ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸುವದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರೂ ಆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಕೆಲ ವಾರ್ಡಗಳಲ್ಲಿ ತೀವ್ರ ಪೈಪೋಟಿಯಿರುವುದು ಸ್ವತಃ ಬಿಜೆಪಿ ಮುಖಂಡರಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ದಿ.20ಕ್ಕೆ ಮೊದಲ ಪಟ್ಟಿ ಹೊರಬೀಳಬಹುದು ಎನ್ನಲಾಗುತ್ತಿದೆ.
ಒಟ್ಟು 82 ವಾರ್ಡಗಳ ಅಭ್ಯರ್ಥಿಗಳ ಪಟ್ಟಿಯನ್ನು ಎರಡು ಅಥವಾ ಅವಶ್ಯ ಬಿದ್ದಲ್ಲಿ ಮೂರು ಹಂತಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ ಎನ್ನಲಾಗಿದೆ.
ಮಹಾನಗರ ಪಾಲಿಕೆ ಚುನಾವಣೆಗೆ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಇವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದ್ದು ಈಗ ಆ ಸಮಿತಿಗೆ ಮಾಜಿ ಡಿಸಿಎಂ ಲಕ್ಷö್ಮಣ ಸವದಿಯವರನ್ನು ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಸೇರ್ಪಡೆ ಮಾಡಿದ್ದಾರೆ.
ಈಗಾಗಲೇ ಮಂಗಳವಾರ ಮೊದಲ ಕೋರ ಕಮೀಟಿ ಸಭೆ ನಡೆದಿದ್ದು ನಾಳೆ ಸಾಯಂಕಾಲ ಅಥವಾ ನಾಡಿದ್ದು ಇನ್ನೊಮ್ಮೆ ಕೋರ ಕಮೀಟಿಯಲ್ಲಿ ಚರ್ಚಿಸಿ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಈಗಾಗಲೇ ಬಿಜೆಪಿ ಆಂತರಿಕ ಸಮೀಕ್ಷೆಯೊಂದನ್ನು ವಾರ್ಡವಾರು ನಡೆಸಿದ್ದು ಅದರನ್ವಯ ಟಿಕೆಟ್ ನಿಶ್ಚಿತ ನೀಡಲಿದೆ ಎನ್ನಲಾಗಿದೆ. ಬಹಿರಂಗವಾಗಿ ಗುಂಪುಗಾರಿಕೆ ಇಲ್ಲವಾದರೂ ಕೇಸರಿಪಡೆಯಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡವಾಗಿದ್ದು, ಪಟ್ಟಿ ಹೊರ ಬಂದ ನಂತರ ಕೆಲ ವಾರ್ಡಗಳಲ್ಲಿ ‘ಬಂಡಾಯ ಸ್ಪೋಟ’ ನಿಶ್ಚಿತ ಎನ್ನಲಾಗಿದೆ.