ಹುಬ್ಬಳ್ಳಿ-ಧಾರವಾಡ ಸುದ್ದಿ
ತವರಿನಲ್ಲಿ ವಿನಯ ಸಂಚಲನ!

ತವರಿನಲ್ಲಿ ವಿನಯ ಸಂಚಲನ!

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಇಂದು ಇಲ್ಲಿನ ಮಿನಿವಿಧಾನಸೌದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗೆ ಕರೆ ತರಲಾಗಿತ್ತು.


ಯೋಗೀಶಗೌಡ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ೯ ತಿಂಗಳಿನಿ0ದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ ಕುಲಕರ್ಣಿ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ವಿನಯ ನ್ಯಾಯಾಲಯದ ಅನುಮತಿ ಮೇರೆಗೆ ಬೆಳಗ್ಗೆ ಬೆಳಗಾವಿಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ವಿನಯ ಅವರನ್ನು ಉಪ ನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಬರಲಾಗಿತ್ತು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿನಯ ಅವರು ತಮ್ಮ ಕೆಲವು ಆಸ್ತಿಗಳನ್ನು ಪತ್ನಿ ಶಿವಲೀಲಾ ಅವರಿಗೆ ಸಾಮಾನ್ಯ ಅಧಿಕಾರ ಪತ್ರ (ಜನರಲ್ ಪಾವರ್ ಆಫ್ ಅಟಾರ್ನಿ) ಮಾಡಿಕೊಟ್ಟರು. ವಿನಯ ಕುಲಕರ್ಣಿ ಅವರ ಪರ ವಕೀಲ ಅಮೃತ ಬಳ್ಳೊಳ್ಳಿ ಅವರು ಜಿಪಿಎಗೆ ಸಂಬ0ಧಿಸಿದ ದಾಖಲಾತಿಗಳನ್ನು ಸಿದ್ದಪಡಿಸಿದ್ದರು.


ಈ ಸಂದರ್ಭದಲ್ಲಿ ಸಹೋದರ ವಿಜಯ ಕುಲಕರ್ಣಿ, ಮಗ ಹೇಮಂತ, ಮಗಳು ವೈಶಾಲಿ, ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಮುಖಂಡರಾದ ದೀಪಕ ಚಿಂಚೋರೆ, ಯಾಸೀನ್ ಹಾವೇರಿಪೇಟ್, ನಿಜಾಮ ರಾಹಿ, ಆಪ್ತ ಸಹಾಯಕ ಪ್ರಶಾಂತ ಕೇಕರೆ ಇನ್ನಿತರರು ಉಪಸ್ಥಿತರಿದ್ದರು.
ಬಳಿಕ ಹಳೇ ಡಿಎಸ್‌ಪಿ ಕ್ರಾಸ್ ಬಳಿಯಿರುವ ಬ್ಯಾಂಕ್ ಇಂಡಿಯಾ ಶಾಖೆಗೆ ತೆರಳಿ, ತಮ್ಮ ಮತ್ತು ಪತ್ನಿಯ ಹೆಸರಿನಲ್ಲಿ ಹೊಸದಾಗಿ ಜಂಟಿ ಖಾತೆ ತೆರೆದರು. ನಂತರ ಅವರನ್ನು ಪೊಲೀಸರು ಮತ್ತೆ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋದರು.


ಉಪ ನೋಂದಣಾಧಿಕಾರಿ ಕಚೇರಿ ಇರುವ ಮಿನಿ ವಿಧಾನಸೌಧಕ್ಕೆ ಅಪಾರ ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಉಪ ನೋಂದಣಾಧಿಕಾರಿ ಕಚೇರಿಯಿಂದ ಹೊರ ಬಂದ ವಿನಯ ಕುಲಕರ್ಣಿ ಅವರು ತಮ್ಮ ಅಭಿಮಾನಿಗಳತ್ತ ಕೈಬೀಸಿದರು.ಆಗ ಅಭಿಮಾನಿಗಳು ಮತ್ತು ಕಾರ್ಯಕರ್ತರು ವಿನಯ ಪರ ಜೈಘೋಷ ಈ ಸಂದರ್ಭದಲ್ಲಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ಮುಂದಾದರು.
ಮಿನಿ ವಿಧಾನಸೌಧದ ಬಳಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ನಾಗರಾಜ ಗೌರಿ ಸೇರಿದಂತೆ ಅನೇಕ ಮುಖಂಡರು ನಿಂತಿದ್ದರು.
ಡಿಸಿಪಿ ರಾಮರಾಜನ್, ಎಸಿಪಿ ಅನುಷಾ ಜಿ., ಇನ್ಸಪೆಕ್ಟರಗಳಾದ ರಮೇಶ ಹೂಗಾರ, ಮಹಾಂತೇಶ ಬಸಾಪೂರ, ಎಸ್.ಎಂ.ನಾಯ್ಕರ್ ನೇತೃತ್ವದಲ್ಲಿ ಮತ್ತು ಪೊಲೀಸ ಸಿಬ್ಬಂದಿ ಬಂದೋಬಸ್ತ್ ಕೈಕೊಳ್ಳಲಾಗಿತ್ತು.

administrator

Related Articles

Leave a Reply

Your email address will not be published. Required fields are marked *