಸುಮಾರು 4ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ನಗರದ ಬೆಂಡಿಗೇರಿ ಠಾಣಾ ವ್ಯಾಪ್ತಿಯ ಕೆಇಬಿ ಗ್ರೀಡ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಓಡಿಸ್ಸಾದ ಕೇಶಬಚಂದ್ರ, ನೀಲಾಂಬರ ರಾವುತ್, ಉತ್ತರಖಂಡದ ಮಹಮ್ಮದಲಿ, ಹಾವೇರಿಯ ತೌಸಿಫ್ ಅಹಮ್ಮದ, ಹಳೇಹುಬ್ಬಳ್ಳಿಯ ಪವನ, ಸಿದ್ಧಾರ್ಥ, ಮಂಜುನಾಥ, ನದೀಂ, ವಿಠ್ಠಲ, ಶಾನವಾಜ, ಕಮರಿಪೇಟೆಯ ಗಣಪತಸಾ, ಚನ್ನಪೇಟೆಯ ಕಾರ್ತಿಕ ಎಂಬುವರು ಬಂಧಿಸಿ ಅವರಿಂದ 2.5 ಕೆ.ಜಿ. ಗಾಂಜಾ, ಒಂದು ಸ್ವೀಪ್ಟ್ ಡಿಸೈರ್ ಕಾರು, 2 ತಲವಾರ, ಒಂದು ಡ್ರಾಗರ್ ಹಾಗೂ 10 ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಎಸ್.ಟಿ.ವಡೇಯರ್ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ರಾದ ಮಾರುತಿ ಗುಳ್ಳಾರಿ, ಪ್ರಭು ಗಂಗೇನಹಳ್ಳಿ, ಬೆಂಡಿಗೇರಿ ಠಾಣೆಯ ಪಿಐ ಅಲಿಶೇಖ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ದಾಳಿ ವೇಳೆ ಬಂಧಿತರ ಪೈಕಿ ಓಡಿಸ್ಸಾ ಮೂಲದ ಕೇಶವಚಂದ್ರ, ನೀಲಾಂಬರ ಹಾಗೂ ಹಾವೇರಿಯ ತೌಸಿಫ್ ಅಹ್ಮದ ಪಂಚನಾಮೆಗೆ ತೆರಳುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ಓಡಿ ಹೋಗಲು ಯತ್ನಿಸಿದ್ದು, ಬಳಿಕ ಎಲ್ಲ ಸಿಬ್ಬಂದಿ ಸೇರಿ ಪುನಃ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಪಾಟೀಲ್ ಮತ್ತು ಹೆದ್ದೇರಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಧಾರವಾಡ ವರದಿ: ಧಾರವಾಡದ ಕೋಳಿಕೇರಿ ನುಚ್ಚಂಬ್ಲಿ ಬಾವಿ ಹತ್ತಿರದ ಸಾರ್ವಜನಿಕ ರಸ್ತೆಯ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರನ್ನು ಧಾರವಾಡ ಶಹರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು. ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ ಇನ್ಸ್ಪೆಕ್ಟರ್ ಎನ್.ಸಿ. ಕಾಡದೇವರ ಅವರು ಸೊಲ್ಲಾಪುರದ ಸೈಫಲ್ಲಿ ಸುತಾರ್, ಸಂಕೇತ ಕೋತ್, ಧಾರವಾಡದ ಸಂದೀಪ ಸಳಕೆ, ಹಜರತಲಿ ಅಲಿಯಾಸ್ ಪಾಡಾ ಮಕಾನದಾರ ಎಂಬುವರನ್ನು ಬಂಧಿಸಿ, ಅವರಿಂದ 1942 ಗ್ರಾಂ. ಗಾಂಜಾ, ಎರಡು ಸ್ಮಾರ್ಟ್ ಮೊಬೈಲ್ ಪೋನ್ ಹಾಗೂ ಕಪ್ಪು ಬಣ್ಣದ ಕಾಲೇಜ್ ಬ್ಯಾಗ್ನ್ನು ವಶಪಡಿಸಿಕೊಂಡಿದ್ದಾರೆ.
ಶಹರ ಠಾಣೆಯ ಪಿಎಸ್ಐ ಆರ್.ಎಚ್. ನದಾಫ, ಡಿ.ವಿ. ಘಾಳರೆಡ್ಡಿ, ಎಂ.ಬಿ. ಗದ್ದಿಕೇರಿ, ಐ.ಪಿ. ಬುರ್ಜಿ, ಪಿ.ಎಸ್.ತಿರ್ಲಾಪುರ, ಜಿ.ಬಿ. ಭರಮಗೌಡರ, ಬಿ.ಎಂ. ಮೇಗುಂಡಿ, ಎಸ್.ಎನ್. ಬಿರಾದಾರ, ಸಿ.ಎ. ಅವರಾದಿ ಕಾರ್ಯಾಚರಣೆಯಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಸೇರಿದಂತೆ ಇತರ ಅಧಿಕಾರಿಗಳು ಇದ್ದರು.