ಹುಬ್ಬಳ್ಳಿ : ತಾಲೂಕಿನ ಕೋಳಿವಾಡ ಗ್ರಾಮದ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದ ಹುಡುಗ ಹಾಗೂ ಹುಡುಗಿ ಇಬ್ಬರೂ ಆತ್ಮಹತ್ಯೆಗೆ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ಕೋಳಿವಾಡದ ಹುಡುಗ ಪ್ರಮೋದ ಮಾರುತಿ ಜಾಲಣ್ಣವರ ಮುಳಗುಂದಕ್ಕೆ ಕಾಲೇಜಿಗೆ ಹೋಗಿದ್ದವ ನಿನ್ನೆ ಅಲ್ಲಿಯೇ ಕ್ರಿಮಿನಾಶಕ ಸೇವಿಸಿದ್ದಾನೆನ್ನಲಾಗಿದೆ. ಕ್ರಿಮಿನಾಶಕ ಎಣ್ಣೆ ಸೇವಿಸಿದ್ದನ್ನು ಈತನ ಗೆಳೆಯರು ನೋಡಿ ಗದಗ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆನ್ನಲಾಗಿದೆ. ಈ ಕುರಿತು ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಳಿವಾಡದ ಅಜ್ಜಿಯ ಮನೆಯಲ್ಲಿ ಇದ್ದು ಮುಳಗುಂದಕ್ಕೆ ಕಾಲೇಜಿಗೆ ಹೋಗುತ್ತಿದ್ದ ಆ ಹುಡುಗಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದು ಕುಟುಂಬದವರು ನೋಡಿದಾಗ ಅಲ್ಪ ಉಸಿರಾಟ ಇರುವುದು ಕಂಡು ಬಂದಿದ್ದು ಕಿಮ್ಸ್ಗೆ ಕರೆ ತಂದಿದ್ದು, ಐಸಿಯುದಲ್ಲಿ ಇಟ್ಟಿದ್ದಾರೆನ್ನಲಾಗಿದೆ.ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.
ಈ ಇಬ್ಬರ ಮಧ್ಯೆ ಪ್ರೇಮಾಂಕುರ ಇತ್ತೆನ್ನಲಾಗಿದ್ದಲ್ಲದೇ ನಿನ್ನೆ ಸಂಪ್ರದಾಯ ದಿನಾಚರಣೆ ಹಿನ್ನೆಲೆಯಲ್ಲಿ ಚೂಡಿದಾರ ಕೊಡಿಸಿದ್ದ ಹುಡುಗ ತಾನು ಕೊಡಿಸಿದ್ದ ಬಟ್ಟೆಯ ಜತೆ ನೀಡಿದ್ದ ವೇಲ್ ಧರಿಸದೇ ಇದ್ದುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ. ಇಬ್ಬರ ಮಧ್ಯೆ ಸ್ವಲ್ಪ ಮಾತುಕತೆಯೂ ನಡೆದಿತ್ತೆಂಬ ಗುಸು ಗುಸು ಇದೆ. ಇಬ್ಬರೂ ಅಲ್ಪವಯಿಗಳಾಗಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಈ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸುತ್ತಿದ್ದಾರೆ.