ಧಾರವಾಡ: ಇಲ್ಲಿನ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದಲ್ಲಿ ನಿಯಮ ಉಲ್ಲಂಘಿಸಿ ಅಧಿಕಾರಿಗಳನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಅಧಿಸೂಚನೆಯನ್ನು ಧಾರವಾಡ ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಕೃಷಿ ವಿಶ್ವವಿದ್ಯಾಲಯದಲ್ಲಿನ ಕುಲಸಚಿವ, ಆಡಳಿತಾಧಿಕಾರಿ, ಸಂಶೋಧನಾ ನಿರ್ದೇಶಕ, ವಿಸ್ತರಣಾ ನಿರ್ದೇಶಕ, ಆಸ್ತಿ ಅಧಿಕಾರಿ, ಡೀನ್‌ಗಳ ನೇಮಕಾತಿಯಲ್ಲಿ ಜೇಷ್ಠತೆ ಮತ್ತಿತರ ನಿಯಮಗಳನ್ನು ಪಾಲಿಸದ ವಿಶ್ವವಿದ್ಯಾಲಯದ ಕ್ರಮವನ್ನು ಡಾ.ರಾಮನಗೌಡ ಪಾಟೀಲ ಮತ್ತು ಶಿಕ್ಷಕರ ಕಲ್ಯಾಣ ಸಂಘ ಪ್ರಶ್ನಿಸಿ ಕಳೆದ ನವ್ಹಂಬರ್ ೪ ರಂದು ಧಾರವಾಡ ಹೈಕೋರ್ಟ್‌ನ ಮೆಟ್ಟಿಲೇರಿದ್ದರು.
ಅರ್ಜಿದಾರರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು, ಸ್ವಾಯತ್ತ ಸಂಸ್ಥೇಗಳಾಗಿರುವ ವಿಶ್ವವಿದ್ಯಾಲದಲ್ಲಿನ ಅಧಿಕಾರಿಗಳ ನೇಮಕಾತಿಯಲ್ಲಿ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಆಡಳಿತ ಮಂಡಳಿ ಅಂಗೀಕರಿಸಿದ ನಿಯಮಗಳನ್ವಯ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಕುಲಪತಿಗಳು ಹೊರಡಿಸಿದ ಅಧಿಸೂಚನೆ ಸರಿಯಲ್ಲ ಎಂದ ನ್ಯಾಯಾಲಯವು, ಹೊಸ ಅಧಿಸೂಚನೆ ಹೊರಡಿಸಿ ನಂತರ ನಿಯಮಾವಳಿಗಳನ್ವಯ ನೇಮಕಾತಿ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಹೇಮಂತ ಚನಗೌಡರ ಅವರ ನೇತೃತ್ವದ ಏಕಸದಸ್ಯ ಪೀಠ ಕಳೆದ ದಿ.೪ ರಂದು ಆದೇಶ ಹೊರಡಿಸಿದೆ. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಜೆ.ಎ.ಗಂಗಾಧರ ವಾದ ಮಂಡಿಸಿದ್ದರು.
ಕೃಷಿ ವಿಶ್ವದ್ಯಾಲಯದಲ್ಲಿನ ಅಧಿಕಾರಿಗಳ ನೇಮಕಾತಿಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಕುಲಪತಿ ಡಾ.ಮಹದೇವ ಚೆಟ್ಟಿ ಮನಬಂದಂತೆ ಅಧಿಕಾರಿಗಳನ್ನು ನೇಮಕಾತಿ ಮಾಡಿದ್ದರು.ವಿಶೇಷ ಎಂದರೆ ನಿವೃತ್ತ ಪ್ರಾಧ್ಯಾಪಕರೊಬ್ಬರನ್ನು ಶಿಕ್ಷಣ ನಿರ್ದೇಶಕರಾಗಿ ನೇಮಿಸಿದ್ದಾರೆ. ಈ ಕಾರಣಗಳಿಂದ ಇದೀಗ ನ್ಯಾಯಾಲಯವು ಚೆಟ್ಟಿಯವರ ದುರಾಡಳಿತಕ್ಕೆ ಬ್ರೇಕ್ ಹಾಕಿದೆ.
ಇನ್ನೊಂದೆಡೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಕುಲಪತಿಗಳ ವಿರುದ್ಧ ಪ್ರಾಧ್ಯಾಪಕರು ತಮ್ಮ ಆಕ್ರೋಷವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಧ್ಯಸ್ಥಿಕೆ ವಹಿಸಿ ಕುಲಪತಿಗಳ ಮತ್ತು ಪ್ರಾಧ್ಯಾಪಕರ ಸಭೆ ಕೂಡ ನಡೆಸಿದ್ದರು. ಆದರೆ, ಇದಾವುದಕ್ಕೂ ಚೆಟ್ಟಿ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿಯವರು ಕುಲಪತಿಗಳ ವರ್ತನೆ ಬಗ್ಗೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರು. ಈ ಕುರಿತು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಪ್ರಾಧ್ಯಾಪಕರಿಗೆ ನ್ಯಾಯ ಒದಗಿಸಿಕೊಡುವಂತೆ ತಿಳಿಸಿದ್ದಾರೆ.