ಹುಬ್ಬಳ್ಳಿ-ಧಾರವಾಡ ಸುದ್ದಿ
ರೌಡಿಶೀಟರ್‌ಗಳ ನಿದ್ದೆಗೆಡಿಸಿದ ಪೊಲೀಸರು

ರೌಡಿಶೀಟರ್‌ಗಳ ನಿದ್ದೆಗೆಡಿಸಿದ ಪೊಲೀಸರು

2 ಮಾರಕಾಸ್ತ್ರ, 80  ಮೊಬೈಲ್, 14 ಬೈಕ್ ವಶ

ಹುಬ್ಬಳ್ಳಿ-ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಪರೇಡ್ ನಡೆಸಿ ಎಚ್ಚರಿಕೆ

ಹುಬ್ಬಳ್ಳಿ/ಧಾರವಾಡ : ನಗರ ಕಮಿಷನರೇಟ್‌ನ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳ ಮನೆಗಳ ಮೇಲೆ ಬೆಳಗಿನ ಜಾವ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ನಂತರ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರೇಡ್ ನಡೆಸಲಾಗಿದ್ದು, 737 ರೌಡಿಶೀಟರ್ ಗಳು, 20  ಡ್ರಗ್ಸ್ ಪೆಡ್ಲರ್‌ಗಳು, 227 ಡ್ರಗ್ಸ್ ಬಳಕೆದಾರರು, 72 ಎಂಓಬಿಗಳು ಸೇರಿದಂತೆ ಒಟ್ಟು 1056 ಜನ ಪರೇಡ್‌ನಲ್ಲಿ ಹಾಜರಿದ್ದರು.

ಒಟ್ಟು 1158 ರೌಡಿಶೀಟರ್‌ಗಳ ಮನೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ದಾಳಿ ವೇಳೆ 80 ಮೊಬೈಲ್‌ಗಳು, 14 ದ್ವಿಚಕ್ರ ವಾಹನಗಳು ಮತ್ತು 2 ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ರಾತ್ರಿಯ ವೇಳೆ ನುಮಾನಾಸ್ಪದವಾಗಿ ತಿರುಗಾಡುತ್ತಾ, ಒಂದೇ ಬೈಕ್‌ನಲ್ಲಿ ಮೂರು ಮಂದಿ ತಿರುಗಾಡುವವರು, ರೌಡಿಶೀಟರ್‌ಗಳು, ಗಾಂಜಾ ಪೆಡ್ಲರುಗಳು, ಕಾನೂನು ಸುವ್ಯವಸ್ಥೆ ಹಾಳು ಮಾಡುವವರು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದವರನ್ನು ಗುರುತಿಸಿ, ಅವರ ಮನೆಯ ಮೇಲೆ ಬೆಳಿಗ್ಗೆಯೇ ದಾಳಿ ಮಾಡಿ ಅಂತವರನ್ನು ಕರೆತಂದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಲಾಯಿತು. ಧಾರವಾಡ ಎಸಿಪಿ ಪ್ರಶಾಂತ್ ಸಿದ್ದನಗೌಡರ ನೇತೃತ್ವದಲ್ಲಿ ಆಯಾ ಪೊಲೀಸ್ ಠಾಣೆಗಳ ಸಿಪಿಐ, ಪಿಎಸ್‌ಐ, ಸಿಬ್ಬಂದಿಗಳು ರೌಡಿಶೀಟರ್‌ಗಳನ್ನು ಕರೆತಂದು ವಿಚಾರಣೆ ನಡೆಸಿದರು.


ಎಸಿಪಿ ಪ್ರಶಾಂತ್ ಸಿದ್ದನಗೌಡರು, ಸಿಪಿಐಗಳಾದ ನಾಗೇಶ್ ಕಾಡದೇವರ, ಸಂಗಮೇಶ್ ದಿಡಗಿನಾಳ, ದಯಾನಂದ್ ಶೇಗುಣಸಿ ಮತ್ತು ಎಲ್ಲಾ ಪಿಎಸ್‌ಐ, ಎಎಸ್‌ಐಗಳು, ಸಿಬ್ಬಂದಿಗಳು ಇದ್ದರು.

administrator

Related Articles

Leave a Reply

Your email address will not be published. Required fields are marked *